ಅಬ್ಬರಿಸಿದ ಸೂರ್ಯವಂಶಿ, ಭಾರತ ಕ್ಲೀನ್‌ಸ್ವೀಪ್: ಸಚಿನ್ ತೆಂಡುಲ್ಕರ್ ದಾಖಲೆ ಹಿಂದಿಕ್ಕಿದ ವೈಭವ್!

ಅಬ್ಬರಿಸಿದ ಸೂರ್ಯವಂಶಿ, ಭಾರತ ಕ್ಲೀನ್‌ಸ್ವೀಪ್: ಸಚಿನ್ ತೆಂಡುಲ್ಕರ್ ದಾಖಲೆ ಹಿಂದಿಕ್ಕಿದ ವೈಭವ್!
ಅಬ್ಬರಿಸಿದ ಸೂರ್ಯವಂಶಿ, ಭಾರತ ಕ್ಲೀನ್‌ಸ್ವೀಪ್: ಸಚಿನ್ ತೆಂಡುಲ್ಕರ್ ದಾಖಲೆ ಹಿಂದಿಕ್ಕಿದ ವೈಭವ್!
Published on
ಹರಾರೆ: ಯುಕೆ ಪ್ರವಾಸದ ಸತತ ಎರಡು ಟಿ20 ಸರಣಿ ಸೋಲಿನ ನಂತರ ಜಯದ ಹಾದಿಗೆ ಮರಳಿರುವ ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡ ಹ್ಯಾಟ್ರಿಕ್ ಗೆಲುವಿನೊಂದಿಗೆ ಜಿಂಬಾಬ್ವೆ ವಿರುದ್ಧ ಚುಟುಕು ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದೆ. 15 ವರ್ಷದ ವೈಭವ್ ಸೂರ್ಯವಂಶಿ (81 ರನ್, 49 ಎಸೆತ, 8 ಬೌಂಡರಿ, 4 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಶ್ರೇಯಸ್ ಅಯ್ಯರ್ ಪಡೆ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 35 ರನ್‌ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಭಾರತ ವಶಪಡಿಸಿಕೊಂಡಿತು.
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾನುವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಅಭಿಷೇಕ್ ಶರ್ಮ ಸತತ ವೈಲ್ಯದ ನಡುವೆಯೂ ವೈಭವ್ ಸೂರ್ಯವಂಶಿ ಸಮಯೋಚಿತ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ 5 ವಿಕೆಟ್‌ಗೆ 192 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.
ಪ್ರತಿಯಾಗಿ ಪವರ್ ಪ್ಲೇಯಲ್ಲಿ ಮೂರು ವಿಕೆಟ್ ಕಳೆದುಕೊಂಡ ಜಿಂಬಾಬ್ವೆ ಲಯ ತಪ್ಪಿತು. ಆಗ, ಮಧ್ಯಮ ಕ್ರಮಾಂಕದಲ್ಲಿ ರ‌್ಯಾನ್ ಬರ್ಲ್ (54* ರನ್, 43 ಎಸೆತ, 5 ಬೌಂಡರಿ) ಹಾಗೂ ವೆಸ್ಲೆ ಮಾಧವೀರೆ (28) ಹೋರಾಟದಿಂದ ಜಿಂಬಾಬ್ವೆ ತುಸು ಪ್ರತಿರೋಧ ತೋರಿತು. ಅಂತಿಮವಾಗಿ 7 ವಿಕೆಟ್‌ಗೆ 157 ರನ್‌ಗಳಿಸಲಷ್ಟೇ ಶಕ್ತಗೊಂಡ ಜಿಂಬಾಬ್ವೆ, ಸರಣಿಯ ಆರಂಭಿಕ ಎರಡು ಪಂದ್ಯಕ್ಕಿಂತ ಸುಧಾರಿತ ಪ್ರದರ್ಶನ ನೀಡಿ ಸೋಲೊಪ್ಪಿಕೊಂಡಿತು.
ಭಾರತ: 5 ವಿಕೆಟ್‌ಗೆ 192 (ವೈಭವ್ ಸೂರ್ಯವಂಶಿ 81, ಅಭಿಷೇಕ್ ಶರ್ಮ 2, ಇಶಾನ್ ಕಿಶನ್ 29, ಶ್ರೇಯಸ್ ಅಯ್ಯರ್ 27, ತಿಲಕ್ ವರ್ಮ 11*, ರಿಂಕು ಸಿಂಗ್ 25, ಬ್ರಾಡ್ ಇವಾನ್ಸ್ 41ಕ್ಕೆ 2, ಮುಜರಬಾನಿ 33ಕ್ಕೆ 1, ಮಾಧವೀರೆ 37ಕ್ಕೆ 1).
ಜಿಂಬಾಬ್ವೆ: 7 ವಿಕೆಟ್‌ಗೆ 157 (ಬೆನೆಟ್ 0, ಬೆನ್ ಕರ‌್ರನ್ 20, ಡಿಯೋನ್ ಮೆಯರ್ಸ್‌ 19, ಸಿಕಂದರ್ 0, ರ‌್ಯಾನ್ ಬರ್ಲ್ 54*, ಮಾಧವೀರೆ 28, ಮಯಾಂಕ್ 29ಕ್ಕೆ 3, ಯಶ್ ಠಾಕೂರ್ 45ಕ್ಕೆ 2, ರವಿ ಬಿಷ್ಣೋಯಿ 24ಕ್ಕೆ 1). ಪಂದ್ಯಶ್ರೇಷ್ಠ-ಸರಣಿಶ್ರೇಷ್ಠ: ವೈಭವ್ ಸೂರ್ಯವಂಶಿ.
15. ವೈಭವ್ ಸೂರ್ಯವಂಶಿ (15 ವರ್ಷ, 121 ದಿನ) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅತಿ ಕಿರಿಯ ಭಾರತೀಯ ಕ್ರಿಕೆಟರ್ ಎನಿಸಿದರು. ಸಚಿನ್ ತೆಂಡುಲ್ಕರ್ (17 ವರ್ಷ, 112 ದಿನ) ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ ಹಿಂದಿನ ಕಿರಿಯ ಭಾರತೀಯರಾಗಿದ್ದರು.
86. ವೈಭವ್ ಸೂರ್ಯವಂಶಿ ಹಾಲಿ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಇದುವರಗೆ 86 ಸಿಕ್ಸರ್ ಸಿಡಿಸಿದ್ದು, ಭಾರತೀಯ ಬ್ಯಾಟರ್‌ನ ಮೂರನೇ ಗರಿಷ್ಠ ಸಿಕ್ಸರ್ ಸಾಧನೆ ಎನಿಸಿದೆ. ಅಭಿಷೇಕ್ ಶರ್ಮ 2024, 2025ರಲ್ಲಿ ಕ್ರಮವಾಗಿ 87, 108 ಸಿಕ್ಸರ್‌ಗಳಿಸಿರುವುದು ಸರ್ವಾಧಿಕ ಎನಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net