ಮೊದಲ ಏಕದಿನ ಪಂದ್ಯ, ಇಬ್ಬರು ದಿಗ್ಗಜರ ದಾಖಲೆ! 'ರೋಕೊ' ಹೆಸರಿಗೆ ಸೇರಿದ ಐತಿಹಾಸಿಕ ರೆಕಾರ್ಡ್​ಗಳು

ರೋಹಿತ್ ಶರ್ಮ, ವಿರಾಟ್​ ಕೊಹ್ಲಿ
ರೋಹಿತ್ ಶರ್ಮ, ವಿರಾಟ್​ ಕೊಹ್ಲಿ
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ
  • ಮೈದಾನದಲ್ಲಿ ರೋಕೊ ಜೋಡಿ ಅಬ್ಬರ
  • ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಹೆಸರು ಸೇರಿದ ದಾಖಲೆಗಳು
ಜಾರ್ಖಂಡ್​: ಮೂರು ಪಂದ್ಯಗಳ ಏಕದಿನ ಸರಣಿಯ ಭಾಗವಾಗಿ ಇಂದು (ನ.30) ರಾಂಚಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ತಂಡದ ಪರ 'ರೋಕೊ' ಜೋಡಿ ನಡೆಸಿದ ಅಬ್ಬರದ ಬ್ಯಾಟಿಂಗ್ ಸದ್ಯ​ ಹರಿಣರ ಪಡೆಯ ಬೌಲರ್​ಗಳ ಬೆವರಿಳಿಸಿತು. 50 ಓವರ್​​ ಅಂತ್ಯಕ್ಕೆ ಟೀಮ್ ಇಂಡಿಯಾ 8 ವಿಕೆಟ್​ ಕಳೆದುಕೊಂಡು 349 ರನ್​ ಕಲೆಹಾಕಿದ್ದು, ಈ ಸವಾಲಿನ ಗುರಿಯನ್ನು ದಕ್ಷಿಣ ಆಫ್ರಿಕಾ ಸುಲಭವಾಗಿ ತಲುಪಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.   
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹರಿಣರ ಪಡೆ, ಟೀಮ್ ಇಂಡಿಯಾಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿದೆ. ಅಂತೆಯೇ ಕ್ರೀಸ್​ಗೆ ಬಂದ ಆರಂಭಿಕ ಬ್ಯಾಟರ್​ಗಳ ಪೈಕಿ ಯಶಸ್ವಿ ಜೈಸ್ವಾಲ್​ ಹೆಚ್ಚು ಸಮಯ ಕ್ರೀಸ್​ಗೆ ಅಂಟದೆ, ಪೆವಿಲಿಯನ್​ ಹಾದಿ ಹಿಡಿದರು. ಮೊದಲ ವಿಕೆಟ್​ ಪತನದ ಬೆನ್ನಲ್ಲೇ ಅಖಾಡಕ್ಕಿಳಿದ ವಿರಾಟ್​ ಕೊಹ್ಲಿ, ಹಿಟ್​ಮ್ಯಾನ್​ಗೆ ಉತ್ತಮ ಸಾಥ್​ ನೀಡಿದರು. ಇಬ್ಬರು ದಿಗ್ಗಜರು ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ. 

