ಈತನಿಗೆ ಇಷ್ಟೊಂದು ಹೈಪ್​... ವಂಡರ್​ ಕಿಡ್​ 'ಬೇಬಿ ಬಾಸ್​' ಬಗ್ಗೆ ಟೀಮ್​ ಇಂಡಿಯಾ ದಿಗ್ಗಜನ ಅಚ್ಚರಿ ಹೇಳಿಕೆ

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾ ಪುರುಷರ ಸೀನಿಯರ್​ ತಂಡಕ್ಕೆ ವೈಭವ್​ ಸೂರ್ಯವಂಶಿ ಆಯ್ಕೆ
  • 15 ವರ್ಷದ ವಂಡರ್​ ಕಿಡ್​ ಬಗ್ಗೆ ಟೀಮ್ ಇಂಡಿಯಾ ದಿಗ್ಗಜನ ಹೇಳಿಕೆ
Vaibhav Sooryavanshi: ಇತ್ತೀಚೆಗಷ್ಟೇ ಆರ್​ಸಿಬಿಯ ಅದ್ಧೂರಿ ಗೆಲುವಿನೊಂದಿಗೆ ಮುಕ್ತಾಯಗೊಂಡ ಐಪಿಎಲ್​ 19ನೇ ಆವೃತ್ತಿಯಲ್ಲಿ 15 ವರ್ಷದ ಹುಡುಗನೊಬ್ಬ ಅಂತಾರಾಷ್ಟ್ರೀಯ ಹಾಗೂ ಅನುಭವಿ ಬೌಲರ್​ಗಳನ್ನು ಮನಬಂದಂತೆ ಬೆಂಡೆತ್ತಿದ ದೃಶ್ಯ ಈಗಲೂ ಕ್ರಿಕೆಟ್​ ಪ್ರಿಯರ ಕಣ್ಣಿನಲ್ಲಿ ಕಟ್ಟಿದಂತಿದೆ. ಆ ಅಬ್ಬರದ ಸಿಕ್ಸರ್​ಗಳನ್ನು ಬಾರಿಸಿದ ವೈಭವದ ಬ್ಯಾಟಿಂಗ್​ ಶೈಲಿಯನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಆತನ ಸ್ಫೋಟಕ ಬ್ಯಾಟಿಂಗ್​ಗೆ ಸ್ವತಃ ಕ್ರಿಕೆಟ್​ ದಿಗ್ಗಜರೇ ಅಕ್ಷರಶಃ ಬೆರಗಾಗಿ ಹೋಗಿದ್ದಾರೆ.
ಯಾವುದೇ ಬೌಲರ್ ಬರಲಿ, ಎಷ್ಟೇ ವೇಗದಲ್ಲಿ ಬೌಲ್​ ಮಾಡಲಿ ಮೈದಾನದಲ್ಲಿ ಬೌಂಡರಿ, ಸಿಕ್ಸರ್​ಗಳನ್ನು ಹಿಗ್ಗಾಮುಗ್ಗಾ ಬಾರಿಸುವ ವೈಭವ್ ಸೂರ್ಯವಂಶಿ ಅದಾಗಲೇ ಟೀಮ್ ಇಂಡಿಯಾ ಪುರುಷ ಸೀನಿಯರ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದು ನಿಜಕ್ಕೂ ಹುಬ್ಬೇರಿಸುವ ಸಂಗತಿಯಾಗಿದೆ. ಭವಿಷ್ಯದ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​ಗೆ ಈಗಾಗಲೇ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಈತನನ್ನು ಆಡಿಸುತ್ತಿರುವ ರಾಜಸ್ಥಾನ ರಾಯಲ್ಸ್​ಗೆ ವೈಭವ್​ ಲಕ್ಕಿ ಚಾರ್ಮ್​ ಆಗಿದ್ದಾರೆ. ಮತ್ತೊಂದೆಡೆ, ಹಿರಿಯರ ತಂಡದಲ್ಲಿ ಆಡುವ ಅವಕಾಶ ಪಡೆದಿರುವ ವಂಡರ್​ ಕಿಡ್​​ ಬಗ್ಗೆ ಟೀಮ್ ಇಂಡಿಯಾ​ದ ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗ​ ಕಪಿಲ್ ದೇವ್​ ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ. ​
