18 ವರ್ಷಗಳ ಫ್ಲೆಮಿಂಗ್ ಶಕೆ ಅಂತ್ಯ: CSK ಗೆ ನೂತನ ಹೆಡ್‌ಕೋಚ್ ಆಗಿ ಜಹೀರ್ ಖಾನ್ ನೇಮಕ! Zaheer Khan

18 ವರ್ಷಗಳ ಸ್ಟೀಫನ್ ಫ್ಲೆಮಿಂಗ್ ಶಕೆ ಅಂತ್ಯ! ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಹೊಸ ಮುಖ್ಯ ಕೋಚ್ ಆಗಿ ಭಾರತದ ಮಾಜಿ ವೇಗಿ ಜಹೀರ್ ಖಾನ್ (Zaheer Khan) ನೇಮಕ. ಸಿಎಸ್‌ಕೆ ಲೇಟೆಸ್ಟ್ ಕ್ರಿಕೆಟ್ ಅಪ್ಡೇಟ್ಸ್ ಇಲ್ಲಿದೆ.
Former Indian pacer Zaheer Khan appointed as the new head coach of the Chennai Super Kings (CSK) team.
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಹೊಸ ಮುಖ್ಯ ಕೋಚ್ ಆಗಿ ಭಾರತದ ಮಾಜಿ ವೇಗಿ ಜಹೀರ್ ಖಾನ್ ನೇಮಕ
Published on

ಚೆನ್ನೈ: ಐದು ಬಾರಿ ಐಪಿಎಲ್​ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಕೋಚಿಂಗ್ ಬಳಗದಲ್ಲಿ ಬೃಹತ್ ಬದಲಾವಣೆಯಾಗಿದ್ದು, ಭಾರತದ ಮಾಜಿ ಎಡಗೈ ವೇಗದ ಬೌಲರ್ ಜಹೀರ್ ಖಾನ್ (Zaheer Khan) ಈಗ ಸಿಎಸ್‌ಕೆಯ ಹೊಸ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕಳೆದ 18 ಸೀಸನ್‌ಗಳಿಂದ ತಂಡದ ಯಶಸ್ಸಿನ ಹಿಂದೆ ನಿಂತಿದ್ದ ಸ್ಟೀಫನ್ ಫ್ಲೆಮಿಂಗ್ ಯುಗ ಅಂತ್ಯಗೊಂಡಿದ್ದು, ಹಳೇ ಹಾದಿಯನ್ನು ಬಿಟ್ಟು ಹೊಸ ದಾರಿ ಹಿಡಿಯಲು ಸಿಎಸ್‌ಕೆ ಫ್ರಾಂಚೈಸಿ ನಿರ್ಧರಿಸಿದೆ. ಸೋಮವಾರ ಟ್ವಿಟರ್ ನಲ್ಲಿ ಅಧಿಕೃತ ಪೋಸ್ಟ್ ಹಂಚಿಕೊಳ್ಳುವ ಮೂಲಕ ಫ್ರಾಂಚೈಸಿ ಈ ಅಚ್ಚರಿಯ ಸುದ್ದಿಯನ್ನು ಹೊರಹಾಕಿದೆ.

Also Read
ಸಿಎಸ್‌ಕೆ ‘ಹೃದಯ ಬಡಿತ’ ಸ್ತಬ್ಧ: 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ಕೋಚ್ ಸ್ಟೀಫನ್ ಫ್ಲೆಮಿಂಗ್ ಔಟ್​; 18 ವರ್ಷಗಳ ಸುದೀರ್ಘ ಪಯಣ ಮುಕ್ತಾಯ! Stephen Fleming Left CSK
Former Indian pacer Zaheer Khan appointed as the new head coach of the Chennai Super Kings (CSK) team.

18 ವರ್ಷಗಳ ಫ್ಲೆಮಿಂಗ್ ಶಕೆ ಅಂತ್ಯ

2009 ರಿಂದ ಚೆನ್ನೈ ತಂಡದ ಹೆಡ್ ಕೋಚ್ ಆಗಿ ಜವಾಬ್ದಾರಿ ನಿಭಾಯಿಸಿದ್ದ ನ್ಯೂಜಿಲೆಂಡ್‌ನ ಸ್ಟೀಫನ್ ಫ್ಲೆಮಿಂಗ್, ಸಿಎಸ್‌ಕೆಯನ್ನು ವಿಶ್ವದ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಮಾರ್ಗದರ್ಶನದಲ್ಲೇ ಚೆನ್ನೈ ತಂಡ ಐದು ಐಪಿಎಲ್ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿತ್ತು.

