ಸಂಜು-ಅಭಿಷೇಕ್ ಡ್ರಾಪ್ ಮಾಡದೇ ವಂಡರ್​ ಕಿಡ್​ ವೈಭವ್​ರನ್ನೂ ಆಡಿಸಬಹುದು! ಅದಕ್ಕಿರುವುದು ಇದೊಂದೆ ದಾರಿ...England Series

ಸಂಜು-ಅಭಿಷೇಕ್ ಡ್ರಾಪ್ ಮಾಡದೇ ವಂಡರ್​ ಕಿಡ್​ ವೈಭವ್​ರನ್ನೂ ಆಡಿಸಬಹುದು! ಅದಕ್ಕಿರುವುದು ಇದೊಂದೆ ದಾರಿ...England Series
ಸಂಜು-ಅಭಿಷೇಕ್ ಡ್ರಾಪ್ ಮಾಡದೇ ವಂಡರ್​ ಕಿಡ್​ ವೈಭವ್​ರನ್ನೂ ಆಡಿಸಬಹುದು! ಅದಕ್ಕಿರುವುದು ಇದೊಂದೆ ದಾರಿ...England Series
Published on

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್ ಸರಣಿಗೆ ಗಂಭೀರ್-ಅಯ್ಯರ್‌ಗೆ ಗವಾಸ್ಕರ್ ಕೊಟ್ಟ ಬಿಗ್ ಐಡಿಯಾ ಏನು?
  • ಸಂಜು-ಅಭಿಷೇಕ್ ಡ್ರಾಪ್ ಮಾಡಬೇಡಿ, ಆದ್ರೆ ಈ 'ಮ್ಯಾಜಿಕ್ ಪ್ಲೇಯರ್'ಗೆ ಜಾಗ ಕೊಡಿ ಎಂದು ಗವಾಸ್ಕರ್​
  • ಇಂಗ್ಲೆಂಡ್ ವಿರುದ್ಧದ ಸರಣಿಗೆ 'ವಂಡರ್ ಕಿಡ್' ವೈಭವ್ ಸೂರ್ಯವಂಶಿಗೆ ಮಣೆ?
  • ಅಭಿಷೇಕ್-ಸಂಜು ಕೈಬಿಡಬೇಡಿ, ನಂಬರ್ 3ರಲ್ಲಿ ವೈಭವ್ ಆಡಿಸಿ ಎಂದು ಸುನೀಲ್​ ಗವಾಸ್ಕರ್​
England Series : ಆರಂಭಿಕ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡ ಮುಖಭಂಗ ಅನುಭವಿಸಿದೆ. ಮೊದಲ ಪಂದ್ಯದಲ್ಲಿ 34 ರನ್‌ಗಳಿಂದ ಸೋತಿದ್ದ ಭಾರತ, ದ್ವಿತೀಯ ಪಂದ್ಯದಲ್ಲಿ ಕೇವಲ 1 ರನ್‌ನಿಂದ ಸೋಲುವ ಮೂಲಕ ಸರಣಿಯನ್ನು ಕೈಚೆಲ್ಲಿದೆ. ಮೊದಲ ಪಂದ್ಯದಲ್ಲಿ 50 ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರೆ, ಮಲಯಾಳಿ ಸ್ಟಾರ್ ಸಂಜು ಸ್ಯಾಮ್ಸನ್ ಎರಡೂ ಪಂದ್ಯಗಳಲ್ಲಿ (5 ಮತ್ತು 0) ಸಂಪೂರ್ಣ ವೈಫಲ್ಯ ಕಂಡರು. ಈ ಹೀನಾಯ ಸೋಲಿನಿಂದ ಪಾಠ ಕಲಿತು ಚೇತರಿಸಿಕೊಳ್ಳಲು ಟೀಮ್ ಇಂಡಿಯಾಗೆ ಹೆಚ್ಚಿನ ಸಮಯವಿಲ್ಲ, ಏಕೆಂದರೆ ಜುಲೈ 1 ರಿಂದಲೇ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಿಂದಲೇ ವಂಡರ್​ ಕಿಡ್​ ವೈಭವ್ ಸೂರ್ಯವಂಶಿ ಅವರನ್ನು ಭಾರತ ತಂಡದಲ್ಲಿ ಸೇರಿಸಿಕೊಳ್ಳಬೇಕೆಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ಗವಾಸ್ಕರ್ ಅವರು ಯುವ ಬ್ಯಾಟರ್ ಪರವಾಗಿ ತಮ್ಮ ಈ ಬಲವಾದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ವೈಭವ್ ಸೂರ್ಯವಂಶಿ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದು, ಐರ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಅವರಿಗೆ ಆಡಲು ಅವಕಾಶ ನೀಡಬೇಕಿತ್ತು ಎಂದು ನಾನು