ಕ್ರಿಕೆಟ್​ನಲ್ಲಿ ರಾಜಕೀಯ ಬೆರೆಸುವುದು ಬೇಡ! ಕೆಕೆಆರ್​ ಮೇಲೆ ಒತ್ತಾಯ ಹೇರಿದ್ದು ಬಿಸಿಸಿಐ: ಮಾಜಿ ಕ್ರಿಕೆಟಿಗ ಕಿಡಿ

ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್
ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್
Published on

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್​ ಕೈಬಿಟ್ಟ ಕೆಕೆಆರ್​
  • ಬಿಸಿಸಿಐ ನಿರ್ದೇಶನದ ಮೇರೆಗೆ 2026ರ ಐಪಿಎಲ್​ನಿಂದ ಕೈಬಿಟ್ಟ ಕೋಲ್ಕತ ನೈಟ್​ ರೈಡರ್ಸ್​
  • ಕ್ರಿಕೆಟ್​ನಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದ ಮಾಜಿ ಕ್ರಿಕೆಟಿಗ
ನವದೆಹಲಿ: ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್​ ಸೇರಿ ಒಂದಷ್ಟು ಕ್ರಿಕೆಟಿಗರನ್ನು ಐಪಿಎಲ್​ನಿಂದ ಕೈಬಿಡಿ ಎಂಬ ಕೂಗುಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ. ಕೋಲ್ಕತ ನೈಟ್​ ರೈಡರ್ಸ್​ (ಕೆಕೆಆರ್​) ತಂಡದ ಮಾಲೀಕ ಹಾಗೂ ನಟ ಶಾರುಖ್​ ಖಾನ್ ​ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು, ಬಾಂಗ್ಲಾದೇಶದಲ್ಲಿ ಹಿಂದುಗಳ ಕೊಲೆ ಆಗುತ್ತಿರುವಾಗ, ಅಲ್ಲಿನ ಕ್ರಿಕೆಟಿಗರನ್ನು ಇಲ್ಲಿ ಆಡಿಸುವುದು ಎಷ್ಟು ಸರಿ? ಇದೆಲ್ಲ ಇಲ್ಲಿಗೆ ಅಂತ್ಯಗೊಳ್ಳಬೇಕು ಎಂದು ಕಿಡಿಕಾರಿದ್ದರು. ಅಂತೆಯೇ, ಬಿಸಿಸಿಐ ನಿರ್ದೇಶನದಂತೆ ಕೆಕೆಆರ್ ಇದೀಗ ಮುಸ್ತಾಫಿಜುರ್​ರನ್ನು 2026ರ ಐಪಿಎಲ್​ನಿಂದ ಕೈಬಿಟ್ಟಿದೆ. ಆದ್ರೆ, ಈ ನಿರ್ಧಾರಕ್ಕೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಮದನ್​ ಲಾಲ್​ ಕಿಡಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮದನ್​ ಲಾಲ್​, "ರಾಜಕೀಯ ಪ್ರಭಾವ ಕ್ರಿಕೆಟ್‌ನಲ್ಲಿ ಹೆಚ್ಚಾಗಿವೆ. ಇದರಿಂದ ಆಟಗಾರರು ದುರ್ಬಲರಾಗುತ್ತಿದ್ದಾರೆ ಎಂಬುದನ್ನು ಪರಿಸ್ಥಿತಿಗಳು ಹೇಳುತ್ತಿವೆ. ಬಾಂಗ್ಲಾ ಕ್ರಿಕೆಟಿಗ ಮುಸ್ತುಫಿಜುರ್​ ರೆಹಮಾನ್​ರನ್ನು ಕೈಬಿಡುವಂತೆ ಬಿಸಿಸಿಐ ಕೆಕೆಆರ್​ ಮೇಲೆ ಒತ್ತಾಯ ಹೇರಿದೆ. ಇದನ್ನು ಪ್ರಶ್ನಿಸಲು ಸಾಧ್ಯವಾಗದ ಕಾರಣ, ಫ್ರಾಂಚೈಸಿಯ ಮಾಲೀಕರಾಗಲಿ ಅಥವಾ ಇನ್ಯಾರಾದರೂ ಆಗಲಿ, ಆದೇಶದಂತೆ ವೇಗಿಯನ್ನು 2026ರ ಐಪಿಎಲ್​ನಿಂದ ಕೈಬಿಟ್ಟಿದೆ" ಎಂದಿದ್ದಾರೆ.  
ನನಗಿಲ್ಲಿ ಒಂದು ಅರ್ಥವಾಗ್ತಿಲ್ಲ. ಅದೇನೆಂದರೆ, ಕ್ರೀಡೆ ಎತ್ತ ಸಾಗುತ್ತಿದೆ. ಕ್ರಿಕೆಟ್​ನಲ್ಲಿ ರಾಜಕೀಯ ಬೆರೆಸುವುದು ಏಕೆ? ಹೌದು, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಗಳು ತೀವ್ರ ಬೇಸರ, ನೋವು ತಂದಿದೆ. ಅದರಲ್ಲಿ ಅನುಮಾನವಿಲ್ಲ. ಆದರೆ, ಇದರಿಂದ ಆಟಗಾರರಿಗೆ ಸಂಕಷ್ಟ ತಂದಿಡುವುದು ಸರಿಯಲ್ಲ. ರಾಜಕೀಯ ಎಂದಿಗೂ ಕ್ರೀಡೆಯಲ್ಲಿ ಬೆರೆಯಬಾರದು" ಎಂದಿದ್ದಾರೆ.

ಸಿಎಸ್​ಕೆ, ಡೆಲ್ಲಿ ಕ್ಯಾಪಿಟಲ್ಸ್​...

2025ರ ಡಿಸೆಂಬರ್​ನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವು ಮುಸ್ತಾಫಿಜುರ್ ರೆಹಮಾನ್ ಅವರನ್ನು 9.20 ಕೋಟಿ ರೂ.ಗೆ ಖರೀದಿ ಮಾಡಿತು. ಈ ಹಿಂದೆ ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಟ್ ತಂಡಗಳ ಪರ ಆಡಿರುವ ಎಡಗೈ ವೇಗಿ, ಇತರೆ ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಮುಸ್ತುಫಿಜುರ್​ಗೆ ನಮ್ಮ ತಂಡದಲ್ಲಿ ಸ್ಥಾನ ಕೊಡಬೇಕು ಎಂದು ಮೊದಲೇ ಕಣ್ಣಿಟ್ಟಿದ್ದ ಕೆಕೆಆರ್​, ಅಂತೆಯೇ ಅವರನ್ನು ಬಿಡ್ಡಿಂಗ್​ನಲ್ಲಿ ಖರೀದಿಸಿ, ಒಪ್ಪಂದ ಮಾಡಿಕೊಂಡಿತು. ಆದರೆ, ಆ ಲೆಕ್ಕಾಚಾರಗಳೆಲ್ಲವೂ ಇದೀಗ ತಲೆಕೆಳಗಾಗಿವೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net