FIFA WORLD CUP: ಪ್ರಶಸ್ತಿ ಸುತ್ತಿಗೇರಲು ಯುರೋಪಿಯನ್ ದೈತ್ಯ ತಂಡಗಳ ಕಾದಾಟ

ಫಿಫಾ ವಿಶ್ವಕಪ್: ಪ್ರಶಸ್ತಿ ಸುತ್ತಿಗೇರಲು ಯುರೋಪಿಯನ್ ದೈತ್ಯ ತಂಡಗಳ ಕಾದಾಟ
ಫಿಫಾ ವಿಶ್ವಕಪ್: ಪ್ರಶಸ್ತಿ ಸುತ್ತಿಗೇರಲು ಯುರೋಪಿಯನ್ ದೈತ್ಯ ತಂಡಗಳ ಕಾದಾಟ
Published on
ಡಲ್ಲಾಸ್: ಫಿಫಾ ವಿಶ್ವಕಪ್ 23ನೇ ಆವೃತ್ತಿಯೂ ಅಂತಿಮ ಘಟ್ಟ ತಲುಪಿದ್ದು, ವಿಶ್ವದ ಅಗ್ರ ನಾಲ್ಕು ತಂಡಗಳು ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಇಡಲು ಸಜ್ಜಾಗಿವೆ. ಯೂರೋಪಿನ ದೈತ್ಯರೆನಿಸಿರುವ ಫ್ರಾನ್ಸ್ ಮತ್ತು ಸ್ಪೇನ್ ತಂಡಗಳು ಭಾರತೀಯ ಕಾಲಮಾನ ಮಂಗಳವಾರ ಮಧ್ಯರಾತ್ರಿ ಮೊದಲ ಸೆಮಿಫೈನಲ್‌ನಲ್ಲಿ ಎದುರಾಗಲಿವೆ. ಎರಡನೇ ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಹಾಲಿ ಚಾಂಪಿಯನ್ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ತಂಡಗಳು ಬುಧವಾರ ರಾತ್ರಿ ಸೆಣಸಲಿವೆ. ಫಿಫಾ ವಿಶ್ವ ರ‌್ಯಾಂಕಿಂಗ್ ಅಗ್ರ ನಾಲ್ಕು ತಂಡಗಳೇ ಸೆಮಿೈನಲ್ ಪ್ರವೇಶಿಸಿರುವುದು ಈ ಬಾರಿಯ ವಿಶೇಷ ಎನಿಸಿದೆ.
ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ಸ್ಪೇನ್‌ನ ‘ಯುವ ಶಕ್ತಿ’ಹಾಗೂ ಫ್ರಾನ್ಸನ ‘ಅನುಭವ’ದ ನಡುವಿನ ಹೈವೋಲ್ಟೇಜ್ ಕಾದಾಟವಾಗಿರಲಿದೆ. ಲೆಸ್ ಬ್ಲೂಸ್ ಖ್ಯಾತಿಯ ಹಾಲಿ ರನ್ನರ್ ಅಪ್ ಫ್ರಾನ್ಸ್, ಟೂರ್ನಿಯುದ್ದಕ್ಕೂ ಸಮತೋಲಿತ ಆಟ ಪ್ರದರ್ಶಿಸಿದೆ. ಸತತ ಮೂರನೇ ಬಾರಿಗೆ ಫೈನಲ್‌ಗೇರುವ ತವಕದಲ್ಲಿರುವ ಫ್ರಾನ್ಸ್ ರಕ್ಷಣಾ ಪಡೆಯನ್ನು ಹಿಮ್ಮೆಟ್ಟಿಸುವುದು ಯುರೋಪಿಯನ್ ಹಾಲಿ ಚಾಂಪಿಯನ್ ಸ್ಪೇನ್‌ಗೆ ಕಠಿಣ ಸವಾಲು ಎನಿಸಿದೆ. ಲಾ ರೋಜಾ ಖ್ಯಾತಿಯ 2010ರ ಚಾಂಪಿಯನ್ ಸ್ಪೇನ್, ಮೂರನೇ ಬಾರಿಗೆ ಸೆಮಿಫೈನಲ್ ಹಂತಕ್ಕೇರಿದೆ.