ಸಚಿನ್​ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿರುವ ವೈಭವ್ ಸೂರ್ಯವಂಶಿ ಇದೀಗ​ ಐರ್ಲೆಂಡ್​ ಮತ್ತು ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ಸೀನಿಯರ್​ ತಂಡಕ್ಕೆ ಆಯ್ಕೆ ಆಗಿರುವುದು ಹಲವರಿಗೆ ಖುಷಿ ತಂದಿದೆ. ಮತ್ತೊಂದೆಡೆ, ಅತಿ ಕಿರಿಯ ಆಟಗಾರನ ಮೇಲೆ ದುಪ್ಪಟ್ಟು ಭರವಸೆ, ನಿರೀಕ್ಷೆಗಳನ್ನು ಇಟ್ಟುಕೊಂಡು ಚೀರಾಡುತ್ತಿರುವ ಕ್ರಿಕೆಟ್​ ಅಭಿಮಾನಿಗಳಿಗೆ ಸದ್ಯ ಕಪಿಲ್​ ದೇವ್​ ಮಹತ್ವದ ಕಿವಿಮಾತು ನೀಡಿದ್ದಾರೆ.
ಸ್ಕೈ ಸ್ಫೋರ್ಟ್ಸ್ ಕ್ರಿಕೆಟ್​ ಶೋ​ ಜೊತೆ ಮಾತನಾಡಿದ ಅವರು, ಆತ ಒಬ್ಬ ವಿಶೇಷ ಪ್ರತಿಭೆ. ಅಂತಾರಾಷ್ಟ್ರೀಯ ತಂಡಗಳಲ್ಲಿ ಆಡುವುದು ಅಷ್ಟು ಸುಲಭವಲ್ಲ. ವೈಭವ್​ಗೆ ಸ್ವಲ್ಪ ಸಮಯ ಕೊಡಿ. ಈಗ ಹೊಂದಿಕೊಳ್ಳಲು ಆತನಿಗೂ ಸಮಯದ ಅಗತ್ಯವಿದೆ. ತನ್ನ ಸಾಮರ್ಥ್ಯವೇನು ಅನ್ನೋದನ್ನು ಈಗಾಗಲೇ ಸೂರ್ಯವಂಶಿ ಇಡೀ ಜಗತ್ತಿಗೆ ತೋರಿಸಿದ್ದಾನೆ. ಅದಕ್ಕೆ ನನಗೂ ಖುಷಿ ಇದೆ. ಆದರೆ, ಇಷ್ಟೊಂದು ಹೈಪ್​! ಅತಿಯಾದ ನಿರೀಕ್ಷೆ ಸರಿಯಲ್ಲ. ಅದು ವೈಭವ್​ ಆಟಕ್ಕೆ ದೊಡ್ಡ ಪೆಟ್ಟು ನೀಡಲಿದೆ. ಅವನ ಮೇಲೆ ಅಪಾರ ನಿರೀಕ್ಷೆಗಳ ಒತ್ತಡ ಹೇರಲಿದೆ ಎಂದರು.
ಈ ಸಮಯದಲ್ಲಿ ವೈಭವ್​ ಸೂರ್ಯವಂಶಿ ಮೇಲೆ ಅಷ್ಟೊಂದು ನಿರೀಕ್ಷೆಗಳನ್ನು ಹೇರುವುದು ಸರಿಯಲ್ಲ. ಕ್ಲಬ್​ ಮತ್ತು ಕಂಟ್ರಿ ಕ್ರಿಕೆಟ್​ ನಡುವಿನ ವ್ಯತ್ಯಾಸವನ್ನು ನಿಧಾನವಾಗಿ ಆತ ಅರ್ಥ ಮಾಡಿಕೊಳ್ಳುತ್ತಾನೆ. ಈಗ ಎಲ್ಲರೂ ವೈಭವ್​ಗೆ ಕೊಡಬೇಕಿರುವುದು ಸಮಯ ಅಷ್ಟೇ ಎಂದು ಹೇಳಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net