92 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ಸಾಧಿಸಿದ ಈಜಿಪ್ಟ್‌: ಜಿ ಗುಂಪಿನಲ್ಲಿ ಅಗ್ರಸ್ಥಾನ

92 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ಸಾಧಿಸಿದ ಈಜಿಪ್ಟ್‌: ಜಿ ಗುಂಪಿನಲ್ಲಿ ಅಗ್ರಸ್ಥಾನ
92 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ಸಾಧಿಸಿದ ಈಜಿಪ್ಟ್‌: ಜಿ ಗುಂಪಿನಲ್ಲಿ ಅಗ್ರಸ್ಥಾನ
Published on
ವ್ಯಾಂಕೋವರ್: ಫರೋಸ್ ಎಂದು ಕರೆಯಲ್ಪಡುವ ಈಜಿಪ್ಟ್ ತಂಡ ಫಿಫಾ ವಿಶ್ವಕಪ್‌ನಲ್ಲಿ ಪದಾರ್ಪಣೆ ಮಾಡಿದ 92 ವರ್ಷಗಳ ಬಳಿಕ ತನ್ನ ಚೊಚ್ಚಲ ಗೆಲುವು ಸಾಧಿಸಿದೆ. 1934ರಲ್ಲಿ ಮೊದಲ ಬಾರಿ ಫಿಾ ವಿಶ್ವಕಪ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಈಜಿಪ್ಟ್ 23ನೇ ಆವೃತ್ತಿಯ ತನ್ನ 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 3-1 ಅಂತರದಿಂದ ಗೆದ್ದು ಈ ಸಾಧನೆ ಮಾಡಿತು. ಇದರೊಂದಿಗೆ ಜಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದ್ದು, ನಾಕೌಟ್‌ಗೇರುವ ಅವಕಾಶ ವೃದ್ಧಿಸಿಕೊಂಡಿದೆ.
ಬಿ.ಸಿ. ಪ್ಲೇಸ್ ವ್ಯಾಂಕೋವರ್ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ (ಭಾರತೀಯ ಕಾಲಮಾನ ಸೋಮವಾರ ಮುಂಜಾನೆ) ಪಂದ್ಯದಲ್ಲಿ ಈಜಿಪ್ಟ್ ಹಿನ್ನಡೆಯಿಂದ ಕಂಬ್ಯಾಕ್ ಮಾಡಿತು. ಕಳೆದ ಆವೃತ್ತಿಯ ಅರ್ಹತೆಯಿಂದ ವಂಚಿತವಾಗಿದ್ದ ಈಜಿಪ್ಟ್ ಮೊದಲಾರ್ಧದಲ್ಲಿ 1-0 ಹಿನ್ನಡೆ ಕಂಡಿತು. ಇನ್‌ಸ್ಟಾಗ್ರಾಮ್ನ ಸೆನ್ಸೇಷನ್ ಟಿಮ್ ಪೇನ್ ನೀಡಿದ ಕಾರ್ನರ್ ಕಿಕ್‌ನಲ್ಲಿ ಫಿನ್ ಸುರ್ಮನ್ ಅದ್ಭುತ ಹೆಡರ್ ಮೂಲಕ 15ನೇ ನಿಮಿಷದಲ್ಲಿ ‘ಆಲ್‌ವೈಟ್ಸ್’ ನ್ಯೂಜಿಲೆಂಡ್‌ಗೆ ಮುನ್ನಡೆ ಒದಗಿಸಿದರು.
35ನೇ ನಿಮಿಷದದಲ್ಲಿ ಪಂದ್ಯ ಸಮಬಲಗೊಳಿಸುವ ಅವಕಾಶದಲ್ಲಿ ಈಜಿಪ್ಟ್ ಓಮರ್ ಮಾರ್ಮೌಶ್ ವಿಲರಾದರು. ದ್ವಿತೀಯಾರ್ಧದಲ್ಲಿ ಮೊಸ್ತಾ ಜಿಕೊ 58ನೇ ನಿಮಿಷದಲ್ಲಿ ಈಜಿಪ್ಟ್ ಪರ ಮೊದಲ ಗೋಲು ಸಿಡಿಸಿ ಪಂದ್ಯ ಸಮಬಲಗೊಳಿಸಿದರೆ, 10 ನಿಮಿಷದ ಅಂತರದಲ್ಲಿ ಅನುಭವಿ ಮೊಹಮದ್ ಸಲಾಹ್ (67ನೇ ನಿಮಿಷ) ವೈಯಕ್ತಿಕ 68ನೇ ಅಂತಾರಾಷ್ಟ್ರೀಯ ಗೋಲು ಬಾರಿಸಿ ಮುನ್ನಡೆ ಒದಗಿಸಿದರು.
ಸಲಾಹ್ ಗೋಲು ಗಳಿಸಲು ನೆರವಿಗೆ ಜಿಕೊ ಬ್ಯಾಕ್ ಹೀಲ್ ಪಾಸ್ ನೀಡಿದರು. 34 ವರ್ಷದ ಮೊಹಮದ್ ಸಲಾಹ್ ರಷ್ಯಾದಲ್ಲಿ ನಡೆದ 2018ರ ವಿಶ್ವಕಪ್‌ನಲ್ಲಿ ಎರಡು ಗೋಲು ಗಳಿಸಿದ್ದರು. 82ನೇ ನಿಮಿಷದಲ್ಲಿ ಟ್ರೆಜೆಗುಟ್ ಡೈವಿಂಗ್ ಹೆಡರ್ ಮೂಲಕ ಈಜಿಪ್ಟ್ ಗೆಲುವಿನ ಅಂತರ ಹಿಗ್ಗಿಸಿದರು.
4ನೇ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಈಜಿಪ್ಟ್ ನಾಕೌಟ್‌ಗೇರಲು ಉತ್ತಮ ಅವಕಾಶ ಹೊಂದಿದ್ದು, ಶನಿವಾರ ಇರಾನ್ ವಿರುದ್ಧ ಕನಿಷ್ಠ ಡ್ರಾದ ಅವಶ್ಯಕತೆ ಹೊಂದಿದೆ. 2010ರ ನಂತರ ಆಡುತ್ತಿರುವ ನ್ಯೂಜಿಲೆಂಡ್ ಟೂರ್ನಿಯಲ್ಲಿರುವ ಅತಿ ಕಡಿಮೆ ಶ್ರೇಯಾಂಕಿತ ತಂಡ ಎನಿಸಿದೆ.
ಈಜಿಪ್ಟ್: 3
ಮೊಸ್ತಾ ಜಿಕೊ (58ನೇ ನಿಮಿಷ)
ಮೊಹಮದ್ ಸಲಾಹ್ (67)
ಟ್ರೆಜೆಗುಟ್ (82)
ನ್ಯೂಜಿಲೆಂಡ್:1
ಫಿನ್ ಸುರ್ಮನ್ (15)
68. ಮೊಹಮದ್ ಸಲಾಹ್ ಈಜಿಪ್ಟ್ ಪರ ಸರ್ವಾಧಿಕ ಅಂತಾರಾಷ್ಟ್ರೀಯ ಗೋಲು ಸಿಡಿಸಿದ ಹಾಲಿ ಕೋಚ್ ಹೊಸ್ಸಮ್ ಹಸನ್ (69) ದಾಖಲೆ ಹಿಂದಿಕ್ಕಲು ಇನ್ನು 2 ಗೋಲು ಗಳಿಸಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net