ನಾಳೆ ನಮ್ಮ ಬುಡಕ್ಕೆ ಬೆಂಕಿ ಬೀಳುತ್ತೆ! ಕಾವ್ಯ ಮಾರನ್​ಗೆ ಮುಖಕ್ಕೆ ಹೊಡೆದಂತೆ ಹೇಳಿದ ಸುನಿಲ್​ ಗವಾಸ್ಕರ್​

ಕಾವ್ಯ ಮಾರನ್​ ವಿವಾದ
ಕಾವ್ಯ ಮಾರನ್​ ವಿವಾದ
Published on

ಪ್ರಮುಖ ಮುಖ್ಯಾಂಶಗಳು

  • ಎಸ್​ಆರ್​ಎಚ್ ಸಹ​ ಮಾಲೀಕರಾದ ಕಾವ್ಯಾ ಮಾರನ್ ನಿರ್ಧಾರಕ್ಕೆ ಛೀಮಾರಿ
  • ಸನ್​ರೈಸರ್ಸ್​ ಲೀಡ್ಸ್​ ತಂಡಕ್ಕೆ ಪಾಕ್​ ಆಟಗಾರನ ಖರೀದಿ ವಿರುದ್ಧ ಆಕ್ರೋಶ
  • ಕಾವ್ಯ ಮಾರನ್​ ಮುಖಕ್ಕೆ ಹೊಡೆದಂತೆ ಮಾತನಾಡಿದ ಸುನಿಲ್ ಗವಾಸ್ಕರ್
ನವದೆಹಲಿ: ಈ ಬಾರಿ 'ದಿ ಹಂಡ್ರೆಡ್'​ 2026ರ ಟಿ20 ಲೀಗ್​ ಇಂಗ್ಲೆಂಡ್​ನಲ್ಲಿ ನಡೆಯಲಿದ್ದು, ಇತ್ತೀಚೆಗಷ್ಟೇ ಹರಾಜು ಪ್ರಕ್ರಿಯೆ ನಡೆಯಿತು. ಈ ಆಕ್ಷನ್​ನಲ್ಲಿ ಕಾವ್ಯ ಮಾರನ್​ ಸಹ ಒಡೆತನದ ಸನ್​ರೈಸರ್ಸ್​ ಲೀಡ್ಸ್​ ಫ್ರಾಂಚೈಸಿಯು ಪಾಕ್​ ಸ್ಪಿನ್ನರ್ ಅಬ್ರಾರ್​ ಅಹ್ಮದ್​ನನ್ನು ಬರೋಬ್ಬರಿ 2.34 ಕೋಟಿ (190,000 ಪೌಂಡ್‌ಗಳು) ರೂ.ಗೆ ಖರೀದಿಸಿತು. ಈ ವಿಚಾರ ಹೊರಬೀಳುತ್ತಿದ್ದಂತೆ ಸದ್ಯ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಕಾವ್ಯ ವಿರುದ್ಧ ತೀವ್ರ ಕಿಡಿಕಾರುತ್ತಿದ್ದಾರೆ. ಈ ಸಾಲಿಗೆ ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಸೇರ್ಪಡೆಯಾಗಿದ್ದಾರೆ.  
ಹರಾಜು ಪ್ರಕ್ರಿಯೆಯಲ್ಲಿ ಅಬ್ರಾರ್​ ಮಾತ್ರವಲ್ಲದೇ, ಉಸ್ಮಾನ್​ ತಾರೀಕ್​ರಂತಹ ಮತ್ತೊಂದಷ್ಟು ಪಾಕ್​ ಕ್ರಿಕೆಟಿಗರನ್ನು ತಂಡಕ್ಕೆ ಖರೀದಿ ಮಾಡಲು ಕಾವ್ಯ ಮತ್ತು ಫ್ರಾಂಚೈಸಿಯ ಕೋಚ್​ ಡೆನಿಯಲ್ ವೆಟೋರಿ ಮೊದಲೇ ಪ್ಲ್ಯಾನ್​ ಮಾಡಿದ್ದರು. ಆದರೆ, ಯಾವಾಗ ಅಬ್ರಾರ್​ ಅಹ್ಮದ್​ರನ್ನು ಆಯ್ಕೆ ಮಾಡಿದ್ದು ತಿಳಿಯಿಯೋ, ಆ ಕ್ಷಣವೇ ಸನ್​ರೈಸರ್ಸ್​ ಲೀಡ್ಸ್​ ವಿರುದ್ಧ ಛೀಮಾರಿಗಳು ಜೋರಾಯಿತು. ಇದು ತೀವ್ರವಾಗುತ್ತಿದ್ದಂತೆ ಎಲಾನ್​ ಮಸ್ಕ್​ ಒಡೆತನದ ಎಕ್ಸ್​ ಕೂಡ ಫ್ರಾಂಚೈಸಿಯ ಅಧಿಕೃತ ಖಾತೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದು ಹಲವರಲ್ಲಿ ಭಾರೀ ಅಚ್ಚರಿ ಮೂಡಿಸಿತು. 
ಈ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಮಿಡ್​-ಡೇ ಅಂಕಣದಲ್ಲಿ ಬರೆದ ಗವಾಸ್ಕರ್​, 2008ರ ಮುಂಬೈ ತಾಜ್​ ಅಟ್ಯಾಕ್​ ಅನ್ನು ಗಮನದಲ್ಲಿಟ್ಟುಕೊಂಡೇ ಭಾರತೀಯ ಕ್ರಿಕೆಟ್​ ಮಂಡಳಿ ತನ್ನ ನಿಲುವನ್ನು ತೆಗೆದುಕೊಂಡಿರುವುದು. ಪಾಕ್​ ಉಗ್ರರ ದಾಳಿಯ ಬೆನ್ನಲ್ಲೇ ಪಾಕಿಸ್ತಾನ ಆಟಗಾರರನ್ನು ಐಪಿಎಲ್​ನಿಂದ ಬಹಿಷ್ಕರಿಸಿರುವುದು. ಆದರೆ, ನಮ್ಮದೇ ಒಂದು ಫ್ರಾಂಚೈಸಿ ಅಲ್ಲಿನ ಆಟಗಾರನನ್ನು ಖರೀದಿ ಮಾಡಿರುವುದು ನಿಜಕ್ಕೂ ಆಶ್ಚರ್ಯಕರ ಎಂದರು. 
ನೀವಿಲ್ಲಿ ತುಂಬ ದೊಡ್ಡ ತಪ್ಪು ಮಾಡಿದ್ದೀರಿ. ಪಾಕ್​ ಆಟಗಾರರನ್ನು ಖರೀದಿಸುವ ಮೂಲಕ ನಮ್ಮ ಹಣವನ್ನು ಅವರಿಗೆ ಕೊಡುತ್ತಿದ್ದೀರಿ. ಅದರ ತೆರಿಗೆ ಹಣ ಅವರ ಸರ್ಕಾರಕ್ಕೆ ಹೋಗುತ್ತದೆ. ಆ ಹಣದಿಂದ, ಅವರು ಆಯುಧಗಳು ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುತ್ತಾರೆ. ನೀವು ಪರೋಕ್ಷವಾಗಿ ಭಾರತೀಯ ಸೈನಿಕರು ಮತ್ತು ನಾಗರಿಕರನ್ನು ಜೀವಕ್ಕೆ ಕುತ್ತು ತಂದಿಡುತ್ತಿದ್ದೀರಿ ಎಂಬ ಅರಿವು ನಿಮಗಿದೆಯೇ? ಎಂದು ಭಾರೀ ಆಕ್ರೋಶ ಹೊರಹಾಕಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net