ದೇಶೀಯ ಕ್ರಿಕೆಟ್ ಋತುವಿಗೆ ಚಾಲನೆ: ವೈಭವ್ ಸೂರ್ಯವಂಶಿ ಆಕರ್ಷಣೆ, ನೇರ ಪ್ರಸಾರ ಮಾಹಿತಿ ಇಲ್ಲಿದೆ!

ದೇಶೀಯ ಕ್ರಿಕೆಟ್ ಋತುವಿಗೆ ಚಾಲನೆ: ವೈಭವ್ ಸೂರ್ಯವಂಶಿ ಆಕರ್ಷಣೆ, ನೇರ ಪ್ರಸಾರ ಮಾಹಿತಿ ಇಲ್ಲಿದೆ!
ದೇಶೀಯ ಕ್ರಿಕೆಟ್ ಋತುವಿಗೆ ಚಾಲನೆ: ವೈಭವ್ ಸೂರ್ಯವಂಶಿ ಆಕರ್ಷಣೆ, ನೇರ ಪ್ರಸಾರ ಮಾಹಿತಿ ಇಲ್ಲಿದೆ!
Published on

ಬೆಂಗಳೂರು:

ಪ್ರತಿಷ್ಠಿತ ದುಲೀಪ್ ಟ್ರೋಫಿಯ 63ನೇ ಆವೃತ್ತಿಯೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 2026-27ರ ದೇಶೀಯ ಕ್ರಿಕೆಟ್ ಋತುವಿಗೆ ಭಾನುವಾರ ಚಾಲನೆ ಸಿಗಲಿದೆ. ಬೆಂಗಳೂರು ಹೊರವಲಯದ ಬಿಸಿಸಿಐ ಶ್ರೇಷ್ಠತಾ ಕೇಂದ್ರ (ಸಿಒಇ) ಫೈನಲ್ ಹೊರತುಪಡಿಸಿ ನಾಕೌಟ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಟಿ20 ಸೆನ್ಸೇಶನ್ ವೈಭವ್ ಸೂರ್ಯವಂಶಿ ಪ್ರಮುಖ ಆಕರ್ಷಣೆ ಎನಿಸಲಿದ್ದಾರೆ.

