ವೈಭವ್​ಗೆ ಟೆಸ್ಟ್​ ಕ್ರಿಕೆಟ್ ಆಡೋ ಸಾಮರ್ಥ್ಯವಿದ್ಯಾ? ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ದಿಲೀಪ್ ಕೊಟ್ಟ ಉತ್ತರ ವೈರಲ್​

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • ಐರ್ಲೆಂಡ್​ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ವೈಭವ್​ ಸೂರ್ಯವಂಶಿಗೆ ಅವಕಾಶ?
  • ಟಿ20, ಏಕದಿನ ಫಾರ್ಮೆಟ್​ಗಳಲ್ಲಿ ವೈಭವ್ ಯಶಸ್ವಿ, ಟೆಸ್ಟ್​ ಕ್ರಿಕೆಟ್​?
  • ಟೆಸ್ಟ್ ಕ್ರಿಕೆಟ್​ನಲ್ಲಿ ವೈಭವ್​ ಯಶಸ್ಸಿನ ಬಗ್ಗೆ ಮಾಜಿ ಕ್ರಿಕೆಟಿಗ ಪ್ರತಿಕ್ರಿಯೆ
ಲಂಡನ್​: ಪ್ರಸಕ್ತ ಬೆಲ್​ಫಾಸ್ಟ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಐರ್ಲೆಂಡ್​ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೇಯಸ್​ ಅಯ್ಯರ್​ ಪಡೆ ಮೊದಲ ಪಂದ್ಯದಲ್ಲೇ ಭಾರಿ ಮುಖಭಂಗ ಅನುಭವಿಸಿತು. ಆಲ್​ಔಟ್​ ಆದ ಟೀಮ್ ಇಂಡಿಯಾ ಪರ ಯುವ ಬ್ಯಾಟಿಂಗ್​ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಕಣಕ್ಕಿಳಿಯದೆ ಹೋಗಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮಧ್ಯೆ, ವೈಭವ್ ಸಾಮರ್ಥ್ಯ ಕುರಿತಾಗಿ ಪ್ರಶ್ನೆಯೊಂದು ಕೇಳಿಬಂದಿದೆ.
15 ವರ್ಷಕ್ಕೆ ಅಂತಾರಾಷ್ಟ್ರೀಯ ಮತ್ತು ಅನುಭವಿ ಬೌಲರ್​ಗಳ ಬೆವರಿಳಿಸುತ್ತಿರುವ ವೈಭವ್ ಸೂರ್ಯವಂಶಿ ಆಟಕ್ಕೆ ಮಾಜಿ ಹಿರಿಯ ಕ್ರಿಕೆಟಿಗರು ಮತ್ತು ಕ್ರಿಕೆಟ್​ ಅಭಿಮಾನಿಗಳು ಫಿದಾ ಆಗಿದ್ದಾರೆ. ಐಪಿಎಲ್​ ಮತ್ತು ಟಿ20 ಪಂದ್ಯಗಳಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡುತ್ತಿರುವ ಸೂರ್ಯವಂಶಿ, ಮೈದಾನದ ತುಂಬ ಸಿಕ್ಸರ್​ಗಳನ್ನು ಸಿಡಿಸುವ ಶೈಲಿಯಂತು ಪಂದ್ಯದ ರೋಚಕತೆಯನ್ನು ಡಬಲ್ ಆಗಿಸುತ್ತದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ವೈಭವ್​ಗೆ ಟೆಸ್ಟ್​ ಕ್ರಿಕೆಟ್​ ಆಡಲು ಸಾಧ್ಯವೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಮುಂದಿನ ಪಂದ್ಯದಲ್ಲಿ ಅವಕಾಶ

ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ತಂಡದೊಂದಿಗೆ ಪ್ರಸ್ತುತ ಬ್ರಿಟನ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷ ದಿಲೀಪ್ ವೆಂಗ್‌ಸರ್ಕರ್ ಮಾತನಾಡಿ, ಯುವ ಬ್ಯಾಟರ್​ನನ್ನು ಹಾಡಿ ಹೊಗಳಿದ್ದಾರೆ. ವೈಭವ್ ಅವರ ಅದ್ಭುತ 'ಹ್ಯಾಂಡ್-ಐ ಕೋ ಆರ್ಡಿನೇಷನ್ ಮತ್ತು ಅದ್ಭುತ ಶಾಟ್‌ಗಳನ್ನು ಆಡುವ ಸಾಮರ್ಥ್ಯ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ ಎಂದರು.
ತಮಗೆ ಸಿಕ್ಕ ಅವಕಾಶಗಳನ್ನು ಬಿಡೋದಿಲ್ಲ. ಐರ್ಲೆಂಡ್​ ವಿರುದ್ಧದ ಮುಂದಿನ ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಗುವ ಸಂಪೂರ್ಣ ವಿಶ್ವಾಸವಿದೆ. ವೈಭವ್ ಊಹೆಗೂ ಮೀರಿದ ಆಟಗಾರ. ಅವರಲ್ಲಿ ಅಪಾರ ಸಾಮರ್ಥ್ಯವಿದೆ. ಅವರು ಹೊಡೆಯುವ ಕೆಲವು ಕ್ರಿಕೆಟಿಂಗ್​ ಶಾಟ್‌ಗಳಂತು ನಿಜಕ್ಕೂ ನಂಬಲು ಸಾಧ್ಯವೇ ಆಗುವುದಿಲ್ಲ. ಅವರ ಬ್ಯಾಟಿಂಗ್ ಶೈಲಿಯೇ ವಿಭಿನ್ನ ಎಂದು ಹೇಳಿದರು.

ಟೆಸ್ಟ್​ ಕ್ರಿಕೆಟ್​ನಲ್ಲಿ ಸಕ್ಸಸ್​ ಸಾಧ್ಯವೇ?

ಟೆಸ್ಟ್ ಅಥವಾ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ವೈಭವ್ ಯಶಸ್ಸು ಗಳಿಸಲು ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರಿಸಿದ ವೆಂಗ್‌ಸರ್ಕರ್, ಈಗಲೇ ಅದನ್ನು ಹೇಳುವುದು ಕಷ್ಟಸಾಧ್ಯ. ಸದ್ಯಕ್ಕೆ ನಾನು ಅವರನ್ನು ಕೇವಲ ಟಿ20 ಮಾದರಿಯಲ್ಲಿ ಮಾತ್ರ ನೋಡಿದ್ದೇನೆ. ಉಳಿದ ಫಾರ್ಮೆಟ್​ಗಳಲ್ಲಿ ಆಡುವುದನ್ನು ಇನ್ನೂ ನೋಡಿಲ್ಲ. ಆದರೆ, ಒಂದಂತು ಖಚಿತವಾಗಿ ಹೇಳಬಲ್ಲೆ. ಅವಕಾಶ ಸಿಕ್ಕರೆ ಖಂಡಿತ ಅಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ನಂಬಿಕೆ ನನಗೆ ಗಟ್ಟಿಯಾಗಿದೆ ಎಂದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net