ಇದೆಂಥಾ ಹುಚ್ಚು ಸಂಭ್ರಮ? ವೈಭವ್ ಮುಂದೆ ಚಪ್ಪಾಳೆ ತಟ್ಟಿದ ಡೆಲ್ಲಿ ವೇಗಿಗೆ ಡಿಮೆರಿಟ್​ ಬಿಸಿ, ವಿಡಿಯೋ ವೈರಲ್​ | DC vs RR

 DC vs RR ಪಂದ್ಯದ ವೇಳೆ ನಡೆದ ಘಟನೆ
DC vs RR ಪಂದ್ಯದ ವೇಳೆ ನಡೆದ ಘಟನೆ
Published on

ಪ್ರಮುಖ ಮುಖ್ಯಾಂಶಗಳು

  • ನಿನ್ನೆ (ಮೇ.02) ನಡೆದ 19ನೇ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ 7 ವಿಕೆಟ್​ಗಳ ಜಯ
  • ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಿದ 6 ಅಡಿ ಎತ್ತರದ ಡೆಲ್ಲಿ ವೇಗಿಗೆ ಬಿಸಿಸಿಐ ದಂಡ
  • ಕೈಲ್ ಜೇಮಿಸನ್ ಹುಚ್ಚು ಸಂಭ್ರಮದ ವಿಡಿಯೋ ವೈರಲ್​
DC vs RR: 19ನೇ ಆವೃತ್ತಿಯ ಐಪಿಎಲ್ ಭಾಗವಾಗಿ ಶುಕ್ರವಾರ (ಮೇ.01) ಜೈಪುರದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಅಕ್ಷರ್​ ಪಟೇಲ್ ಪಡೆ ರೋಚಕ ಜಯ ಸಾಧಿಸಿತು. ​ 
226 ರನ್​ಗಳ ಬೃಹತ್​ ಗುರಿಯನ್ನು 3 ವಿಕೆಟ್​ಗಳಲ್ಲಿ ಬೆನ್ನಟ್ಟಿದ ಡೆಲ್ಲಿ ಪಡೆಗೆ ಖುಷಿ ತಂದರೆ, ಅದೇ ಪಂದ್ಯದಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ರಾಜಸ್ಥಾನ ರಾಯಲ್ಸ್​ ಪರ ಬ್ಯಾಟಿಂಗ್​ಗಿಳಿದ 15 ವರ್ಷದ ವೈಭವ್ ಸೂರ್ಯವಂಶಿ ಎಂದಿನಂತೆ ಸ್ಫೋಟಕ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಮೊದಲ ಓವರ್​ನಲ್ಲೇ ಯಾವ ತಂಡದ ಬೌಲರ್​ ಆದರೂ ಮುಖ ಮೂತಿ ನೋಡದೆ, ಸಿಕ್ಸರ್​ಗಳನ್ನು ಸಿಡಿಸುವ ವೈಭವ್​, 6.8 ಅಡಿ ಎತ್ತರದ ವೇಗಿ ಕೈಲ್ ಜೇಮಿಸನ್ ಅವರ ಓವರ್​ನಲ್ಲಿ ಕೇವಲ 4 ರನ್​ಗೆ ವಿಕೆಟ್​ ಕಳೆದುಕೊಂಡರು. 
ಪಂದ್ಯದ ಮೊದಲ ಎಸೆತದಲ್ಲಿ ಬೌಂಡರಿ ಹೊಡೆದ ವೈಭವ್ ಸೂರ್ಯವಂಶಿ, ಎರಡನೇ ಎಸೆತದಲ್ಲಿ ಜೇಮಿಸನ್ ಅವರ ಯಾರ್ಕರ್​ ಬಾಲ್​ಗೆ ಕ್ಲೀನ್ ಬೌಲ್ಡ್ ಆದರು. ಸ್ಫೋಟಕ ಬ್ಯಾಟಿಂಗ್​ ಮಾಡುವ ವೈಭವ್​ ವಿಕೆಟ್​ ಹೋಗುತ್ತಿದ್ದಂತೆ ಕಿರುಚಾಡಿದ ಜೇಮಿಸನ್​, ವಿಕೆಟ್​ ಕಳೆದುಕೊಂಡು ಬೇಸರದಿಂದ ಪೆವಿಲಿಯನ್​ ಹಾದಿಯತ್ತ ಮುಖಮಾಡಿದ್ದ ಸೂರ್ಯವಂಶಿ ಎದುರು ಚಪ್ಪಾಳೆ ತಟ್ಟಿ ಕಳುಹಿಸಿದ ರೀತಿ ಹಲವರ ಆಕ್ರೋಶಕ್ಕೆ ಕಾರಣವಾಯಿತು. ಕೆಲವರಿಗೆ, ಇಂತಹ ಹುಚ್ಚು ಸಂಭ್ರಮದ ಅಗತ್ಯವೇನಿತ್ತು? ಎಂದು ಅನಿಸಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬಿಸಿಸಿಐ, ಇದೀಗ ಡೆಲ್ಲಿ ಕ್ಯಾಪಿಟಲ್ಸ್​ ವೇಗಿಗೆ ದಂಡದ ಬಿಸಿ ಮುಟ್ಟಿಸಿದೆ. 
ಈ ಸೀಸನ್​ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಿದ ಖುಷಿಗೆ ಕೈಲ್ ಜೇಮಿಸನ್ ಸ್ವಲ್ಪ ಅಲ್ಲ, ಮಿತಿ ಮೀರಿ ಮೈದಾನದಲ್ಲಿ ಸಂಭ್ರಮಿಸಿದರು. ವೈಭವ್‌ಗೆ ತುಂಬಾ ಹತ್ತಿರ ಬಂದು ಕೂಗಿದ ಕೈಲ್​, ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಪೆವಿಲಿಯನ್​ಗೆ ಹೋಗುವಂತೆ ಹೇಳಿದ್ದು, ಕ್ರಿಕೆಟ್​ ಪ್ರಿಯರಿಗೆ ಕಿಂಚಿತ್ತು ಹಿಡಿಸಲಿಲ್ಲ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೊಡ್ಡ ಮರಗಳಂತೆ ಬೆಳೆದರೆ ಸಾಲದು, ಚಿಕ್ಕ ವಯಸ್ಸಿನವರೊಂದಿಗೆ ಹೇಗೆ ವರ್ತಿಸಬೇಕೆಂದು ಗೊತ್ತಿರಬೇಕು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ದಂಡದ ಬಿಸಿ