ದೇಶೀಯ ಕ್ರಿಕೆಟ್ ಮತ್ತು ಭಾರತ ಎ ತಂಡದ ಆಯ್ಕೆಯ ನಡುವಿನ ಸೇತುವೆ ಎನಿಸಿರುವ ನಾಕೌಟ್ ಮಾದರಿಯ ಟೂರ್ನಿಯಲ್ಲಿ ಒಟ್ಟು ಆರು ವಲಯ ತಂಡಗಳು ಕಣಕ್ಕಿಳಿಯಲಿವೆ. ಕಳೆದ ಆವೃತ್ತಿಯ ಚಾಂಪಿಯನ್ ಕೇಂದ್ರ ವಲಯ ಹಾಗೂ ರನ್ನರ್ ಅಪ್ ದಕ್ಷಿಣ ವಲಯ ತಂಡಗಳು ನೇರವಾಗಿ ಸೆಮಿಫೈನಲ್ ಅರ್ಹತೆ ಪಡೆದಿವೆ. ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಗ್ರೌಂಡ್-1, 2ರಲ್ಲಿ ನಿಗದಿಯಾಗಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಕ್ರಮವಾಗಿ ಉತ್ತರ-ಪಶ್ಚಿಮ ವಲಯ ಹಾಗೂ ಪೂರ್ವ-ಈಶಾನ್ಯ ವಲಯ ತಂಡಗಳು ಸೆಣಸಲಿವೆ.
ಆಗಸ್ಟ್ 30ರಿಂದ ಸೆ.2ರವರೆಗೆ ಸೆಮಿಫೈನಲ್ಸ್ ಸಹ ಬಿಸಿಸಿಐ ಸಿಒಇಯಲ್ಲೇ ನಡೆಯಲಿದ್ದು, ಚೆನ್ನೈನಲ್ಲಿ ಸೆ.6ರಿಂದ 10ರವರೆಗೆ ಫೈನಲ್ ಪಂದ್ಯ ನಿಗದಿಯಾಗಿದೆ. ಆಟಗಾರರ ಪದೇ ಪದೆ ಗಾಯದ ಸಮಸ್ಯೆ ಹಾಗೂ ಆವರ್ತನ ಪದ್ಧತಿಯಿಂದಾಗಿ ಮುಂಬರುವ ನ್ಯೂಜಿಲೆಂಡ್ ಪ್ರವಾಸ ಹಾಗೂ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಗಳ ಜತೆಗೆ ಭಾರತ ಎ ತಂಡದ ಉದಯೋನ್ಮುಖ ಆಕಾಂಕ್ಷಿಗಳಿಗೆ ಜತೆಗೆ ಅನುಭವಿಗಳಿಗೆ ವೇದಿಕೆ ಎನಿಸಿದೆ.
ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಸ್ಟಾರ್ ಸ್ಪೋಟ್ಸ್​​ ಖೇಲ್​, ಜಿಯೋಹಾಟ್​ಸ್ಟಾರ್
ಆಯ್ಕೆ ಸಮಿತಿ ಗಮನ ಸೆಳೆಯಲು ವೇದಿಕೆ
ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಟಿ20ಯಲ್ಲಿ ಭರವಸೆ ಮೂಡಿಸಿರುವ 15 ವರ್ಷದ ವೈಭವ್ ಸೂರ್ಯವಂಶಿ ಪೂರ್ವ ವಲಯ ತಂಡದಲ್ಲಿ ಸ್ಥಾನ ಪಡೆದಿದ್ದು, ಉಪನಾಯಕರಾಗಿಯೂ ನೇಮಕಗೊಂಡಿದ್ದಾರೆ. ಇದುವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿರುವ 8 ಪಂದ್ಯಗಳಲ್ಲಿ 207 ರನ್‌ಗಳಿಸಿರುವ ವೈಭವ್ ಪಾಲಿಗೆ ರೆಡ್‌ಬಾಲ್ ಸರಣಿ ಮಹತ್ವದ್ದಾಗಿರಲಿದೆ.
ಅಕ್ಟೋಬರ್-ನವೆಂಬರ್‌ನಲ್ಲಿ ಕಿವೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಮೀಸಲು ಆರಂಭಿಕ ಆಟಗಾರನಾಗಿ ಸ್ಥಾನ ಪಡೆಯಲು, ಆಯ್ಕೆಗಾರರ ಗಮನಸೆಳೆಯುವ ಅವಕಾಶ ವೈಭವ್ ಮುಂದಿದೆ. ಕಳೆದ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಗರಿಷ್ಠ 950 ರನ್‌ಗಳಿಸಿ ಭಾರತ ಎ ತಂಡಕ್ಕೂ ಆಯ್ಕೆ ಸಮಿತಿ ಪರಿಗಣಿಸಲ್ಪಡದ ಕನ್ನಡಿಗ ಆರ್. ಸ್ಮರಣ್ (ದಕ್ಷಿಣ) ಜತೆಗೆ ಅಭಿಮನ್ಯು ಈಶ್ವರನ್, ಇಶಾನ್ ಕಿಶನ್, ಮುಕೇಶ್ ಕುಮಾರ್, ಮೊಹಮದ್ ಶಮಿ (ಪೂರ್ವ) ರಾಷ್ಟ್ರೀಯ ತಂಡಕ್ಕೆ ಪುನರಾಗಮನದ ನಿರೀಕ್ಷೆಯಲ್ಲಿದ್ದಾರೆ.
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಸತತ ಎರಡು ಟ್ರೋಫಿ ಗೆದ್ದುಕೊಟ್ಟಿರುವ ರಜತ್ ಪಾಟೀದಾರ್ ಹಾಲಿ ಚಾಂಪಿಯನ್ ಕೇಂದ್ರ ವಲಯ ಮುನ್ನಡೆಸಲಿದ್ದು, ಋತುರಾಜ್ ಗಾಯಕ್ವಾಡ್ (ಪಶ್ಚಿಮ), ತಿಲಕ್ ವರ್ಮ (ದಕ್ಷಿಣ), ಕನ್ಹಯ್ಯ ವಾಧವನ್ (ಉತ್ತರ) ನಾಯಕರಾಗಿ ಕಣಕ್ಕಿಳಿಯಲಿದ್ದಾರೆ. ಪ್ರತಿ ಬಾರಿಯೂ ಸಾಂಕೇತಿಕ ಪ್ರತಿನಿಧಿಗಳನ್ನು ಹೊಂದಿದ್ದ ರಣಜಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ಆಟಗಾರರು ಈ ಬಾರಿ ಉತ್ತರ ವಲಯ ತಂಡದಲ್ಲಿ ಆರು ಆಟಗಾರರೊಂದಿಗೆ ಪ್ರಾಬಲ್ಯ ಸಾಧಿಸಿದೆ. ಕನ್ಹಯ್ಯ ವಾಧವನ್ ವಲಯ ತಂಡವನ್ನು ಮುನ್ನಡೆಸಿದ ಜಮ್ಮುವಿನ ಮೊದಲ ಕ್ರಿಕೆಟಿಗ ಎನಿಸಲಿದ್ದಾರೆ.
ಟೂರ್ನಿಯ ವೇಳಾಪಟ್ಟಿ
ಕ್ವಾರ್ಟರ್ ಫೈನಲ್ಸ್
ಯಾವಾಗ

ಪಂದ್ಯ

ಎಲ್ಲಿ
ಆಗಸ್ಟ್ 23-26

ಪೂರ್ವ-ಈಶಾನ್ಯ

ಉತ್ತರ-ಪಶ್ಚಿಮ
ಸೆಮಿಫೈನಲ್ಸ್
ಆ.30-ಸೆ.2

ಕೇಂದ್ರ ವಲಯ - ಕ್ವಾ.ಫೈನಲ್-1 ವಿಜೇತರು

ದಕ್ಷಿಣ ವಲಯ-ಕ್ವಾ.ಫೈನಲ್-2 ವಿಜೇತರು
ಎಲ್ಲಿ: ಬಿಸಿಸಿಐ ಶ್ರೇಷ್ಠತಾ ಕೇಂದ್ರ
ಸೆ.06-10

ಫೈನಲ್
ಎಲ್ಲಿ: ಎಂ. ಚಿದಂಬರಂ ಸ್ಟೇಡಿಯಂ, ಚೆನ್ನೈ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net