ಬಿರುಗಾಳಿಯ ಬ್ಯಾಟಿಂಗ್​ ಏನಾದ್ರೂ ನಿಲ್ಲಿಸಿದ್ರೆ.... 'ಬೇಬಿ ಬಾಸ್' ವೈಭವ್​ಗೆ ಮಾಜಿ ಕ್ರಿಕೆಟಿಗನಿಂದ ಖಡಕ್ ವಾರ್ನಿಂಗ್​

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್ 2026ರ​ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಯುವ ಸೆನ್ಸೇಷನ್
  • ಅತೀ ಕಿರಿಯ ವಯಸ್ಸಿನಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ, ಕೀರ್ತಿ ಸಂಪಾದಿಸಿದ ವೈಭವ್ ಸೂರ್ಯವಂಶಿ
  • ಸ್ಟಾರ್​ ಯುವ ಕ್ರಿಕೆಟಿಗನಿಗೆ ಮಾಜಿ ಕ್ರಿಕೆಟಿಗನಿಂದ ಎಚ್ಚರಿಕೆ
Vaibhav Sooryavanshi: ಪ್ರಸ್ತುತ ನಡೆಯುತ್ತಿರುವ 19ನೇ ಐಪಿಎಲ್​ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಯುವ ಸೆನ್ಸೇಷನ್ ವೈಭವ್​ ಸೂರ್ಯವಂಶಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿರುವುದು ಬಹುತೇಕ ಕ್ರಿಕೆಟ್​ ಪ್ರೇಮಿಗಳಿಗೆ ಗೊತ್ತೇ ಇದೆ. ಈಗಾಗಲೇ ತಮ್ಮ ಬ್ಯಾಟಿಂಗ್​ ಬತ್ತಳಿಕೆಯಿಂದ ಎರಡು ಆಕರ್ಷಕ ಅರ್ಧಶತಕಗಳು ಸಿಡಿಸಿರುವ 'ಬೇಬಿ ಬಾಸ್'​, ಅಂತಾರಾಷ್ಟ್ರೀಯ ಮತ್ತು ಅನುಭವಿ ವಿಶ್ವದರ್ಜೆಯ ಬೌಲರ್​ಗಳಿಗೆ ಬೆವರಿಳಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರ. ಕೇವಲ ಐಪಿಎಲ್​ನಲ್ಲಿ ಮಾತ್ರವಲ್ಲದೇ, ಅಂಡರ್​-19 ತಂಡದಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿರುವ ವೈಭವ್​, ಈಗಾಗಲೇ ಒಂದಷ್ಟು ಬ್ರ್ಯಾಂಡ್​ಗಳಿಗೆ ಸಹಿ ಹಾಕಿದ್ದಾರೆ. ಸದ್ಯ ಇದೇ ಈಗ ಮಾಜಿ ಕ್ರಿಕೆಟಿಗನ ಎಚ್ಚರಿಕೆಗೆ ಕಾರಣವಾಗಿದೆ.
ಅತೀ ಚಿಕ್ಕ ವಯಸ್ಸಿಗೆ ದೊಡ್ಡ ಹೆಸರು ಮಾಡಿರುವ ವೈಭವ್​, ಅಲ್ಪ ಸಮಯದಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಜನಪ್ರಿಯತೆ ಮೇಲಕ್ಕೇರುತ್ತಿದ್ದಂತೆ ಒಂದಷ್ಟು ಬ್ರ್ಯಾಂಡ್​ಗಳ ಆ್ಯಡ್​ಗೆ ಸೂರ್ಯವಂಶಿ ಓಕೆ ಎಂದಿದ್ದಾರೆ. ಯುವ ಆಟಗಾರನ ಬೆಳವಣಿಗೆ ಕಂಡು ಕ್ರಿಕ್​ಬಜ್​ ಜೊತೆ ಮಾತನಾಡಿದ ಮಾಜಿ ನ್ಯೂಜಿಲೆಂಡ್​ ಆಟಗಾರ ಸಿಮನ್​ ಡೌಲ್​, ಇಂದು ಯಾವ ಬ್ರ್ಯಾಂಡ್​ಗಳು ಅವನನ್ನು ಹುಡುಕಿಕೊಂಡು ಬಂದಿವೆಯೋ, ಅದೇ ಸಂಸ್ಥೆಗಳು ಅವನಿಂದ ಉತ್ತಮ ಪ್ರದರ್ಶನ ಬರಲಿಲ್ಲ ಎಂದರೆ, ಖಂಡಿತ ಕೈಬಿಡುವುದು ಖಚಿತ ಎಂದು ಹೇಳಿದ್ದಾರೆ.
ವೈಭವ್ ಅದಾಗಲೇ ಒಬ್ಬ ಸೂಪರ್​ಸ್ಟಾರ್​. ಆತನ ಪ್ರದರ್ಶನ ಹೀಗೆ ಮುಂದುವರಿದರೆ, ಸೂಪರ್​ಸ್ಟಾರ್​ ಪಟ್ಟ ಉಳಿಯಲಿದೆ. ಈಗಾಗಲೇ ಸೂರ್ಯವಂಶಿಯನ್ನು ಹಲವು ಮ್ಯಾನೇಜ್​ಮೆಂಟ್​ ಕಂಪನಿಗಳು ಹುಡುಕಿಕೊಂಡು ಬರುತ್ತಿವೆ. ಈ ಯುವ ಕ್ರಿಕೆಟಿಗನಿಂದ ನಾವೆಷ್ಟು ದುಡ್ಡು ಮಾಡಬಹುದು ಎಂಬ ಲೆಕ್ಕಾಚಾರಗಳಿಗೆ ಇಳಿದಿವೆ. ಇಲ್ಲಿ ಅಸಲಿ ಸತ್ಯವೇನು ಎಂದರೆ, ಇದೇ ವೈಭವ್ ಏನಾದರೂ ಬಿರುಗಾಳಿಯ ಬ್ಯಾಟಿಂಗ್ ನಿಲ್ಲಿಸಿದರೆ, ಅದೇ ಸಂಸ್ಥೆಗಳು ಬೇರೆ ಒಂದು ಮುಖವನ್ನು ಹುಡುಕುಲು ಪ್ರಾರಂಭಿಸುತ್ತೆ ಎಂದಿದ್ದಾರೆ ಡೌಲ್​.
ಡೌಲ್​ ಮಾತಿಗೆ ಒಪ್ಪಿಗೆ ಸೂಚಿಸಿದ ಭಾರತೀಯ ಜನಪ್ರಿಯ ಕಮೆಂಟೇಟರ್​ ಹರ್ಷ ಭೋಗ್ಲೆ, ವೈಭವ್​ ರೀತಿಯೇ ಸಚಿನ್ ತೆಂಡೂಲ್ಕರ್ ಅವರು ಚಿಕ್ಕ ವಯಸ್ಸಿಗೆ ಕ್ರಿಕೆಟ್​ಗೆ ಬಂದರು. ಆದರೆ, ಇಲ್ಲಿ ಸಚಿನ್ ತಮ್ಮ ಕುಟುಂಬದಿಂದ ಬಲವಾದ ಬೆಂಬಲವನ್ನು ಪಡೆದಿದ್ದರು. ಅವರು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದಾರೋ, ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು. ಸೂರ್ಯವಂಶಿಗೂ ಭವಿಷ್ಯದಲ್ಲಿ ಅವರ ಕುಟುಂಬದಿಂದ ಇದೇ ರೀತಿಯ ಬೆಂಬಲದ ಅಗತ್ಯವಿದೆ ಎಂದು ಹೇಳಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net