ಚೆಂಡಿನ ನಿಯಂತ್ರಣ ಜತೆಗೆ ಯುವ ತಾರೆಯದ ಪ್ರದರ್ಶನದ ಮೇಲೆ ಕೋಚ್ ಲೂಯಿಸ್ ಡೆ ಲಾ ಯೆಂಟೆ ಭರವಸೆ ಇಟ್ಟಿದ್ದಾರೆ. ಸ್ಪೇನ್‌ನ ಚೆಂಡಿನ ನಿಯಂತ್ರಣದ ಶೈಲಿಗೆ, ಫ್ರಾನ್ಸ್ ಪ್ರತಿ ದಾಳಿ ಜತೆಗೆ ಮಿಡ್ ಫೀಲ್ಡರ್‌ಗಳ ಹಿಡಿತ ಪಂದ್ಯಕ್ಕೆ ತಿರುವು ನೀಡುವ ಸಾಧ್ಯತೆಗಳಿವೆ. ಸ್ಪೇನ್ ಇದುವರೆಗೆ ಟೂರ್ನಿಯಲ್ಲಿ ಎದುರಾಳಿ ತಂಡಕ್ಕೆ ಏಕೈಕ ಗೋಲು ಬಿಟ್ಟುಕೊಟ್ಟಿದ್ದು, ಕ್ವಾರ್ಟರ್​ಫೈನಲ್ನಲ್ಲಿ ಬೆಲ್ಜಿಯಂ ಎದುರು 2-1 ರಿಂದ ಗೆದ್ದು 4ರ ಘಟ್ಟಕ್ಕೇರಿದೆ. ಫ್ರಾನ್ಸ್ ಗುಂಪು ಹಂತ ಹೊರತುಪಡಿಸಿ ನಾಕೌಟ್‌ನ ಮೂರು ಪಂದ್ಯಗಳಲ್ಲಿ ಕ್ಲೀನ್‌ಶೀಟ್ ಕಾಯ್ದುಕೊಂಡಿದ್ದು, ಮೊರಾಕ್ಕೊ ವಿರುದ್ಧ 2-0 ರಿಂದ ಕ್ವಾರ್ಟರ್​ಫೈನಲ್ ಜಯಿಸಿತ್ತು.
ಎಂಬಾಪೆ ವರ್ಸಸ್ ಯಮಲ್!
ಆಧುನಿಕ ಫುಟ್‌ಬಾಲ್‌ನ ಶ್ರೇಷ್ಠ ಯುವ ಪ್ರತಿಭೆಗಳೆನಿಸಿರುವ ರಿಯಲ್ ಮ್ಯಾಡ್ರಿಡ್ ಸ್ಟ್ರೈಕರ್ 27 ವರ್ಷದ ಕೈಲಿಯಾನ್ ಎಂಬಾಪೆ ಹಾಗೂ ಬಾರ್ಸಿಲೋನಾದ ರೈಟ್ ವಿಂಗರ್ 19 ವರ್ಷದ ಲಾಮಿನ್ ಯಮಲ್ ಲಾ ಲೀಗಾ ಕ್ಲಬ್ ಟೂರ್ನಿಯಲ್ಲಿ ಈಗಾಗಲೇ ಹಲವು ಬಾರಿ ಎದುರಾಗಿದ್ದಾರೆ. ಆದರೆ, ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿ ಮುಖಾಮುಖಿ ಆಗಲಿದ್ದಾರೆ.
