ವೈಭವ್ ದಾಖಲೆಯ ಇನಿಂಗ್ಸ್, ಫೆರೇರಾ ಸಿಡಿಲಬ್ಬರದ ಬ್ಯಾಟಿಂಗ್; ಗುಜರಾತ್ ಟೈಟನ್ಸ್​​ಗೆ 215 ರನ್ ಟಾರ್ಗೆಟ್​ | RRvsGT

 RRvsGT
RRvsGT
Published on
RRvsGT: 19ನೇ ಆವೃತ್ತಿಯ ಐಪಿಎಲ್‌ನ ಹೈವೋಲ್ಟೇಜ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ಯುವ ಬ್ಯಾಟರ್​ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಮುಲ್ಲನ್‌ಪುರದ ಅಂಗಳದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್​ಆರ್​ ತಂಡ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಒಂದೆಡೆ ವಿಕೆಟ್​ ಬೀಳುತ್ತಿದ್ದರು ದೃತಿಗೆಡದ ವೈಭವ್ ಸೂರ್ಯವಂಶಿ, ಗುಜರಾತ್ ಬೌಲರ್‌ಗಳ ಮನಬಂದಂತೆ ದಂಡಿಸಿದರು. ಕೇವಲ 47 ಎಸೆತಗಳನ್ನು ಎದುರಿಸಿದ ಈ ಎಡಗೈ ಬ್ಯಾಟರ್ 96 ರನ್‌ಗಳ ಅತ್ಯಂತ ಸ್ಫೋಟಕ ಇನಿಂಗ್ಸ್ ಆಡಿ, ಕೇವಲ 4 ರನ್‌ಗಳಿಂದ ಮತ್ತೊಮ್ಮೆ ಶತಕ ವಂಚಿತರಾದರು.

ರಾಜಸ್ಥಾನ್ ರಾಯಲ್ಸ್ ಸ್ಕೋರ್​ಕಾರ್ಡ್

ವೈಭವ್ ಸೂರ್ಯವಂಶಿ 96(47)
ರವಿಂದ್ರ ಜಡೇಜಾ 45(35)
ಡೊನೊವನ್ ಫೆರೇರಾ 38(11)

ಆಂಡ್ರೆ ರಸೆಲ್ ಸಾರ್ವಕಾಲಿಕ ಮಹಾ ದಾಖಲೆ ಉಡೀಸ್!

ಈ ಪಂದ್ಯದ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಸಾರ್ವಕಾಲಿಕ ವಿಶ್ವದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್​ನಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರರಾಗಿದ್ದಾರೆ. ಕೇವಲ 440 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ವೈಭವ್​ಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ದೈತ್ಯ ಆಟಗಾರ ಆಂಡ್ರೆ ರಸೆಲ್ 545 ಎಸೆತಗಳಲ್ಲಿ 1,000 ಐಪಿಎಲ್ ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 15 ವರ್ಷದ ಸೂರ್ಯವಂಶಿ, ರಸೆಲ್​ರ ಹಳೆಯ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net