ಕರ್ನಾಟಕದ ಕ್ರಿಕೆಟಿಗ ಕೆ. ಗೌತಮ್​ ವಿದಾಯ

ಕರ್ನಾಟಕದ ಕ್ರಿಕೆಟಿಗ ಕೆ. ಗೌತಮ್​ ವಿದಾಯ
ಕರ್ನಾಟಕದ ಕ್ರಿಕೆಟಿಗ ಕೆ. ಗೌತಮ್​ ವಿದಾಯ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕರ್ನಾಟಕದ ಆಫ್​ ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ಕೃಷ್ಣಪ್ಪ ಗೌತಮ್​ (k gowtham) ಸೋಮವಾರ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದರು. ಈ ಮೂಲಕ 14 ವರ್ಷಗಳ ವೃತ್ತೀಜಿವನಕ್ಕೆ ತೆರೆ ಎಳೆದರು. ಕರ್ನಾಟಕ ಪರ ವಿವಿಧ ಕ್ರಿಕೆಟ್​ ಪ್ರಕಾರದಲ್ಲಿ ಒಟ್ಟು 394 ವಿಕೆಟ್​ ಕಬಳಿಸಿರುವ ಅವರು, 2021ರಲ್ಲಿ ಭಾರತ ಪರ ಏಕೈಕ ಏಕದಿನ ಪಂದ್ಯ ಆಡುವ ಅವಕಾಶ ಪಡೆದಿದ್ದರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ 37 ವರ್ಷದ ಕೆ. ಗೌತಮ್​, "ನನಗೆ ಬೇರೆ ರಾಜ್ಯಗಳ ಪರ ಆಡುವ ಆರ್​ಗಳು ಬಂದಿದ್ದರೂ, ನಾನು ಎಂದಿಗೂ ದೇಶೀಯ ಕ್ರಿಕೆಟ್​ನಲ್ಲಿ ಕರ್ನಾಟಕ ಹೊರತಾಗಿ ಬೇರೆ ತಂಡದ ಪರ ಆಡುವ ಯೋಚನೆ ಮಾಡಲಿಲ್ಲ. ಕರ್ನಾಟಕದ ಕ್ರಿಕೆಟಿಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ' ಎಂದು ತಿಳಿಸಿದರು. ಕೆಎಸ್​ಸಿಎ ಅಧ್ಯಕ್ಷ ವೆಂಕಟೇಶ್​ ಪ್ರಸಾದ್​, ಉಪಾಧ್ಯಕ್ಷ ಸುಜಿತ್​ ಸೋಮಸುಂದರ್​, ಕಾರ್ಯದರ್ಶಿ ಸಂತೋಷ್​ ಮೆನನ್​ ಈ ವೇಳೆ ಹಾಜರಿದ್ದು, ಮುಂದಿನ ಇನಿಂಗ್ಸ್​ಗೆ ಶುಭ ಹಾರೈಸಿದರು.

ಹರ್ಭಜನ್​ ಸಿಂಗ್​ ಅವರ ಬೌಲಿಂಗ್​ ಶೈಲಿಯ ಹೋಲಿಕೆಯಿಂದಾಗಿ ಸಹ&ಆಟಗಾರರಿಂದ "ಬಜ್ಜಿ' ಎಂದೇ ಪ್ರೀತಿಯಿಂದ ಕರೆಯಲ್ಪಡುವ ಗೌತಮ್​, ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​, ರಾಜಸ್ಥಾನ ರಾಯಲ್ಸ್​, ಪಂಜಾಬ್​ ಕಿಂಗ್ಸ್​, ಚೆನ್ನೈ ಸೂಪರ್​ಕಿಂಗ್ಸ್​ ಮತ್ತು ಲಖನೌ ಸೂಪರ್​ಜೈಂಟ್ಸ್​ ತಂಡಗಳ ಪರ ಆಡಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 36 ಪಂದ್ಯ ಆಡಿದ್ದು, 21 ವಿಕೆಟ್​ ಕಬಳಿಸಿದ್ದಾರೆ.

ಗೌತಮ್​ 2021ರ ಐಪಿಎಲ್​ ಹರಾಜಿನಲ್ಲಿ 9.25 ಕೋಟಿ ರೂ.ಗೆ ಸಿಎಸ್​ಕೆ ತಂಡ ಸೇರಿದ್ದರು. ಇದು ಆಗ ಅನ್​ಕ್ಯಾಪ್ಡ್​ (ದೇಶೀಯ ಕ್ರಿಕೆಟಿಗ) ಕ್ರಿಕೆಟಿಗನೊಬ್ಬ ಪಡೆದ ಗರಿಷ್ಠ ಬಿಡ್​ ಎನಿಸಿತ್ತು. ಅದಕ್ಕೆ ಮುನ್ನ 6.2 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್​ ಪರ ಆಡಿದ್ದರು.

