WPL: ಸತತ 4ನೇ ಬಾರಿ ಫೈನಲ್​ಗೇರಿದ ಡೆಲ್ಲಿ ಕ್ಯಾಪಿಟಲ್ಸ್​

WPL: ಸತತ 4ನೇ ಬಾರಿ ಫೈನಲ್​ಗೇರಿದ ಡೆಲ್ಲಿ ಕ್ಯಾಪಿಟಲ್ಸ್​
WPL: ಸತತ 4ನೇ ಬಾರಿ ಫೈನಲ್​ಗೇರಿದ ಡೆಲ್ಲಿ ಕ್ಯಾಪಿಟಲ್ಸ್​
Published on
ವಡೋದರ: ಹಾಲಿ ರನ್ನರ್​ ಅಪ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸತತ ನಾಲ್ಕನೇ ಬಾರಿ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ (WPL​) ಪ್ರಶಸ್ತಿ ಸುತ್ತಿಗೇರಿದೆ. ಲಿಝೆಲಿ ಲೀ (43 ರನ್​, 24 ಎಸೆತ, 8 ಬೌಂಡರಿ, 1 ಸಿಕ್ಸರ್​) ಒದಗಿಸಿದ ಬಿರುಸಿನ ಆರಂಭ ಹಾಗೂ ಆಲ್ರೌಂಡರ್​ ಚಿನೆಲ್ಲೆ ಹೆನ್ರಿ (35ಕ್ಕೆ 3) ಬಿಗಿ ಬೌಲಿಂಗ್​ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ (Delhi Capitals) ತಂಡ 4ನೇ ಆವೃತ್ತಿಯ ಎಲಿಮಿನೇಟರ್​ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ಎದುರು 7 ವಿಕೆಟ್​ಗಳ ಗೆಲುವು ದಾಖಲಿಸಿತು. ಗುರುವಾರ ನಡೆಯಲಿರುವ ಫೈನಲ್​ನಲ್ಲಿ ಮಾಜಿ ಚಾಂಪಿಯನ್​ ಆರ್​ಸಿಬಿ (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ.

ಕೋಟಂಬಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸೆಮಿಫೈನಲ್​ ಮಾದರಿಯ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ವಿಕೆಟ್​ ಕೀಪರ್​-ಬ್ಯಾಟುಗಾರ್ತಿ ಬೆತ್​ ಮೂನಿ (62* ರನ್​, 51 ಎಸೆತ, 6 ಬೌಂಡರಿ) ಹಾಗೂ ಜಾರ್ಜಿಹಾ ವೇರ್​ಹ್ಯಾಂ (35) ಜವಾಬ್ದಾರಿಯುತ ಬ್ಯಾಟಿಂಗ್​ ನೆರವಿನಿಂದ ಗುಜರಾತ್​ ಜೈಂಟ್ಸ್​ 7 ವಿಕೆಟ್​ಗೆ 168 ರನ್​ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಲಿಝೆಲಿ ಲೀ ಮತ್ತು ಶೆಫಾಲಿ ವರ್ಮ (31 ರನ್​, 21 ಎಸೆತ, 7 ಬೌಂಡರಿ) ಒದಗಿಸಿದ ಬಿರುಸಿನ ಆರಂಭ ಹಾಗೂ ನಾಯಕಿ ಜೆಮೀಮಾ ರೋಡ್ರಿಗಸ್​ (41 ರನ್​, 23 ಎಸೆತ, 4 ಬೌಂಡರಿ, 1 ಸಿಕ್ಸರ್​) ಉಪಯುಕ್ತ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ 15.4 ಓವರ್​ಗಳಲ್ಲಿ 3 ವಿಕೆಟ್​ಗೆ 169 ರನ್​ಗಳಿಸಿತು. ಈ ಮೂಲಕ 26 ಎಸೆತ ಇರುವಂತೆಯೇ ಗೆದ್ದ ಡೆಲ್ಲಿ, ಲೀಗ್​ನ ಎರಡು ಪಂದ್ಯಗಳ ಕೊನೇ ಓವರ್​ ಸೋಲಿಗೆ ಮುಯ್ಯಿ ತೀರಿಸಿತು. ಜತೆಗೆ 4ನೇ ಪ್ರಯತ್ನದಲ್ಲಾದರೂ ಪ್ರಶಸ್ತಿ ಗೆಲ್ಲುವ ಹಂಬಲದೊಂದಿಗೆ ಫೈನಲ್​ಗೇರಿತು.

ಗುಜರಾತ್​ ಜೈಂಟ್ಸ್​: 7 ವಿಕೆಟ್​ಗೆ 168 (ಬೆತ್​ ಮೂನಿ 62*, ಸೋಫಿ ಡಿವೈನ್​ 6, ಅನುಷ್ಕಾ ಶರ್ಮ 16, ಆಶ್ಲೇ ಗಾರ್ಡ್​ನರ್​ 0, ಕನಿಕಾ ಆಹುಜಾ 6, ಜಾರ್ಜಿಹಾ ವೇರ್​ಹ್ಯಾಂ 35, ಭಾರತಿ 0, ಕಾಶ್ವಿ ಗೌತಮ್​ 18, ಚಿನೆಲ್ಲೆ ಹೆನ್ರಿ 35ಕ್ಕೆ 3, ನಂದನಿ ಶರ್ಮ 44ಕ್ಕೆ 2). ಡೆಲ್ಲಿ ಕ್ಯಾಪಿಟಲ್ಸ್​: 15.4 ಓವರ್​ಗಳಲ್ಲಿ 3 ವಿಕೆಟ್​ಗೆ 169 (ಲಿಝೆಲಿ ಲೀ 43, ಶೆಫಾಲಿ ವರ್ಮ 31, ಲೌರಾ ವೋಲ್ವಾರ್ಡ್​ 32*, ಜೆಮೀಮಾ ರೋಡ್ರಿಗಸ್​ 41, ಮಾರಿಜಾನ್​ ಕಾಪ್​ 4*, ವೇರ್​ ಹ್ಯಾಂ 28ಕ್ಕೆ 2).
ಫೈನಲ್​ ಪಂದ್ಯ
ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್​
ಯಾವಾಗ:ಗುರುವಾರ
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net