

ಆತಿಥೇಯ ಶ್ರೀಲಂಕಾ ಹಾಗೂ ಭಾರತ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಹೆಚ್ಚಿನ ಸಮಯ ಮಳೆ ಮತ್ತು ಒದ್ದೆ ಮೈದಾನದಿಂದಾಗಿ ವ್ಯರ್ಥವಾದರೂ, ಕನ್ನಡಿಗ ಹಾಗೂ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ (167 ರನ್, 230 ಎಸೆತ, 15 ಬೌಂಡರಿ, 1 ಸಿಕ್ಸರ್) ಅಮೋಘ ಬ್ಯಾಟಿಂಗ್ ಹಾಗೂ ಧ್ರುವ ಜುರೆಲ್ (51 ರನ್, 68 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ ಶುಭಮಾನ್ ಗಿಲ್ ಬಳಗ ಸಂಪೂರ್ಣ ನಿಯಂತ್ರಣ ಸಾಧಿಸಿ ಸುಸ್ಥಿತಿಯಲ್ಲಿದೆ.
167: ದೇವದತ್ ಪಡಿಕ್ಕಲ್ ಟೆಸ್ಟ್‌ನಲ್ಲಿ ಸ್ಟಂಪ್ ಔಟ್ ಆಗುವ ಸಮಯದಲ್ಲಿ 2ನೇ ಗರಿಷ್ಠ ರನ್ ಗಳಿಸಿದ್ದ ಭಾರತೀಯ ಬ್ಯಾಟರ್ ಎನಿಸಿದರು. ರೋಹಿತ್ ಶರ್ಮ ದಕ್ಷಿಣ ಆಫ್ರಿಕಾ ಎದುರು 176 ರನ್ ಗಳಿಸಿ ಸ್ಟಂಪ್ ಔಟ್ ಆಗಿದ್ದು ಗರಿಷ್ಠ.
4: ದೇವದತ್ ಪಡಿಕ್ಕಲ್ ಶ್ರೀಲಂಕಾದಲ್ಲಿ 4ನೇ ಗರಿಷ್ಠ ವೈಯಕ್ತಿಕ ರನ್ ಗಳಿಸಿದ ಭಾರತೀಯ ಎನಿಸಿದರು. ಸಚಿನ್ ತೆಂಡುಲ್ಕರ್ (203), ವೀರೇಂದ್ರ ಸೆಹ್ವಾಗ್ (201*), ಶಿಖರ್ ಧವನ್ (190) ಮೊದಲ 3 ಸ್ಥಾನದಲ್ಲಿದ್ದಾರೆ.