ಯಾವ ಬೌಲರ್​ ಕಂಡರೆ ನಿಮಗೆ ಭಯ? ವಂಡರ್​ ಕಿಡ್​ ವೈಭವ್​ ಕೊಟ್ಟ ಉತ್ತರ ಕೇಳಿ ಹುಬ್ಬೇರಿಸಿದ ಕ್ರೀಡಾ ಜಗತ್ತು! Vaibhav Sooryavanshi

ಯಾವ ಬೌಲರ್​ ಕಂಡರೆ ನಿಮಗೆ ಭಯ? ವಂಡರ್​ ಕಿಡ್​ ವೈಭವ್​ ಕೊಟ್ಟ ಉತ್ತರ ಕೇಳಿ ಹುಬ್ಬೇರಿಸಿದ ಕ್ರೀಡಾ ಜಗತ್ತು! Vaibhav Sooryavanshi
ಯಾವ ಬೌಲರ್​ ಕಂಡರೆ ನಿಮಗೆ ಭಯ? ವಂಡರ್​ ಕಿಡ್​ ವೈಭವ್​ ಕೊಟ್ಟ ಉತ್ತರ ಕೇಳಿ ಹುಬ್ಬೇರಿಸಿದ ಕ್ರೀಡಾ ಜಗತ್ತು! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್ ಇತಿಹಾಸದಲ್ಲಿ ಆರೆಂಜ್ ಕ್ಯಾಪ್ ಪಡೆದು ಅತಿ ಕಿರಿಯ ವಯಸ್ಸಿನಲ್ಲಿಯೇ ಸಂಚಲನ ಸೃಷ್ಟಿಸಿದ ವೈಭವ್ ಸೂರ್ಯವಂಶಿ
  • ಯಾವ ಬೌಲರ್ ಗೂ ಹೆದರುವುದಿಲ್ಲ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ ಹದಿಹರೆಯದ ಯುವ ಬ್ಯಾಟ್ಸ್ ಮನ್
  • ಮುಂಬರುವ ದುಲೀಪ್ ಟ್ರೋಫಿ ಟೂರ್ನಿಗೆ ಈಸ್ಟ್ ಜೋನ್ ತಂಡದ ಉಪನಾಯಕನಾಗಿ ಆಯ್ಕೆಯಾದ ವೈಭವ್
  • ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಆಡಲು ಸಜ್ಜಾಗಿರುವ ಯುವ ಕ್ರಿಕೆಟ್ ಸಂಚಲನ
Vaibhav Sooryavanshi : ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ತನ್ನ ಅಸಾಧಾರಣ ಆಟದ ಮೂಲಕ ಕೇವಲ 15ನೇ ವಯಸ್ಸಿಗೆ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿರುವ ಯುವ ಎಡಗೈ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ, ಸದ್ಯ ಟೀಮ್​ ಇಂಡಿಯಾದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದು, ಇತ್ತೀಚೆಗಷ್ಟೇ ಮುಗಿದ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ಅರ್ಧಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ, ತಂಡದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ಕೂಡ ವಹಿಸಿದರು.
ಕಳೆದ ಐಪಿಎಲ್​ ಸೀಸನ್​ನಲ್ಲಿ ವಿರಾಟ್ ಕೊಹ್ಲಿ, ಶುಭಮಾನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರಂತಹ ದಿಗ್ಗಜ್ಜರನ್ನು ಹಿಂದಿಕ್ಕಿ 16 ಪಂದ್ಯಗಳಿಂದ ಬರೋಬ್ಬರಿ 776 ಕಲೆಹಾಕುವ ಮೂಲಕ ವೈಭವ್​ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡರು. ಆಡಿದ ಎರಡೇ ಸೀಸನ್​ನಲ್ಲಿ ಆರೆಂಜ್​ ಕ್ಯಾಪ್​ ಪಡೆಯುವ ಮೂಲಕ ವೈಭವ್​ ದಾಖಲೆ ಬರೆದರು. ಯಾರಿಗೂ ಹೆದರದೇ ಧೈರ್ಯವಾಗಿ ಬ್ಯಾಟ್​ ಬೀಸುವ ನಿರ್ಭಿತಿ ಬ್ಯಾಟಿಂಗ್​ನಿಂದಲೇ ಜಗತ್ತಿನ ಗಮನ ಸೆಳೆದಿರುವ ಈ ಹದಿಹರೆಯದ ಆಟಗಾರ, ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಬೌಲರ್‌ಗಳೆನಿಸಿದ ಜಸ್ಪ್ರೀತ್ ಬುಮ್ರಾ, ಜೋಶ್​ ಹ್ಯಾಸಲ್​ವುಡ್​ ಮತ್ತು ಪ್ಯಾಟ್ ಕಮ್ಮಿನ್ಸ್ ಅವರಂತಹ ದಿಗ್ಗಜ್ಜರ ಬೌಲಿಂಗ್‌ನಲ್ಲೂ ತಮ್ಮ ರೌದ್ರಾವತಾರ ತೋರುವ ಮೂಲಕ ತಾನೊಬ್ಬ ವಿಶೇಷ ಪ್ರತಿಭೆ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿದ್ದಾರೆ.