ರೋಹಿತ್ ಶರ್ಮ ದಾಖಲೆ 

ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಹಿರಿಯ ಆಟಗಾರ ರೋಹಿತ್ ಶರ್ಮ ಇಂದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ (57 ರನ್​) ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ದಾಖಲೆಗೆ ರೋಹಿತ್​ ತಮ್ಮ ಹೆಸರನ್ನು ಸೇರಿಸಿದ್ದಾರೆ. ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಈ ವಿಶೇಷ ಸಾಧನೆ ಮಾಡಿದ್ದಾರೆ. ಇನ್ನಿಂಗ್ಸ್‌ನ 20ನೇ ಓವರ್‌ನಲ್ಲಿ ಮಾರ್ಕೊ ಜಾನ್ಸೆನ್ ಬೌಲಿಂಗ್‌ನ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ 'ಹಿಟ್‌ಮ್ಯಾನ್' ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಬ್ಯಾಟರ್​ ಆಗಿ ಹೊರಹೊಮ್ಮಿದ್ದಾರೆ. 
ಇದು ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ 352ನೇ ಸಿಕ್ಸರ್ ಆಗಿದೆ. ಇದಕ್ಕೂ ಮೊದಲು ಪಾಕ್​ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯ ಹೆಸರಿನಲ್ಲಿ ಈ ದಾಖಲೆಯಿತ್ತು. ಅಫ್ರಿದಿ 398 ಪಂದ್ಯಗಳಲ್ಲಿ 351 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ರೋಹಿತ್ ಕೇವಲ 277 ಪಂದ್ಯಗಳಲ್ಲಿ 352 ಸಿಕ್ಸರ್‌ಗಳನ್ನು ಸಿಡಿಸುವ ಮುಖೇನ ಈ ವಿಶೇಷ ರೆಕಾರ್ಡ್​ ಅನ್ನು ತಮ್ಮ ಹೆಸರಿನಲ್ಲಿರಿಸಿದ್ದಾರೆ. 

ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರಿವರು

  1. ರೋಹಿತ್ ಶರ್ಮ (ಭಾರತ) - 352 ಸಿಕ್ಸರ್‌
  2.  ಶಾಹಿದ್ ಅಫ್ರಿದಿ (ಪಾಕಿಸ್ತಾನ) - 351 ಸಿಕ್ಸರ್‌
  3.  ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 331 ಸಿಕ್ಸರ್‌
  4.  ಸನತ್ ಜಯಸೂರ್ಯ (ಶ್ರೀಲಂಕಾ) - 270 ಸಿಕ್ಸರ್‌
  5.  ಎಂ.ಎಸ್. ಧೋನಿ (ಭಾರತ) - 229 ಸಿಕ್ಸರ್‌
ಈ ಪಂದ್ಯದಲ್ಲಿ ಒಟ್ಟು 51 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 5 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಇದು ಏಕದಿನ ಪಂದ್ಯಗಳಲ್ಲಿ ಹಿಟ್‌ಮ್ಯಾನ್‌ನ 60ನೇ ಅರ್ಧಶತಕ ಎಂಬುದು ಗಮನಾರ್ಹ. 

ದಾಖಲೆಗಳ ಸರದಾರ 

ವಿರಾಟ್​ ಕೊಹ್ಲಿ ಅವರ ಶತಕದಾಟ (133* ರನ್​, 115 ಎಸೆತ) ಮೈದಾನದಲ್ಲಿದ್ದ ಕ್ರಿಕೆಟ್​ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿತು. ವಿರಾಟ್ ಕೊಹ್ಲಿ ಅಪರೂಪದ ದಾಖಲೆಗೆ ಸಾಕ್ಷಿಯಾಗಲು ಒಂದೇ ಒಂದು ಹೆಜ್ಜೆ ದೂರದಲ್ಲಿದ್ದರು. ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಅವರಿಂದ ಒಂದೇ ಒಂದು ಶತಕದ ಅಗತ್ಯವಿತ್ತು. ಕಡೆಗೂ ಮೊದಲ ಪಂದ್ಯದಲ್ಲಿಯೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಸಚಿನ್​ ತೆಂಡೂಲ್ಕರ್ ಅವರ​ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.
ಸಚಿನ್ ತೆಂಡೂಲ್ಕರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 200 ಪಂದ್ಯಗಳನ್ನಾಡಿದ್ದು, 53.8 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಮತ್ತು 68 ಅರ್ಧಶತಕಗಳು ಸೇರಿವೆ. ಇನ್ನು ವಿರಾಟ್ ಬಗ್ಗೆ ಹೇಳುವುದಾದರೆ, ಇದುವರೆಗೆ 306 ಏಕದಿನ ಪಂದ್ಯಗಳನ್ನಾಡಿದ್ದು​, 294 ಇನ್ನಿಂಗ್ಸ್‌ಗಳಲ್ಲಿ 57.7 ಸರಾಸರಿಯಲ್ಲಿ 14,255* ರನ್ ಗಳಿಸಿದ್ದಾರೆ. ಇದರಲ್ಲಿ 52 ಶತಕ ಮತ್ತು 76 ಅರ್ಧಶತಕಗಳು ಸೇರಿವೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net