ಕಟಕ್ (ಒಡಿಶಾ): ಟೆಸ್ಟ್ ಸರಣಿ ಸೋಲಿಗೆ ಏಕದಿನ ಸರಣಿ ಗೆಲುವಿನೊಂದಿಗೆ ಸೇಡು ತೀರಿಸಿಕೊಂಡಿರುವ ಆತಿಥೇಯ ಭಾರತ ತಂಡ ಇದೀಗ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ (T20 Cricket) ಸಜ್ಜಾಗಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್ ಸಿದ್ಧತೆಯ ದೃಷ್ಟಿಯಿಂದ ಈ ಸರಣಿ ಮಹತ್ವದ್ದಾಗಿದ್ದು, ಸೂರ್ಯಕುಮಾರ್ ಯಾದವ್ ಪಡೆ ಗೆಲುವಿನ ಲಯ ಕಾಯ್ದುಕೊಳ್ಳುವ ಹಂಬಲದಲ್ಲಿದೆ. ಕಟಕ್ನ ಬಾರಾಬತಿ ಸ್ಟೇಡಿಯಂನಲ್ಲಿ ಮಂಗಳವಾರ ಸರಣಿಯ ಮೊದಲ ಚುಟುಕು ಕ್ರಿಕೆಟ್ ಕದನ ನಡೆಯಲಿದೆ. ಫಿಟ್ ಆಗಿ ಮರಳಿರುವ ಉಪನಾಯಕ ಶುಭಮಾನ್ ಗಿಲ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಬಲ ತುಂಬುವ ನಿರೀಕ್ಷೆ ಇದೆ.
ಮುಂದಿನ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ತವರಿನಲ್ಲೇ ನಡೆಯಲಿರುವ ವಿಶ್ವಕಪ್ಗೆ ಮುನ್ನ ಭಾರತ 10 ಟಿ20 ಪಂದ್ಯಗಳನ್ನಷ್ಟೇ ಆಡಲಿದೆ. ಈ ಸರಣಿಯ ನಂತರ ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧ ಮತ್ತೆ 5 ಟಿ20 ಪಂದ್ಯಗಳನ್ನು ಆಡಲಿದೆ. ಹೀಗಾಗಿ ಟಿ20 ವಿಶ್ವಕಪ್ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನ ಆರಂಭಿಸುವ ಮುನ್ನ ತಂಡ ಸಂಯೋಜನೆಯನ್ನು ಅಂತಿಮಗೊಳಿಸಲು ಭಾರತಕ್ಕೆ ಇದು ಅತ್ಯುತ್ತಮ ಅವಕಾಶವೆನಿಸಿದೆ.
ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ಬಳಿಕ ಟೆಸ್ಟ್-ಏಕದಿನದಲ್ಲಿ ಮಿಶ್ರ ಲ ಕಂಡಿರುವ ಭಾರತ ತಂಡ, ಟಿ20 ಕ್ರಿಕೆಟ್ನಲ್ಲಿ ಭರ್ಜರಿ ಯಶಸ್ಸನ್ನೇ ಸಾಧಿಸಿದೆ. 2024ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡ ಆಡಿರುವ 26 ಟಿ20 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಸೋಲು ಕಂಡಿದೆ. ಈ ಪೈಕಿ ಒಂದೂ ಟಿ20 ಸರಣಿ ಸೋತಿಲ್ಲ. ಕಳೆದ ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ಟಿ20ಯಲ್ಲಿ ಭಾರತ ಸತತ 7 ಜಯದೊಂದಿಗೆ ಅಜೇಯವಾಗಿ ಪ್ರಶಸ್ತಿ ಜಯಿಸಿತ್ತು. ಇನ್ನು ಟಿ20 ವಿಶ್ವಕಪ್ವರೆಗೂ ಭಾರತ ಇದೇ ಲಯವನ್ನು ಕಾಯ್ದುಕೊಳ್ಳಬೇಕಾಗಿದೆ.