ಬುಧವಾರ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಯಾವ ಬೌಲರ್ ಎದುರಿಸಲು ನಿಮಗೆ ತುಂಬಾ ಭಯವಾಗುತ್ತದೆ ಎಂಬ ಪ್ರಶ್ನೆಗೆ ವೈಭವ್ ಸೂರ್ಯವಂಶಿ 'ಇಲ್ಲಿಯವರೆಗೆ ಯಾರಿಗೂ ಇಲ್ಲ' ಎಂದು ಬಹಳ ಆತ್ಮವಿಶ್ವಾಸದಿಂದ ಉತ್ತರಿಸಿದ್ದಾರೆ. ಈ ಮೂಲಕ ತನ್ನ ನಿರ್ಭೀತ ಬ್ಯಾಟಿಂಗ್ ಮನೋಭಾವವನ್ನು ಪ್ರದರ್ಶಿಸಿದ್ದಾರೆ.
ಕೇವಲ 15ನೇ ವಯಸ್ಸಿನಲ್ಲಿಯೇ ತನ್ನ ಅಸಾಧಾರಣ ಆತ್ಮವಿಶ್ವಾಸದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಯುವ ಕ್ರಿಕೆಟ್ ಸಂಚಲನ ವೈಭವ್ ಸೂರ್ಯವಂಶಿ, ಮುಂಬರುವ ದುಲೀಪ್ ಟ್ರೋಫಿ ಟೂರ್ನಿಗೆ ಈಸ್ಟ್ ಜೋನ್ ತಂಡದ ಉಪನಾಯಕನಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಇಶಾನ್ ಕಿಶನ್ ನಾಯಕತ್ವದ ಈ ಬಲಶಾಲಿ ತಂಡದಲ್ಲಿ ಕೇವಲ 15 ವರ್ಷದ ಯುವ ಆಟಗಾರನಿಗೆ ಈ ಜವಾಬ್ದಾರಿ ನೀಡಿರುವುದು ವಿಶೇಷ ದಾಖಲೆಯಾಗಿದೆ.
ಬಂಗಾಳ ಮತ್ತು ಜಾರ್ಖಂಡ್ ಆಟಗಾರರ ಪ್ರಾಬಲ್ಯವಿರುವ ಈ ತಂಡದಲ್ಲಿ ಬಿಹಾರದಿಂದ ಆಯ್ಕೆಯಾದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸೂರ್ಯವಂಶಿ, ರೆಡ್-ಬಾಲ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಅವಕಾಶದಲ್ಲೇ ಉಪನಾಯಕನಾಗಿ ನೇಮಕಗೊಂಡಿರುವುದು ಅವರನ್ನು ಭವಿಷ್ಯದ ಎಲ್ಲಾ ಮಾದರಿಯ ಸ್ಟಾರ್ ಆಟಗಾರನನ್ನಾಗಿ ರೂಪಿಸುತ್ತಿರುವುದರ ಸ್ಪಷ್ಟ ಸೂಚಿಯಾಗಿದೆ. ಕೋಲ್ಕತದ ಈಡನ್ ಗಾರ್ಡನ್‌ನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಈಸ್ಟ್ ಜೋನ್ ತಂಡದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ, ಅಂತಾರಾಷ್ಟ್ರೀಯ ಆಟಗಾರರಾದ ಮುಖೇಶ್ ಕುಮಾರ್, ಶಹಬಾಜ್ ಅಹ್ಮದ್ ಮತ್ತು ಮಾಜಿ ಇಂಡಿಯಾ ಎ ನಾಯಕ ಅಭಿಮನ್ಯು ಈಶ್ವರನ್ ಅವರಂತಹ ದಿಗ್ಗಜ್ಜರ ದೊಡ್ಡ ದಂಡೇ ಇದ್ದು, ನಾಯಕ ಇಶಾನ್ ಕಿಶನ್ ಜೊತೆಗೆ ಕುಮಾರ್ ಕುಶಾಗ್ರ ಹಾಗೂ ಅನುಕುಲ್ ರಾಯ್ ಕೂಡ ಸ್ಥಾನ ಪಡೆದಿದ್ದಾರೆ. ಇಂತಹ ಹಿರಿಯ ಆಟಗಾರರಿರುವ ತಂಡಕ್ಕೆ ಹದಿಹರೆಯದ ವೈಭವ್ ಉಪನಾಯಕನಾಗಿರುವುದು ನಿಜಕ್ಕೂ ಒಂದು ಸಾಧನೆಯಾಗಿದೆ.
ಬಿಹಾರ ಕ್ರಿಕೆಟ್ ಅಸೋಸಿಯೇಷನ್​ ಅಧ್ಯಕ್ಷ ಹರ್ಷವರ್ಧನ್ ಮಾತನಾಡಿ, ಇಷ್ಟು ಚಿಕ್ಕ ವಯಸ್ಸಿನಲ್ಲಿ ವೈಭವ್ ಈಸ್ಟ್ ಜೋನ್ ತಂಡದ ಉಪನಾಯಕನಾಗಿರುವುದು ಬಿಹಾರ ಕ್ರಿಕೆಟ್‌ಗೆ ಹೆಮ್ಮೆಯ ವಿಷಯ ಎಂದಿದ್ದಾರೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 6 ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಸೂರ್ಯವಂಶಿ ತಮ್ಮ ಅದ್ಭುತ ಆಟ ಮುಂದುವರಿಸಲು ಸಜ್ಜಾಗಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net