

ಆಮ್‌ಸ್ಟೆಲ್ವೀನ್ (ನೆದರ್ಲ್ಯಾಂಡ್ಸ್): ಐವತ್ತು ವರ್ಷಗಳ ಪ್ರಶಸ್ತಿ ಬರ ನೀಗಿಸುವ ಹಂಬಲದಲ್ಲಿದ್ದ ಭಾರತ ಪುರುಷರ ತಂಡ ಎಫ್ಐಎಚ್ ಹಾಕಿ ವಿಶ್ವಕಪ್‌ನ (
FIH Men's Hockey World Cup)
ಎರಡನೇ ಸುತ್ತಿನ ಮೊದಲ ಪಂದ್ಯದಲ್ಲಿ ಒಲಿಂಪಿಕ್ಸ್ ಹಾಲಿ ಚಾಂಪಿಯನ್ ನೆದರ್ಲ್ಯಾಂಡ್ಸ್ ವಿರುದ್ಧ 1-3 ಅಂತರದಿಂದ ಮುಗ್ಗರಿಸಿತು. ಇದರೊಂದಿಗೆ ಹರ್ಮಾನ್‌ಪ್ರೀತ್ ಸಿಂಗ್ ಪಡೆ ಸೆಮಿಫೈನಲ್ ಪ್ರವೇಶಿಸುವ ಹಾದಿ ಕಠಿಣಗೊಂಡಿದ್ದು, ಗುಂಪಿನ ಇನ್ನೊಂದು ಪಂದ್ಯದಲ್ಲಿ ಅರ್ಜೆಂಟೀನಾ ಎದುರು ಇಂಗ್ಲೆಂಡ್ ಗೆಲುವು ಒಲಿಸಿಕೊಂಡರೆ, ಭಾರತ ಅಧಿಕೃತವಾಗಿ ಪ್ರಶಸ್ತಿ ರೇಸ್‌ನಿಂದ ಹೊರಗುಳಿಯಲಿದೆ.
ಆತಿಥೇಯ ನೆದರ್ಲ್ಯಾಂಡ್ಸ್ ತಂಡ ಇ ಗುಂಪಿನಿಂದ ಮೊದಲ ತಂಡವಾಗಿ ಸೆಮಿಫೈನಲ್ ಸ್ಥಾನ ಖಾತ್ರಿಪಡಿಸಿಕೊಂಡಿದೆ.
ವ್ಯಾಗನರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಪರ ಡ್ಯುಕೊ ಟೆಲ್‌ಗೆಕಾಂಪ್ (44ನೇ ನಿಮಿಷ), ಟೆಜೆಪ್ ಹೊಡೆಮೇಕರ್ಸ್ (51) ಹಾಗೂ ಥಿಜಿಸ್ ವಾನ್ ಡಮ್ (55) ತಲಾ ಒಂದು ಗೋಲು ಬಾರಿಸಿದರೆ, ಭಾರತ ಪರ ನಾಯಕ ಹರ್ಮಾನ್‌ಪ್ರೀತ್ ಸಿಂಗ್ (52) ಏಕೈಕ ಗೋಲುಗಳಿಸಿದರು. ಪಂದ್ಯದ ಮೊದಲಾರ್ಧದ ಗೋಲು ರಹಿತವಾಗಿ ಉಳಿದರೆ, ಹರ್ಮಾನ್‌ಪ್ರೀತ್ ಬೆನ್ನು ನೋವಿನ ಸಮಸ್ಯೆಯಿಂದ ಕೆಲ ಸಮಯ ಮೈದಾನದಾಚೆ ಉಳಿದಿದ್ದು ಭಾರತಕ್ಕೆ ಹಿನ್ನಡೆ ತಂದಿತು. ಪಂದ್ಯದಲ್ಲಿ ಸಿಕ್ಕ 8 ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತ ಒಮ್ಮೆ ಮಾತ್ರ ಗೋಲುಗಳಿಸಲು ಸಾಧ್ಯವಾಯಿತು.