ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಿದ ಕಿವೀಸ್​; ಶಿವಂ ದುಬೆ ಹೋರಾಟ ವ್ಯರ್ಥ

ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಿದ ಕಿವೀಸ್​; ಶಿವಂ ದುಬೆ ಹೋರಾಟ ವ್ಯರ್ಥ
ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಿದ ಕಿವೀಸ್​; ಶಿವಂ ದುಬೆ ಹೋರಾಟ ವ್ಯರ್ಥ
Published on
ವಿಶಾಖಪಟ್ಟಣ: ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯದ ನಡುವೆ ಶಿವಂ ದುಬೆ (65 ರನ್​, 23 ಎಸೆತ, 3 ಬೌಂಡರಿ, 7 ಸಿಕ್ಸರ್​) ನಡೆಸಿದ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತ ತಂಡ ನಾಲ್ಕನೇ ಟಿ20 (fourth T20I) ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧ 50 ರನ್​ಗಳಿಂದ ಪರಾಭವಗೊಂಡಿದೆ. ಇದರೊಂದಿಗೆ ಮಿಚೆಲ್​ ಸ್ಯಾಂಟ್ನರ್​ ಪಡೆ ಐದು ಪಂದ್ಯಗಳ ಸರಣಿಯಲ್ಲಿ ಸೂರ್ಯಕುಮಾರ್ (Suryakumar Yadav)​ ಬಳಗದ ಮುನ್ನಡೆಯನ್ನು 3-1ಕ್ಕೆ ತಗ್ಗಿಸಿತು.
ವೈಎಸ್​ಆರ್​ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಆರಂಭಿಕರಾದ ಟಿಮ್​ ಸೀರ್ಟ್​ (62 ರನ್​, 36 ಎಸೆತ, 7 ಬೌಂಡರಿ, 3 ಸಿಕ್ಸರ್​) ಮತ್ತು ಡೆವೊನ್​ ಕಾನ್​ ವೇ (42) ಒದಗಿಸಿದ ಬಿರುಸಿನ ಆರಂಭದ ಜತೆಗೆ ಸ್ಲಾಗ್​ ಓವರ್​ಗಳಲ್ಲಿ ಡೆರಿಲ್​ ಮಿಚೆಲ್​ (39* ರನ್​,18 ಎಸೆತ, 2 ಬೌಂಡರಿ, 3 ಸಿಕ್ಸರ್​) ಉಪಯುಕ್ತ ಆಟದ ನೆರವಿನಿಂದ ನ್ಯೂಜಿಲೆಂಡ್​ 7 ವಿಕೆಟ್​ಗೆ 215 ರನ್​ಗಳ ಬೃಹತ್​ ಮೊತ್ತ ಪೇರಿಸಿತು. ಚೇಸಿಂಗ್​ನಲ್ಲಿ 82 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡ ಭಾರತ ತಂಡ ಲಯ ತಪ್ಪಿತು. ಆಗ, ಕಿವೀಸ್​ ಬೌಲರ್​ಗಳ ಎದುರು ಸಿಕ್ಸರ್​ಗಳ ಮಳೆಗರೆದ ಶಿವಂ ದುಬೆ (Shivam Dube) ಪ್ರತಿರೋಧ ತೋರಿದರೂ, ಅಂತಿಮವಾಗಿ ಭಾರತ 18.4 ಓವರ್​ಗಳಲ್ಲಿ 165 ರನ್​ಗಳಿಗೆ ಆಲೌಟ್​ ಆಗಿ ಸೋಲು ಅನುಭವಿಸಿತು.
ದುಬೆ ಏಕಾಂಗಿ ಹೋರಾಟ ವ್ಯರ್ಥ
ಚೇಸಿಂಗ್​ನ ಮೊದಲ ಎಸೆತದಲ್ಲಿ ಇನ್ ಫಾರ್ಮ್​ ಎಡಗೈ ಬ್ಯಾಟರ್​ ಅಭಿಷೇಕ್​ ಶರ್ಮ (0) ಡಕೌಟ್​ ಆದರೆ, ಹಿಂದಿನ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದ ನಾಯಕ ಸೂರ್ಯಕುಮಾರ್​ (8) ನಿರಾಸೆ ಮೂಡಿಸಿದರು. ಕಳಪೆ ನಿರ್ವಹಣೆ ಮುಂದುವರಿಸಿದ ಸಂಜು ಸ್ಯಾಮ್ಸನ್​ (24) ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾದರು. ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ (2) ಹೆಚ್ಚು ಹೊತ್ತು ನಿಲ್ಲದೆ ಡಗೌಟ್​ ಸೇರಿದರು. ಆಗ, ರಿಂಕು ಸಿಂಗ್​ (39)& ಶಿವಂ ದುಬೆ ಜೋಡಿ 11 ಎಸೆತಗಳಲ್ಲಿ 19 ರನ್​ಗಳಿಸಿದಾಗ ಜಾಕ್​ ಫೌಲ್ಕ್ಸ್​ ಭಾರತಕ್ಕೆ ಚೇಸಿಂಗ್​ನಲ್ಲಿ ಬ್ರೇಕ್​ ಹಾಕಿದರು. ನಂತರ ಶಿವಂ ದುಬೆ ಜತೆಯಾದ ಹರ್ಷಿತ್​ ರಾಣಾ ಉತ್ತಮ ಬೆಂಬಲ ನೀಡಿದರು. ಏಕಾಂಗಿಯಾಗಿ ಹೋರಾಡಿದ ಶಿವಂ 15 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದರು. ಆರನೇ ವಿಕೆಟ್​ಗೆ ಹರ್ಷಿತ್​ ರಾಣಾ-ಶಿವಂ ದುಬೆ 27 ಎಸೆತಗಳಲ್ಲಿ 63 ರನ್​ಗಳಿಸಿದರೆ, ಇದರಲ್ಲಿ ದುಬೆ ಒಬ್ಬರೇ 56 ರನ್​ ಕಸಿದರು. ನಾನ್​ ಸ್ಟ್ರೈಕ್​ನಲ್ಲಿದ್ದ ಶಿವಂ ದುಬೆ 15ನೇ ಓವರ್​ನಲ್ಲಿ ದುರದೃಷ್ಟಕರವಾಗಿ ರನೌಟ್​ ಆಗುವುದರೊಂದಿಗೆ ಭಾರತದ ಗೆಲುವಿನ ಆಸೆಯೂ ಕಮರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net