ಮತ್ತೊಂದೆಡೆ ಟಿ20 ವಿಶ್ವಕಪ್ ರನ್ನರ್ಅಪ್ ಸ್ಥಾನದ ಬಳಿಕ ಹರಿಣಗಳ ಚುಟುಕು ಕ್ರಿಕೆಟ್ ನಿರ್ವಹಣೆ ನೀರಸವೆನಿಸಿದೆ. ನಂತರ ಆಡಿರುವ 25 ಪಂದ್ಯಗಳಲ್ಲಿ 9ರಲ್ಲಿ ಮಾತ್ರ ಗೆದ್ದು, 16ರಲ್ಲಿ ಸೋತಿದೆ. ಈ ಪಂದ್ಯಗಳಲ್ಲಿ ಬಲಿಷ್ಠ ತಂಡವನ್ನು ಕಣಕ್ಕಿಳಿಸದಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಹೀಗಾಗಿ ಏಡನ್ ಮಾರ್ಕ್ರಮ್ ಬಳಗಕ್ಕೂ ಟಿ20 ವಿಶ್ವಕಪ್ಗೆ ಮುನ್ನ ತಂಡ ಸಂಯೋಜನೆ ಸರಿಪಡಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶವೆನಿಸಿದೆ.
ಗಿಲ್, ಹಾರ್ದಿಕ್ ಫಿಟ್
ದಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ವೇಳೆ ಕುತ್ತಿಗೆ ನೋವಿಗೆ ಒಳಗಾಗಿದ್ದ ಶುಭಮಾನ್ ಗಿಲ್ (Shubhman Gill) ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಜತೆಗೆ ಮುಂಬರುವ ದಿನಗಳಲ್ಲಿ ಸತತ ಟಿ20 ಪಂದ್ಯಗಳನ್ನು (ಟಿ20 ವಿಶ್ವಕಪ್, ಐಪಿಎಲ್) ಆಡಲು ಸಜ್ಜಾಗಿದ್ದಾರೆ. ಇದುವರೆಗೆ ಆಡಿರುವ 33 ಟಿ20 ಪಂದ್ಯಗಳಲ್ಲಿ ಕೇವಲ 29.89ರ ಸರಾಸರಿಯಲ್ಲಿ 837 ರನ್ ಮಾತ್ರ ಗಳಿಸಿರುವ ಗಿಲ್ಗೆ ತನ್ನ ದಾಖಲೆ ಸುಧಾರಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶವೂ ಆಗಿದೆ. ಇನ್ನು ಹಾರ್ದಿಕ್ ಪಾಂಡ್ಯ ಗಾಯದಿಂದಾಗಿ ಏಷ್ಯಾಕಪ್ ಫೈನಲ್ನಿಂದ ಹೊರಗುಳಿದ ಬಳಿಕ ಇದೇ ಮೊದಲ ಬಾರಿಗೆ ಕಣಕ್ಕಿಳಿಯಲಿದ್ದಾರೆ. ಈಗಾಗಲೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಆಡಿ ತನ್ನ ಫಿಟ್ನೆಸ್ ಕೂಡ ಸಾಬೀತುಪಡಿಸಿದ್ದಾರೆ. ಟಿ20 ವಿಶ್ವಕಪ್ಗೆ ಮುನ್ನ ಅವರ ವಾಪಸಾತಿ ಭಾರತ ತಂಡಕ್ಕೆ ಹೆಚ್ಚಿನ ಸಮತೋಲನವನ್ನೂ ತರಲಿದೆ.
ಸೂರ್ಯ ಫಾರ್ಮ್ ಕಳವಳ
ಟಿ20 ತಂಡದಲ್ಲಿ ಭಾರತಕ್ಕಿರುವ ಪ್ರಮುಖ ಚಿಂತೆ, ನಾಯಕ ಸೂರ್ಯಕುಮಾರ್ ಅವರ ಬ್ಯಾಟಿಂಗ್ ಫಾರ್ಮ್ನದ್ದಾಗಿದೆ. ಕಳೆದ ವರ್ಷ ಜುಲೈನಲ್ಲಿ ಟಿ20 ತಂಡದ ನಾಯಕರಾದ ಬಳಿಕ ಆಡಿರುವ 15 ಇನಿಂಗ್ಸ್ಗಳಲ್ಲಿ ಅವರು ಕೇವಲ 15.33ರ ಸರಾಸರಿಯಲ್ಲಿ 184 ರನ್ ಮಾತ್ರ ಗಳಿಸಿದ್ದಾರೆ. ಕಳೆದ 20 ಪಂದ್ಯಗಳಲ್ಲಿ ಅವರು ಒಂದೂ ಅರ್ಧಶತಕವನ್ನೂ ಬಾರಿಸಿಲ್ಲ. ಅವರ ಸ್ಟ್ರೆಕ್ರೇಟ್ ಕೂಡ 187ರಿಂದ 127ಕ್ಕೆ ಕುಸಿದಿದೆ. ಇತ್ತೀಚೆಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಆಡಿದಾಗಲೂ 5 ಪಂದ್ಯಗಳಲ್ಲಿ ಒಂದೂ ಅರ್ಧಶತಕವಿಲ್ಲದೆ 165 ರನ್ಗಳನ್ನಷ್ಟೇ ಗಳಿಸಿದ್ದರು. ಮುಂದಿನ 10 ಟಿ20 ಪಂದ್ಯಗಳಲ್ಲಿ ಅವರು ಲಯಕ್ಕೆ ಮರಳಿದರೆ, ತವರಿನ ವಿಶ್ವಕಪ್ನಲ್ಲಿ ಆತ್ಮವಿಶ್ವಾಸದಿಂದ ಹಾಲಿ ಚಾಂಪಿಯನ್ ತಂಡವನ್ನು ಮುನ್ನಡೆಸಬಹುದಾಗಿದೆ.
