ಭಾರತ-ನ್ಯೂಜಿಲೆಂಡ್ ಪಂದ್ಯ: ಎಕ್ಸ್​ನಲ್ಲಿ ಭವಿಷ್ಯ ನುಡಿದು ಟ್ರೋಲ್​ಗೆ ತುತ್ತಾದ ಟೀಮ್​ ಇಂಡಿಯಾ ಮಾಜಿ ಆಟಗಾರ!...ಟ್ವಿಟರ್‌ನಿಂದ ದೂರವಿರಿ ಅಂದಿದ್ದೇಕೆ..? | INDvNZ

ಭಾರತ-ನ್ಯೂಜಿಲೆಂಡ್ ಪಂದ್ಯ: ಎಕ್ಸ್​ನಲ್ಲಿ ಭವಿಷ್ಯ ನುಡಿದು ಟ್ರೋಲ್​ಗೆ ತುತ್ತಾದ ಟೀಮ್​ ಇಂಡಿಯಾ ಮಾಜಿ ಆಟಗಾರ!...ಟ್ವಿಟರ್‌ನಿಂದ ದೂರವಿರಿ ಅಂದಿದ್ದೇಕೆ..? | INDvNZ
Published on: 

INDvNZ: ವೆಲ್ಲಿಂಗ್ಟನ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆದರೆ, ಈ ಗುರಿಯನ್ನು ಬೆನ್ನತ್ತಿದ ಟೀಮ್​ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಮೈದಾನದಲ್ಲಿ ರನ್ ಮಳೆಯನ್ನೇ ಹರಿಸಿದರು. ಆರಂಭಿಕ ಆಟಗಾರರಾದ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಭಾರತವು ಕೇವಲ 13.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 3-0 ಮುನ್ನಡೆ ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಪಂದ್ಯದ ಆರಂಭದಲ್ಲಿ ನ್ಯೂಜಿಲೆಂಡ್ 198 ರನ್ ಗಳಿಸಿದಾಗ, ಪಿಚ್‌ನ ಪರಿಸ್ಥಿತಿಯನ್ನು ಗಮನಿಸಿ ಭಾರತಕ್ಕೆ ಈ ಗುರಿ ಕಠಿಣವಾಗಬಹುದು ಎಂದು ಅಂದಾಜಿಸಲಾಗಿತ್ತು. ಭಾರತದ ಮಾಜಿ ಓಪನರ್ ಆಕಾಶ್ ಚೋಪ್ರಾ ಅವರು ಎಕ್ಸ್ ಖಾತೆಯಲ್ಲಿ, 170ಕ್ಕಿಂತ ಹೆಚ್ಚಿನ ಮೊತ್ತವನ್ನು ಬೆನ್ನಟ್ಟುವುದು ಇಲ್ಲಿ ಕಷ್ಟವಾಗಲಿದೆ ಎಂದು ಪೋಸ್ಟ್ ಮಾಡಿದ್ದರು. ಆದರೆ, ಟೀಮ್​ ಇಂಡಿಯಾ ಬ್ಯಾಟರ್‌ಗಳು ಈ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಕೇವಲ ಮೊದಲ 5 ಓವರ್‌ಗಳಲ್ಲೇ ಭಾರತ 100 ರನ್ ಗಡಿ ದಾಟಿತು. 8ನೇ ಓವರ್‌ನ ಮೊದಲ ಎಸೆತದಲ್ಲಿ ಸೂರ್ಯವಂಶಿ ಔಟಾಗುವಷ್ಟರಲ್ಲಿ ಭಾರತದ ಸ್ಕೋರ್ 133 ತಲುಪಿತ್ತು. ಕೇವಲ 10 ಓವರ್‌ಗಳಲ್ಲಿ ಭಾರತ 178/2 ತಲುಪಿ, ಅಂತಿಮ 10 ಓವರ್‌ಗಳಿಗೆ ಕೇವಲ 21 ರನ್‌ಗಳ ಅಗತ್ಯವಿತ್ತು. ಅಂತಿಮವಾಗಿ ಭಾರತವು 40 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತು.

ಅಭಿಷೇಕ್ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ಬರೆದರು. ಒಟ್ಟು 38 ಎಸೆತಗಳನ್ನು ಎದುರಿಸಿದ ಅಭಿ 9 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 113 ರನ್‌ಗಳ ಬೃಹತ್ ಇನ್ನಿಂಗ್ಸ್ ಕಟ್ಟಿದರು. ಈ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಾಗಿ ಕಿವೀಸ್​ ಬೌಲರ್‌ಗಳು ಸಂಪೂರ್ಣವಾಗಿ ಧೂಳೀಪಟವಾದರು.

ಟೀಮ್​ ಇಂಡಿಯಾ ಭರ್ಜರಿ ಜಯ ಸಾಧಿಸಿದ ಬಳಿಕ ಮಾಜಿ ಓಪನರ್ ಆಕಾಶ್ ಚೋಪ್ರಾರ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪಂದ್ಯದ ವೇಳೆ ಕಿವೀಸ್ 198 ರನ್ ಗಳಿಸಿದಾಗ, 170ಕ್ಕಿಂತ ಹೆಚ್ಚಿನ ಮೊತ್ತವನ್ನು ಬೆನ್ನಟ್ಟುವುದು ಕಷ್ಟ ಎಂದು ಚೋಪ್ರಾ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದರು. ಆದರೆ, ಭಾರತೀಯ ಬ್ಯಾಟರ್‌ಗಳು ಕೇವಲ 13.2 ಓವರ್‌ಗಳಲ್ಲಿ ಗುರಿ ಮುಟ್ಟಿದಾಗ ನೆಟ್ಟಿಗರು ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದರು.

ಈ ಟ್ರೋಲ್‌ಗಳಿಗೆ ವೀಡಿಯೊ ಮೂಲಕ ತಿರುಗೇಟು ನೀಡಿರುವ ಆಕಾಶ್ ಚೋಪ್ರಾ, ಜನರು ಟ್ವಿಟರ್‌ನಿಂದ ದೂರವಿರಬೇಕು, ಏಕೆಂದರೆ ಇದು ನಮ್ಮೊಳಗಿನ ಕೆಟ್ಟ ಮುಖವನ್ನು ಹೊರಹಾಕುತ್ತದೆ. ನಾನು 10 ಓವರ್‌ಗಳಲ್ಲಿ ರನ್ ಚೇಸ್ ಮಾಡುವುದು ಕಷ್ಟ ಎಂದಷ್ಟೇ ಆ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದೆ ಎಂದಿದ್ದಾರೆ. ಆರಂಭದಲ್ಲಿ ಪಿಚ್‌ನಲ್ಲಿ ಚೆಂಡು ತಿರುಗುತ್ತಿದ್ದುದರಿಂದ ಮತ್ತು ಗಾಳಿಯ ಪ್ರಭಾವವಿದ್ದ ಕಾರಣ ಕಷ್ಟವೆನಿಸಿತ್ತು ಎಂದು ಸಮರ್ಥಿಸಿಕೊಂಡ ಅವರು, ಆದರೆ ಭಾರತೀಯ ಬ್ಯಾಟಿಂಗ್ ಪಡೆ ಎಲ್ಲವನ್ನೂ ತಲೆಕೆಳಗಾಗಿಸಿ ದಾಖಲೆಯ ಚೇಸಿಂಗ್ ಮಾಡಿತು ಎಂದು ಪ್ರಶಂಸಿಸಿದರು.(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net