ಆತನ ಹೆಸರು ಸಿರಾಜ್ ಎಂಬ ಕಾರಣಕ್ಕೆ ತಂಡದಿಂದ ಕೈಬಿಡಲಾಗಿದೆ: ಟೀಮ್ ಇಂಡಿಯಾ ವಿರುದ್ಧ ತಾರತಮ್ಯದ ಆರೋಪ ಮಾಡಿದ ಕಾಂಗ್ರೆಸ್ ಸಂಸದ! | Imran Masood

ಆತನ ಹೆಸರು ಸಿರಾಜ್ ಎಂಬ ಕಾರಣಕ್ಕೆ ತಂಡದಿಂದ ಕೈಬಿಡಲಾಗಿದೆ: ಟೀಮ್ ಇಂಡಿಯಾ ವಿರುದ್ಧ ತಾರತಮ್ಯದ ಆರೋಪ ಮಾಡಿದ ಕಾಂಗ್ರೆಸ್ ಸಂಸದ! | Imran Masood
Published on: 

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆಡುವ ಹನ್ನೊಂದರ ಬಳಗದಿಂದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವ ನಿರ್ಧಾರ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಸಿರಾಜ್ ಅವರನ್ನು ತಂಡದಿಂದ ಹೊರಗಿಟ್ಟಿರುವುದಕ್ಕೆ ರಾಜಕೀಯ ವಲಯ ಹಾಗೂ ಕ್ರಿಕೆಟ್ ದಿಗ್ಗಜರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಈಗ ಇದೇ ವಿಷಯವಾಗಿ ಧ್ವನಿ ಎತ್ತಿರುವ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ಈ ಆಯ್ಕೆಯಲ್ಲಿ ತಾರತಮ್ಯ ನಡೆದಿರುವುದು ಸ್ಪಷ್ಟವಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದರೆ. ಇತ್ತ ಟೀಮ್ ಇಂಡಿಯಾದ ಮಾಜಿ ಹೆಡ್​ ಕೋಚ್ ರವಿಶಾಸ್ತ್ರಿ ಮತ್ತು ಹಿರಿಯ ಆಟಗಾರ ವಾಸಿಂ ಜಾಫರ್ ಅವರು ಆಡಳಿತ ಮಂಡಳಿಯ ತಂತ್ರಗಾರಿಕೆಯನ್ನೇ ಪ್ರಶ್ನಿಸಿದ್ದಾರೆ.

ಸಂಸದ ಇಮ್ರಾನ್ ಮಸೂದ್ ಗಂಭೀರ ಆರೋಪ!

ಬೇಸಿನ್ ರಿಸರ್ವ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಸಿರಾಜ್‌ಗೆ ಅವಕಾಶ ನೀಡದಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ಆಯ್ಕೆ ಪ್ರಕ್ರಿಯೆಯ ಬಗ್ಗೆ ಕಿಡಿಕಾರಿದ್ದಾರೆ. ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಸಿರಾಜ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿಲ್ಲ, ಅವರ ಹೆಸರು ಸಿರಾಜ್ ಆಗಿರುವ ಕಾರಣದಿಂದಲೇ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಉತ್ತಮ ಆಟವಾಡಿದರೂ ಅವಕಾಶ ನೀಡದಿದ್ದರೆ, ಅಲ್ಲಿ ಸ್ಪಷ್ಟವಾಗಿ ತಾರತಮ್ಯ ನಡೆದಿದೆ ಎನ್ನದೇ ಬೇರೆ ದಾರಿ ಇಲ್ಲ ಎಂದು ಮಸೂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂಡದ ಆಯ್ಕೆ ಬಗ್ಗೆ ಹಿರಿಯರ ಅಸಮಾಧಾನ!

ಶ್ರೀಲಂಕಾ ಪ್ರವಾಸದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಮೊಹಮ್ಮದ್ ಸಿರಾಜ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಈ ಮಹತ್ವದ ಪಂದ್ಯದಲ್ಲಿ ಕಡೆಗಣಿಸಲಾಗಿದೆ. ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ನಾಲ್ವರು ವೇಗದ ಬೌಲರ್‌ಗಳೊಂದಿಗೆ ಟೀಮ್​ ಇಂಡಿಯಾ ಕಣಕ್ಕಿಳಿದಿದ್ದು, ಬುಮ್ರಾ ಜೊತೆಗೆ ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್ ಮತ್ತು ಯುವ ವೇಗಿ ಅನ್ಶುಲ್ ಕಾಂಬೋಜ್​​ಗೆ ಸ್ಥಾನ ನೀಡಲಾಗಿದೆ. ಏಕೈಕ ಸ್ಪಿನ್ನರ್ ಆಗಿ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಿರಾಜ್ ಅವರಂತಹ ಅನುಭವಿ ಬೌಲರ್ ತಂಡದಲ್ಲಿ ಇರಬೇಕಿತ್ತು ಎಂಬುದು ಹಲವು ಕ್ರಿಕೆಟ್ ತಜ್ಞರ ವಾದವಾಗಿದೆ.