ಟೀಮ್ ನ್ಯೂಸ್:
ಭಾರತ: ಆಡುವ 11ರ ಬಳಗದಲ್ಲಿ ಹೆಚ್ಚಿನ ಗೊಂದಲಗಳಿಲ್ಲ. ಆದರೆ ವಿಕೆಟ್ ಕೀಪರ್ ಸ್ಥಾನದ ಬಗ್ಗೆ ಸ್ವಲ್ಪ ಗೊಂದಲವಿದೆ. ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮ ನಡುವೆ ಕೀಪರ್ ಸ್ಥಾನಕ್ಕೆ ನಿಕಟ ಪೈಪೋಟಿ ಇದೆ. ಕಳೆದ ಆಸೀಸ್ ವಿರುದ್ಧ ಸರಣಿಯಲ್ಲಿ ಸ್ಯಾಮ್ಸನ್ ಒಮ್ಮೆ ಮಾತ್ರ ಬ್ಯಾಟಿಂಗ್ ಅವಕಾಶ ಪಡೆದಿದ್ದರೆ, ಸರಣಿಯ ಕೊನೇ 3 ಪಂದ್ಯಗಳಲ್ಲಿ ಜಿತೇಶ್ ಆಡಿದ್ದರು. ಸ್ಯಾಮ್ಸನ್ ಟಿ20ಯಲ್ಲಿ ಆರಂಭಿಕರಾಗಿ 3 ಶತಕ ಸಿಡಿಸಿದ ಸಾಧನೆ ಮಾಡಿದ್ದರೂ, ಗಿಲ್ ವಾಪಸಾತಿಯಿಂದ ಆರಂಭಿಕನ ಸ್ಥಾನ ಖಾಲಿ ಇಲ್ಲದೆ ಇರುವುದೇ ಅವರಿಗೆ ದೊಡ್ಡ ಹಿನ್ನಡೆ ಎನಿಸಿದೆ. ಆದರೆ ಇತ್ತೀಚೆಗೆ ದೇಶೀಯ ಟಿ20ಯಲ್ಲಿ ಸ್ಯಾಮ್ಸನ್ 2 ಅರ್ಧಶತಕ ಸಿಡಿಸಿ ಮಿಂಚಿದ್ದರೆ, ಜಿತೇಶ್ 6 ಇನಿಂಗ್ಸ್ಗಳಲ್ಲಿ 41 ರನ್ ಗಳಿಸಿದ್ದೇ ಗರಿಷ್ಠವಾಗಿತ್ತು. ಜತೆಗೆ 8ನೇ ಕ್ರಮಾಂಕಕ್ಕೆ ಹರ್ಷಿತ್-ವಾಷಿಂಗ್ಟನ್-ಶಿವಂ ದುಬೆ ನಡುವೆ ತ್ರಿಕೋನ ಸ್ಪರ್ಧೆ ಇದೆ.
ದ. ಆಫ್ರಿಕಾ: ಕಳೆದ ವರ್ಷದ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ವಿರುದ್ಧ ಮುಗ್ಗರಿಸಿದ್ದ ದ. ಆಫ್ರಿಕಾ ಇದೀಗ ಸೇಡಿನ ತವಕದಲ್ಲಿದೆ. ವೇಗಿ ಅನ್ರಿಚ್ ನೋರ್ಕಿಯಾ ಫಿಟ್ ಆಗಿ ಮರಳುತ್ತಿರುವುದು ಹರಿಣಗಳಿಗೆ ಬಲ ತುಂಬಲಿದೆ. ಮಾರ್ಕೋ ಯಾನ್ಸೆನ್ ಆಲ್ರೌಂಡರ್ ಆಗಿ ಮಿಂಚುತ್ತಿರುವುದು ತಂಡಕ್ಕೆ ಹೆಚ್ಚಿನ ಸಮತೋಲನ ತಂದಿದೆ. ಸ್ಪಿನ್ನರ್ ಕೇಶವ್ ಮಹಾರಾಜ್ ಟಿ20ಗೂ ಮರಳುತ್ತಿದ್ದರೆ, ಟೋನಿ ಡಿ ಜಾರ್ಜಿ ಮತ್ತು ಯುವ ವೇಗಿ ಕ್ವೆನಾ ಮಾಕ ಗಾಯದಿಂದಾಗಿ ಅಲಭ್ಯರಾಗಿದ್ದಾರೆ.