ವೈಭವ್ ಸೂರ್ಯವಂಶಿ ವಿರುದ್ಧ ತೋರಿದ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕೈಲ್ ಜೇಮಿಸನ್​ ವಿರುದ್ಧ ಬಿಸಿಸಿಐ ಸಿಟ್ಟಾಗಿದೆ. ಪಂದ್ಯದ ವೇಳೆ ನಡೆದುಕೊಂಡ ರೀತಿಗೆ ಕಿವೀಸ್ ವೇಗಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಿದ್ದು, ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಉಲ್ಲಂಘಿಸಿರುವುದು ಸ್ಪಷ್ಟ ಎಂದು ತಿಳಿಸಿದೆ.
ಈ ನಿಯಮ, ಪಂದ್ಯದಲ್ಲಿ ಒಬ್ಬ ಆಟಗಾರನಿಗೆ ಅವಮಾನಕರ ಅಥವಾ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದಕ್ಕೆ ಸಂಬಂಧಿಸಿದೆ. ತನ್ನ ತಪ್ಪನ್ನು ಒಪ್ಪಿಕೊಂಡ ಜೇಮೀಸನ್​ಗೆ ಪಂದ್ಯದ ಅಂಪೈರ್​ ರಾಜೀವ್ ಸೇಠ್ ದಂಡವನ್ನು ವಿಧಿಸಲು ಸೂಚಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net