ಕ್ಲಬ್, ರಾಷ್ಟ್ರೀಯ ತಂಡಗಳ ಮುಖಾಮುಖಿಯಲ್ಲಿ ಯಮಲ್, ಎಂಬಾಪೆ ಎದುರು 8-2 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ. 8 ಗೋಲು ಸಿಡಿಸಿ ಗೋಲ್ಡನ್ ಬೂಟ್ ಪ್ರಶಸ್ತಿ ರೇಸ್‌ನಲ್ಲಿರುವ ಎಂಬಾಪೆ ಜತೆಗೆ ಔಸ್ಮಾನೆ ಡೆಂಬೆಲೆ (5 ಗೋಲು), ಮೈಕೆಲ್ ಒಲಿಸ್, ಬ್ರಾಡ್ಲಿ ಬಾರ್ಕೋಲಾ ಫ್ರಾನ್ಸ್ ಪ್ರಮುಖ ಬಲ. ರಕ್ಷಣಾ ವಿಭಾಗವೇ ಸ್ಪೇನ್‌ನ ದೊಡ್ಡ ಶಕ್ತಿಯಾಗಿದ್ದು, ಮೈಕೆಲ್ ಮೊರೆನೊ (2 ಗೋಲು) ಜತೆಗೆ ಮಾರ್ಕ್ ಕುಕುರೆಲ್ಲಾ, ಪೆಡ್ರಿ ಪ್ರಮುಖ ಆಟಗಾರರು. 2024ರ ಯುರೋ ಪ್ರಶಸ್ತಿ ಜಯಿಸುವಲ್ಲಿ ನಿರ್ಣಾಯಕ ಗೋಲು ಸಿಡಿಸಿದ್ದ ಯಮಲ್ ಸೆಮೀಸ್‌ನಲ್ಲಿ ಪೂರ್ಣ ಸಾಮರ್ಥ್ಯ ಪ್ರದರ್ಶಿಸುವ ನಿರೀಕ್ಷೆ ಇದೆ.
ಲಾ ರೋಜಾ ಮೇಲುಗೈ!
ಫಿಫಾ ವಿಶ್ವಕಪ್‌ನಲ್ಲಿ ಎರಡನೇ ಬಾರಿ ಎರಡೂ ತಂಡಗಳು ಮುಖಾಮುಖಿ ಆಗುತ್ತಿದ್ದು, ಒಟ್ಟಾರೆ 38 ಸಲ ಪರಸ್ಪರ ಎದುರಾಗಿವೆ. ಇದರಲ್ಲಿ ಸ್ಪೇನ್ 18ರಲ್ಲಿ ಗೆದ್ದರೆ, ಫ್ರಾನ್ಸ್​ 13ರಲ್ಲಿ ಜಯ ಕಂಡಿದೆ. 7 ಪಂದ್ಯ ಡ್ರಾಗೊಂಡಿವೆ. 2024ರ ಯುರೋ ಕಪ್, 2025ರ ನೇಷನ್ಸ್ ಲೀಗ್ ಸೆಮೀಸ್‌ನಲ್ಲಿ ಕ್ರಮವಾಗಿ 2-1 ಮತ್ತು 5-4 ರಿಂದ ಫ್ರಾನ್ಸ್​ ತಂಡವನ್ನು ಮಣಿಸಿ ಸ್ಪೇನ್ ಮೇಲುಗೈ ಸಾಧಿಸಿದೆ. 2006ರ ನಂತರ ವಿಶ್ವಕಪ್‌ನಲ್ಲಿ ಉಭಯ ತಂಡಗಳು ಎದುರಾಗಲಿದ್ದು, ಹಿಂದಿನ ಬಾರಿ 16ರ ಘಟ್ಟದಲ್ಲಿ ಸ್ಪೇನ್ ತಂಡವನ್ನು 3-1 ರಿಂದ ಫ್ರಾನ್ಸ್​ ಮಣಿಸಿತ್ತು.
4. 1990ರ ಫಿಫಾ ವಿಶ್ವಕಪ್ ಆವೃತ್ತಿಯ ನಂತರ ವಿಶ್ವ ರ‌್ಯಾಂಕಿಂಗ್ ಅಗ್ರ 4 ತಂಡಗಳು ಸೆಮಿೈನಲ್ ಆಡಲಿರುವ ಮೊದಲ ದೃಷ್ಟಾಂತ ಇದಾಗಿದೆ.
1. ಸ್ಪೇನ್ ತಂಡ ವಿಶ್ವಕಪ್‌ನಲ್ಲಿ ಇದುವರೆಗೆ ಒಮ್ಮೆ ಮಾತ್ರ ಪ್ರಶಸ್ತಿ ಸುತ್ತಿಗೇರಿದ್ದು, 2010ರಲ್ಲಿ ಪ್ರಶಸ್ತಿ ಜಯಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net