*2026ರ ಟಿ20 ವಿಶ್ವಕಪ್ಗೆ ನಮ್ಮ ಸಿದ್ಧತೆ, 2024ರ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಆರಂಭಗೊಂಡಿತ್ತು. ಆಗಿನಿಂದ ನಾವು ಹಲವಾರು ಪ್ರಯೋಗಗಳನ್ನು ನಡೆಸಿದ್ದೇವೆ. ಕಳೆದ 5&6 ಸರಣಿಗಳಿಂದ ನಾವು ಬಹುತೇಕ ಒಂದೇ ಬಗೆಯ ತಂಡ ಸಂಯೋಜನೆಯೊಂದಿಗೆ ಆಡಿದ್ದೇವೆ. ಎಲ್ಲವೂ ಸರಿಯಾಗಿ ನಡೆಯುತ್ತಿದ್ದು, ನಾವು ಇದೇ ರೀತಿಯಲ್ಲಿ ಸಾಗಲಿದ್ದೇವೆ.
*3: ಭಾರತ ತಂಡ ಕಟಕ್ನಲ್ಲಿ ಇದುವರೆಗೆ ಆಡಿರುವ 3 ಟಿ20 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿದ್ದು, 2ರಲ್ಲಿ ಸೋಲು ಅನುಭವಿಸಿದೆ. ಈ ಎರಡೂ ಸೋಲು ದಣ ಆಫ್ರಿಕಾ ವಿರುದ್ಧವೇ ಬಂದಿವೆ.
ಭಾರತಕ್ಕೆ ಶೇ. 10 ದಂಡ
ರಾಯ್ಪುರದಲ್ಲಿ ನಡೆದ ದ. ಆಫ್ರಿಕಾ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿನ ನಿಧಾನಗತಿ ಓವರ್ಗಾಗಿ ಭಾರತ ತಂಡಕ್ಕೆ ಐಸಿಸಿ, ಪಂದ್ಯ ಸಂಭಾವನೆಯ ಶೇ. 10 ದಂಡ ವಿಧಿಸಿದೆ. ಕೆಎಲ್ ರಾಹುಲ್ ಬಳಗ ಸೋಲು ಕಂಡ ಆ ಪಂದ್ಯದಲ್ಲಿ ನಿಗದಿತ ಸಮಯದ ವೇಳೆ 2 ಓವರ್ ಹಿಂದೆ ಬಿದ್ದಿತ್ತು. ಹೀಗಾಗಿ ಐಸಿಸಿ ನೀತಿಸಂಹಿತೆಯ ಪ್ರಕಾರ, ಆಟಗಾರರಿಗೆ ಪ್ರತಿ ಓವರ್ಗೆ ಶೇ. 5ರಂತೆ ದಂಡ ಶಿಕ್ಷೆ ವಿಧಿಸಲಾಗಿದೆ.
*100: ಜಸ್ಪ್ರೀತ್ ಬುಮ್ರಾ ಇನ್ನು 1 ಮತ್ತು ಹಾರ್ದಿಕ್ ಪಾಂಡ್ಯ ಇನ್ನು 2 ವಿಕೆಟ್ ಪಡೆದರೆ, ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ ಪೂರೈಸಲಿದ್ದಾರೆ.
*13: ದ. ಆಫ್ರಿಕಾ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೂ, ಭಾರತ ವಿರುದ್ಧ ಗರಿಷ್ಠ ಟಿ20 ಪಂದ್ಯ ಗೆದ್ದ ತಂಡವೆನಿಸಲಿದೆ. ಸದ್ಯ ಆಸ್ಟ್ರೆಲಿಯಾ, ಇಂಗ್ಲೆಂಡ್ ಜತೆ ಗರಿಷ್ಠ ತಲಾ 12 ಗೆಲುವಿನ ದಾಖಲೆ ಹಂಚಿಕೊಂಡಿದೆ.