ಈ ಕುರಿತು ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ರವಿಶಾಸ್ತ್ರಿ, ಭಾರತ ತಂಡವು ಬಲಿಷ್ಠವಾಗಿ ತಿರುಗೇಟು ನೀಡಲಿದೆ ಎಂದು ಆಶಿಸುತ್ತೇನೆ. ಆದರೆ, ವೇಗ, ಕೌಶಲ್ಯ ಮತ್ತು ಚೆಂಡಿನ ಚಲನೆಯೇ ಆಯ್ಕೆಯ ಮಾನದಂಡವಾಗಿದ್ದರೆ, ಹಾಗೂ ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವವರು ಕಡಿಮೆಯಿದ್ದಾಗ ಸಿರಾಜ್ ಅವರನ್ನು ಏಕೆ ಕೈಬಿಡಲಾಯಿತು? ಅವರ ಅನುಭವ, ಆಕ್ರಮಣಕಾರಿ ಆಟ ಮತ್ತು ವಿಕೆಟ್ ಪಡೆಯುವ ಸಾಮರ್ಥ್ಯಕ್ಕೆ ತಂಡದಲ್ಲಿ ಖಂಡಿತವಾಗಿಯೂ ಬೆಲೆ ಇರಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಎಕ್ಸ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ತಂಡದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಿರುವುದರ ಹಿಂದಿನ ತರ್ಕವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಮೊಹಮ್ಮದ್ ಸಿರಾಜ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿರುವ ನಿರ್ಧಾರ ಮಾತ್ರ ನನಗೆ ಅರ್ಥವಾಗುತ್ತಿಲ್ಲ ಎಂದು ಟೀಮ್ ಮ್ಯಾನೇಜ್‌ಮೆಂಟ್‌ಗೆ ಚಾಟಿ ಬೀಸಿದ್ದಾರೆ.

ನ್ಯೂಜಿಲೆಂಡ್‌ಗೆ ತಿರುಗೇಟು ನೀಡಿದ ಭಾರತ!

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಭರ್ಜರಿ ಪ್ರದರ್ಶನ ನೀಡುವ ಮೂಲಕ ಆತಿಥೇಯರಿಗೆ ದಿಟ್ಟ ತಿರುಗೇಟು ನೀಡಿದ್ದಾರೆ.

ಮೊದಲ ದಿನದ ಮೊತ್ತವಾದ 243/5 ರಿಂದ ಬ್ಯಾಟಿಂಗ್ ಮುಂದುವರಿಸಿದ ನ್ಯೂಜಿಲೆಂಡ್, ಗ್ಲೆನ್ ಫಿಲಿಪ್ಸ್ (118) ಮತ್ತು ಹೆನ್ರಿ ನಿಕೋಲ್ಸ್ (175) ಅವರ ಅಮೋಘ ಶತಕಗಳ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 368 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದು ಮಿಂಚಿದರೆ, ಆಕಾಶ್ ದೀಪ್ 3, ಅನ್ಶುಲ್ ಕಾಂಬೋಜ್ 2 ಹಾಗೂ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದರು.

ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್​ ಇಂಡಿಯಾ ಪರ ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಭದ್ರ ಬುನಾದಿ ಹಾಕಿಕೊಟ್ಟರು. ನ್ಯೂಜಿಲೆಂಡ್ ವೇಗಿಗಳ ಆರಂಭಿಕ ಸವಾಲನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ, ನಂತರ ಬಿರುಸಿನ ಆಟಕ್ಕಿಳಿಯಿತು. 89 ಎಸೆತಗಳಲ್ಲಿ 85 ರನ್ ಸಿಡಿಸಿದ ಜೈಸ್ವಾಲ್, ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ ಔಟಾಗುವ ಮೂಲಕ ಶತಕ ವಂಚಿತರಾದರು. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 39 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದು, ಉತ್ತಮ ಸ್ಥಿತಿಯಲ್ಲಿದೆ. ಅಜೇಯ ಅರ್ಧಶತಕ ಗಳಿಸಿರುವ ಕನ್ನಡಿಗರಾದ ರಾಹುಲ್ (52*) ಮತ್ತು ದೇವದತ್ ಪಡಿಕ್ಕಲ್ (16*) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ(ಏಜೆನ್ಸೀಸ್​).