ದೆಹಲಿಯಲ್ಲಿ ಜನಿಸಿರುವ ನಿಖಿಲ್ ಭಾರತದ ದೇಶೀಯ ಕ್ರಿಕೆಟ್ನಲ್ಲಿ ಪಂಜಾಬ್ ಪರ 14 ಲಿಸ್ಟ್ ಎ ಏಕದಿನ ಪಂದ್ಯಗಳನ್ನು ಆಡಿದ್ದಾರೆ. 30 ವರ್ಷದ ನಿಖಿಲ್ ಸದ್ಯ ಆಸ್ಟ್ರೆಲಿಯಾದ ಕಾಯಂ ನಿವಾಸಿಯಾಗಿದ್ದಾರೆ. ಆದರೆ ಇನ್ನೂ ಆಸೀಸ್ ಪೌರತ್ವ ಪಡೆದಿಲ್ಲ. 2020ರಲ್ಲಿ ಸಂಬಂಧಿಯೊಬ್ಬರನ್ನು ನೋಡಲು ಕ್ವೀನ್ಸ್ಲ್ಯಾಂಡ್ಗೆ ಹೋಗಿದ್ದ ನಿಖಿಲ್ ಕರೊನಾ ಲಾಕ್ಡೌನ್ನಿಂದ ಅಲ್ಲೇ ದೀರ್ಘಕಾಲ ಉಳಿಯುವಂತಾಗಿತ್ತು. ಬಳಿಕ ಅವರು ಅಲ್ಲೇ ಕೆಲಸಕ್ಕೆ ಸೇರಿ ಸ್ಥಳಿಯ ಕ್ರಿಕೆಟ್ನಲ್ಲೂ ಆಡಲಾರಂಭಿಸಿದ್ದರು.
2023ರ ಬಿಗ್ ಬ್ಯಾಷ್ ಲೀಗ್ನಲ್ಲಿ ಹೋರ್ಬಟ್ ಪರ ಆಡುವ ಅವಕಾಶವನ್ನೂ ಪಡೆದಿದ್ದರು. ಆಸೀಸ್ ದೇಶೀಯ ಕ್ರಿಕೆಟ್ನಲ್ಲಿ ಟಾಸ್ಮೇನಿಯಾ ತಂಡದ ಭಾಗವಾಗಿದ್ದಾರೆ. ನಿಖಿಲ್ ಇತ್ತೀಚೆಗೆ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್ ಬೌಲರ್ ಆಗಿದ್ದರು. ಗುಜರಾತ್ನಲ್ಲಿ ಜನಿಸಿದ್ದ ಲೆಗ್ ಸ್ಪಿನ್ನರ್ ರೆಕ್ಸ್ ಸೆಲ್ಲರ್ಸ್ 1964ರಲ್ಲಿ ಕೊನೆಯದಾಗಿ ಆಸೀಸ್ ಪರ ಆಡಿದ್ದ ಭಾರತದಲ್ಲಿ ಜನಿಸಿದ ಆಟಗಾರರೆನಿಸಿದ್ದರು. ಇದರ ಹೊರತಾಗಿ ಇತ್ತೀಚೆಗಿನ ಗುರಿಂದರ್ ಸಂಧು, ತನ್ವೀರ್ ಸಂಘ ಸಹಿತ ಭಾರತ ಮೂಲದ ಕ್ರಿಕೆಟಿಗರು ಆಸೀಸ್ ಪ್ರತಿನಿಧಿಸಿದ ದೃಷ್ಟಾಂತಗಳು ಹಲವಾರು ಇವೆ.