2ನೇ ಟಿ20 ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ!...ಇತ್ತ ವೈಭವ್ ಪದಾರ್ಪಣೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಬೌಲಿಂಗ್ ಕೋಚ್! | INDvENG

 INDvENG > 2ನೇ ಟಿ20 ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ!...ಇತ್ತ ವೈಭವ್ ಪದಾರ್ಪಣೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಬೌಲಿಂಗ್ ಕೋಚ್!
INDvENG > 2ನೇ ಟಿ20 ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ!...ಇತ್ತ ವೈಭವ್ ಪದಾರ್ಪಣೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಬೌಲಿಂಗ್ ಕೋಚ್!
Published on
INDvENG: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಹಣಾಹಣಿಗೆ ಕೌಂಟ್‌ಡೌನ್ ಶುರುವಾಗಿದ್ದು, ನಾಳೆ (ಜುಲೈ 4) ಮ್ಯಾಂಚೆಸ್ಟರ್‌ನ ಪ್ರಸಿದ್ಧ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಅಂತಿಮ 11ರ ಬಳಗವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಇಂಗ್ಲೆಂಡ್ ತಂಡವನ್ನು ಹ್ಯಾರಿ ಬ್ರೂಕ್ ಮುನ್ನಡೆಸುತ್ತಿದ್ದು, ಸ್ಟಾರ್ ಬೌಲರ್ ಜೋಫ್ರಾ ಆರ್ಚರ್ ದೀರ್ಘಾವಧಿಯ ಬಳಿಕ ತಂಡಕ್ಕೆ ಮರಳಿರುವುದು ಆತಿಥೇಯರ ಬಲವನ್ನು ಹೆಚ್ಚಿಸಿದೆ. ಸರಣಿಯ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದರಿಂದ, ಉಭಯ ತಂಡಗಳು ಈ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ತವಕದಲ್ಲಿವೆ.

ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡ್ತಾರಾ..?

ಈ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ವಿಷಯವೆಂದರೆ, ಇತ್ತೀಚೆಗೆ ಐಪಿಎಲ್‌ನಲ್ಲಿ ಧೂಳೆಬ್ಬಿಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಅಂತರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರೂ ವೈಭವ್‌ಗೆ ಇದುವರೆಗೆ ಕಣಕ್ಕಿಳಿಯುವ ಅವಕಾಶ ಸಿಕ್ಕಿಲ್ಲ.
ಪ್ರಸ್ತುತ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಸತತ ಫಾರ್ಮ್ ಕೊರತೆಯಿಂದ ಬಳಲುತ್ತಿರುವುದರಿಂದ, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವೈಭವ್ ಸೂರ್ಯವಂಶಿ ಅವರಿಗೆ ಓಪನರ್ ಆಗಿ ಚಾನ್ಸ್ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ 16 ಪಂದ್ಯಗಳಿಂದ ಬರೋಬ್ಬರಿ 776 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದ ವೈಭವ್​ರನ್ನು ಟೀಮ್​ ಇಂಡಿಯಾದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಅನುಭವಿಗಳಿಗೆ ಕೋಚ್ ಬೆಂಬಲ

ವೈಭವ್ ಪದಾರ್ಪಣೆ ಕುರಿತು ಮಾತನಾಡಿರುವ ಭಾರತ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್ ಗೆದ್ದ ಅನುಭವಿ ಆಟಗಾರ ಮತ್ತು ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಯುವ ಆಟಗಾರರು ತಂಡದ ಬಾಗಿಲು ತಟ್ಟುತ್ತಿರುವುದು ಒಳ್ಳೆಯ ವಿಷಯವೇ, ಆದರೆ ನಾವು ಸದ್ಯ ಅನುಭವಿ ಆಟಗಾರರಿಗೆ ಬೆಂಬಲ ನೀಡಲಿದ್ದೇವೆ ಎಂದು ಹೇಳಿದ್ದಾರೆ. ಹೀಗಾಗಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚ್ ಗೌತಮ್ ಗಂಭೀರ್ ಯುವ ಆಟಗಾರನಿಗೆ ಮಣೆ ಹಾಕುತ್ತಾರಾ ಅಥವಾ ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ(ಏಜೆನ್ಸೀಸ್​).
ಇಂಗ್ಲೆಂಡ್ ಪ್ಲೇಯಿಂಗ್ XI
ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್ (ನಾಯಕ), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರ್ರಾನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಜೋಶ್ ಟಾಂಗ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net