ಕಳೆದೊಂದು ತಿಂಗಳಿನಿಂದ ಹೇಳುತ್ತಲೇ ಇದ್ದೇನೆ, ಒಂದು ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜೊತೆ ಹಾಗೂ ಮತ್ತೊಂದು ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಜೊತೆ ವೈಭವ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಬಹುದಿತ್ತು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಯುವ ಆಟಗಾರರನ್ನು ತಂಡಕ್ಕೆ ತಂದ ತಕ್ಷಣವೇ ಪಂದ್ಯ ಗೆಲ್ಲುತ್ತಾರೆ ಎಂಬ ಗ್ಯಾರಂಟಿ ಇಲ್ಲದಿದ್ದರೂ ಮತ್ತು ಕೆಲವೊಮ್ಮೆ ಅವರು ವಿಫಲರಾಗಬಹುದಾದರೂ, ಹೊಸ ಯುವ ಪ್ರತಿಭೆಗಳನ್ನು ಪರೀಕ್ಷಿಸಲು ಇದಕ್ಕಿಂತ ಉತ್ತಮವಾದ ಅವಕಾಶ ಮತ್ತೊಂದಿರುತ್ತಿರಲಿಲ್ಲ ಎಂದು ಸುನೀಲ್​ ಗವಾಸ್ಕರ್​ ಹೇಳಿದ್ದಾರೆ.
ಐರ್ಲೆಂಡ್ ವಿರುದ್ಧದ ಆಘಾತಕಾರಿ ಸೋಲು ಭಾರತ ತಂಡದ ಮೇಲೆ ಒತ್ತಡ ಹೇರುವುದು ನಿಜವಾದರೂ, ವೈಭವ್ ಸೂರ್ಯವಂಶಿ ಅವರ ಪದಾರ್ಪಣೆಯನ್ನು ಇನ್ನು ಮುಂದೆ ವಿಳಂಬ ಮಾಡಬಾರದು, ಸದ್ಯ ಫಾರ್ಮ್‌ನಲ್ಲಿಲ್ಲದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಬದಿಗೆ ಸರಿಸಿ, ವೈಭವ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಸುನಿಲ್ ಗವಾಸ್ಕರ್ ಸೇರಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಅತ್ಯುತ್ತಮ ಆರಂಭ ನೀಡುತ್ತಾ ಬಂದಿರುವ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಕೇವಲ ಎರಡು ಪಂದ್ಯಗಳ ಸೋಲಿನ ಕಾರಣಕ್ಕೆ ತಂಡದಿಂದ ಕೈಬಿಡುವುದು ಸರಿಯಲ್ಲ ಎಂದಿರುವ ಅವರು, ವೈಭವ್ ನಂಬರ್ 3 ರಲ್ಲಿ, ಇಶಾನ್ ಕಿಶನ್ ನಂಬರ್ 4 ರಲ್ಲಿ ಮತ್ತು ಶ್ರೇಯಸ್ ಅಯ್ಯರ್ ನಂಬರ್ 5 ರ ಕ್ರಮಾಂಕದಲ್ಲಿ ಆಡಬೇಕು ಎಂದು ಬ್ಯಾಟಿಂಗ್ ಕ್ರಮಾಂಕವನ್ನು ಸೂಚಿಸಿದ್ದಾರೆ.
ಐರ್ಲೆಂಡ್ ಎದುರು ಭಾರತ ಸೋತಿರುವುದರಿಂದ ಇಂಗ್ಲೆಂಡ್ ತಂಡದ ಆತ್ಮವಿಶ್ವಾಸ ಖಂಡಿತಾ ಹೆಚ್ಚಿರುತ್ತದೆ. ಆದರೆ, ಅವರ ಇದೇ ಅತಿಯಾದ ಆತ್ಮವಿಶ್ವಾಸದ ಲಾಭವನ್ನು ಪಡೆದುಕೊಂಡು ಅವರಿಗೆ ಶಾಕ್ ನೀಡಬೇಕಾದರೆ, ಜುಲೈ 1 ರಂದು ನಡೆಯಲಿರುವ ಮೊದಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಅವರನ್ನು ಕಣಕ್ಕಿಳಿಸುವುದು ಅತ್ಯಗತ್ಯ ಎಂದು ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ಬಲವಾಗಿ ಮಂಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net