ಮಾಜಿ ಕಬಡ್ಡಿ ಆಟಗಾರ ಎಂ. ಕೃಷ್ಣಪ್ಪ ಅವರ ಪುತ್ರನಾದ ಗೌತಮ್​, 2012ರಲ್ಲೇ ಕರ್ನಾಟಕ ಪರ ರಣಜಿಗೆ ಪದಾರ್ಪಣೆ ಮಾಡಿದ್ದರೂ, ಬಳಿಕ ಹೊರಬಿದ್ದಿದ್ದರು. 2016ರಲ್ಲಿ ಪುನರಾಗಮನ ಕಂಡಿದ್ದ ಅವರು, ಆಡಿದ ಮೊದಲ 3 ಪಂದ್ಯಗಳಲ್ಲೇ 18 ವಿಕೆಟ್​ ಕಬಳಿಸಿ ಸ್ಥಾನ ಭದ್ರಪಡಿಸಿಕೊಂಡಿದ್ದರು. 2019&20ರ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಫೈನಲ್​ನಲ್ಲಿ ತಮಿಳುನಾಡು ವಿರುದ್ಧದ ಫೈನಲ್​ನ ಕೊನೇ ಓವರ್​ನಲ್ಲಿ 13 ರನ್​ ರಸಿ ಕರ್ನಾಟಕಕ್ಕೆ 1 ರನ್​ನಿಂದ ರೋಚಕ ಗೆಲುವು ತಂದುಕೊಟ್ಟಿದ್ದರು. 2019ರ ರಣಜಿ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 8 ವಿಕೆಟ್​ ಗೊಂಚಲು ಪಡೆದು 26 ರನ್​ ಗೆಲುವು ತಂದುಕೊಟ್ಟಿದ್ದರು. 2023ರ ಫೆಬ್ರವರಿಯಲ್ಲಿ ಅವರು ಕರ್ನಾಟಕ ಪರ ಕೊನೇ ರಣಜಿ ಪಂದ್ಯವಾಡಿದ್ದರು.

ಕೆ. ಗೌತಮ್​ ನಿವೃತ್ತಿಯ ನಂತರ ವೀಕ್ಷಕ ವಿವರಣೆಕಾರ ಮತ್ತು ತರಬೇತುದಾರರಾಗಿ ಕಾರ್ಯನಿರ್ವಹಿಸುವತ್ತ ಗಮನಹರಿಸಲಿದ್ದಾರೆ. ಹಾಲಿ ವರ್ಷದ ಮಹಾರಾಜ ಟ್ರೋಫಿ ವೇಳೆ ಅವರು ಮೈಸೂರು ವಾರಿಯರ್ಸ್​ ತಂಡದ ಮೆಂಟರ್​ ಆಗಿದ್ದರು.
ಭಾರತ ಪರ ಏಕೈಕ ಪಂದ್ಯ
ಕೆ. ಗೌತಮ್​ 2021ರ ಜುಲೈ 23ರಂದು ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಪರ ಏಕೈಕ ಪಂದ್ಯವನ್ನು ಆಡಿದ್ದರು. ಶಿಖರ್​ ಧವನ್​ ಸಾರಥ್ಯದಲ್ಲಿ ಆಡಿದ ಈ ಏಕೈಕ ಏಕದಿನ ಪಂದ್ಯದಲ್ಲಿ 2 ರನ್​ ಮತ್ತು 1 ವಿಕೆಟ್​ ಗಳಿಸಿದ್ದರು. 33ನೇ ವಯಸ್ಸಿನಲ್ಲಿ ಅವರು ಭಾರತ ಪರ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದರು. ಅದೇ ವರ್ಷ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಅವರು ಭಾರತ ತಂಡದ ನೆಟ್​ ಬೌಲರ್​ ಕೂಡ ಆಗಿದ್ದರು.
ಕೆಪಿಎಲ್​ನಲ್ಲಿ ಶತಕ/8 ವಿಕೆಟ್​
ಕೆ. ಗೌತಮ್​ 2019ರ ಕರ್ನಾಟಕ ಪ್ರೀಮಿಯರ್​ ಲೀಗ್​ ಪಂದ್ಯವೊಂದರಲ್ಲಿ ಸರ್ವಶ್ರೇಷ್ಠ ಆಲ್ರೌಂಡ್​ ನಿರ್ವಹಣೆ ಪ್ರದರ್ಶಿಸಿದ್ದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆ ಪಂದ್ಯದಲ್ಲಿ ಅವರು ಬಳ್ಳಾರಿ ಟಸ್ಕರ್ಸ್​ ಪರ 56 ಎಸೆತಗಳಲ್ಲಿ 7 ಬೌಂಡರಿ, 13 ಸಿಕ್ಸರ್​ ಸಹಿತ ಅಜೇಯ 134 ರನ್​ ಸಿಡಿಸಿದ್ದರು. ಬಳಿಕ ಬೌಲಿಂಗ್​ನಲ್ಲಿ 4 ಓವರ್​ಗಳ ದಾಳಿಯಲ್ಲಿ 15 ರನ್​ ನೀಡಿ 8 ವಿಕೆಟ್​ ಕಬಳಿಸುವ ಮೂಲಕ ದಾಖಲೆ ಬರೆದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net