ಆದರೆ, ಕಳೆದ ಕೆಲವು ಸೀಸನ್‌ಗಳಿಂದ ತಂಡದ ಪ್ರದರ್ಶನದಲ್ಲಿ ಕುಸಿತ ಉಂಟಾಗಿತ್ತು. ಅದರಲ್ಲೂ 2026ರ ಐಪಿಎಲ್ ಸೀಸನ್ ಸಿಎಸ್‌ಕೆಗೆ ತೀವ್ರ ನಿರಾಶದಾಯಕವಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 6 ಜಯ ಸಾಧಿಸಿದ ತಂಡ, ಪ್ಲೇಆಫ್ ತಲುಪುವಲ್ಲಿ ವಿಫಲವಾಗಿ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿತ್ತು. ಈ ಸತತ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಫ್ಲೆಮಿಂಗ್ ಜವಾಬ್ದಾರಿಯಿಂದ ಕೆಳಗಳಿದಿದ್ದು, ತಂಡಕ್ಕೆ ಹೊಸ ತರಬೇತುದಾರನ ಅಗತ್ಯವಿತ್ತು.

ಜಹೀರ್ ಆಯ್ಕೆ ಸೂಕ್ತವೇ?

ಭಾರತದ ಪರ ನೂರಾರು ಪಂದ್ಯಗಳನ್ನು ಆಡಿರುವ ಜಹೀರ್ ಖಾನ್, ಅಪಾರ ಅಂತಾರಾಷ್ಟ್ರೀಯ ಕ್ರಿಕೆಟ್​ ಅನುಭವ ಹೊಂದಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ 21 ವಿಕೆಟ್ ಪಡೆದು ಭಾರತದ ಯಶಸ್ಸಿನ ಹಿಂದಿದ್ದ ಪ್ರಮುಖ ಆಟಗಾರರಲ್ಲಿ ಇವರು ಒಬ್ಬರಾಗಿದ್ದರು. ಕೇವಲ ಆಟಗಾರನಾಗಿಯಷ್ಟೇ ಅಲ್ಲದೆ, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳೊಂದಿಗೆ ಮೆಂಟರ್ ಹಾಗೂ ಕೋಚಿಂಗ್ ಹುದ್ದೆಗಳನ್ನು ನಿರ್ವಹಿಸಿದ ಅನುಭವವೂ ಇವರಿಗಿದೆ.

ಮಾಜಿ ನಾಯಕ ಎಂ.ಎಸ್. ಧೋನಿ, ಹಾಲಿ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ಮತ್ತು ಮಾಲೀಕರು ಸೇರಿ ನಡೆಸಿದ ಸಭೆಯಲ್ಲಿ, ಈ ಬಾರಿ ತಂಡಕ್ಕೆ ಒಬ್ಬ ಭಾರತೀಯ ಹೆಡ್ ಕೋಚ್ ಬೇಕು ಎಂಬ ಒಮ್ಮತ ಮೂಡಿತ್ತು. ಅದರಲ್ಲೂ ಧೋನಿಯ ವಿಶೇಷ ನಂಬಿಕೆ ಜಹೀರ್ ಖಾನ್‌ಗೆ ಈ ದೊಡ್ಡ ಜವಾಬ್ದಾರಿ ಸಿಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ವರದಿಯಾಗಿದೆ.

ಸಿಎಸ್‌ಕೆಗೆ ಮರುಜೀವ ನೀಡುತ್ತಾರಾ 'ಜಾಕ್'?

ಎಂ.ಎಸ್. ಧೋನಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಋತುರಾಜ್ ಗಾಯಕ್ವಾಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈಗ ಜಹೀರ್ ಖಾನ್ ಕೋಚ್ ಆಗಿ ಎಂಟ್ರಿ ಕೊಟ್ಟ ಬಳಿಕ ಹಳೇ ಲಯಕ್ಕೆ ಮರಳಲು ಸಿಎಸ್‌ಕೆ ಸಜ್ಜಾಗಿದೆ. ಫ್ರಾಂಚೈಸಿಯ ಯಶಸ್ಸಿನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ಮತ್ತು ಯುವ ಆಟಗಾರರನ್ನು ಕಣಕ್ಕೆ ಸಜ್ಜುಗೊಳಿಸುವುದು ಜಹೀರ್ ಮುಂದಿರುವ ದೊಡ್ಡ ಸವಾಲಾಗಿದೆ. ಒಟ್ಟಿನಲ್ಲಿ, ಜಹೀರ್ ಖಾನ್ ಆಗಮನದಿಂದ ಯೆಲ್ಲೋ ಆರ್ಮಿಯಲ್ಲಿ ಹೊಸ ಉತ್ಸಾಹ ಮೂಡಿದ್ದು, ಮುಂಬರುವ ಸೀಸನ್‌ನಲ್ಲಿ ಸಿಎಸ್‌ಕೆ ಯಾವ ರೀತಿಯ ಮ್ಯಾಜಿಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net