ಧೋನಿಯೂ ಇಲ್ಲ, ಗೆಲುವೂ ಇಲ್ಲ: ಫ್ಯಾನ್ಸ್​ ಪಿತ್ತ ನೆತ್ತಿಗೇರಿಸಿದ ಸಿಎಸ್​ಕೆ ಆಟಗಾರರು; ಪ್ಲೇಆಫ್ ಸಾಧ್ಯತೆ ಶೇ.28.4

ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್
Published on
CSK: ಐದು ಬಾರಿಯ ಚಾಂಪಿಯನ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಅದೇನಾಯಿತೋ ಏನೋ 19ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಐಪಿಎಲ್​ನ ಆರಂಭದಲ್ಲಿ ಉತ್ತಮ ಆಲ್​ರೌಂಡ್ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ಮುಗ್ಗರಿಸಿರುವ ಸಿಎಸ್​ಕೆಗೆ ಕ್ಯಾಪ್ಟನ್​ ರುತುರಾಜ್​ ಗಾಯಕ್ವಾಡ್​ರಿಂದ ಉತ್ತಮ ನಾಯಕತ್ವ ಸಿಗದಿರುವುದು ಮತ್ತು ಆಟಗಾರರ ಬೇಜವಾಬ್ದಾರಿತನ ಸದ್ಯ ಪ್ಲೇಆಫ್​ ಕನಸು ಭಗ್ಯವಾಗುವಂತೆ ಮಾಡಿದೆ.
ಪ್ರಸ್ತುತ 12 ಅಂಕಗಳನ್ನು ಹೊಂದಿರುವ ಸಿಎಸ್​ಕೆ, ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲಲೇಬೇಕಿತ್ತು. ಆದರೆ, ಮೇ.15ರಂದು ನಡೆದ ಎಲ್​ಎಸ್​ಜಿ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲುಂಡಿತು. ತಂಡದ ನಿವ್ವಳ ರನ್ ರೇಟ್​ (+0.0027) ಕಡಿಮೆ ಇರುವುದರಿಂದ ಎರಡು ಪಂದ್ಯದಲ್ಲಿ ಹೆಚ್ಚಿನ ರನ್​ನಿಂದ ಗೆದ್ದರೆ ಮಾತ್ರ ಪ್ಲೇಆಫ್​ಗೆ ಎಂಟ್ರಿಕೊಡಲು ಅವಕಾಶ ಸಿಗುತ್ತದೆ. ಅಕಸ್ಮಾತ್​ ಮುಂದಿನ ಪಂದ್ಯದಲ್ಲಿಯೂ ಎಲ್​ಎಸ್​ಜಿ ಎದುರು ಸೋತರೆ, ಚೆನ್ನೈ ಪಡೆ ನೇರವಾಗಿ ಮನೆಗೆ ಹೋಗುವುದು ಖಚಿತ.

ಧೋನಿ ಇಲ್ಲ, ಗೆಲುವೂ ಇಲ್ಲ

ಆರಂಭದಿಂದಲೂ ಸಿಎಸ್​ಕೆಗೆ ಆಟಗಾರರ ಇಂಜುರಿ ಸಮಸ್ಯೆ ಗೆಲುವಿಗೆ ದೊಡ್ಡ ಹೊಡೆತ ನೀಡಿದ್ದು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಲಭ್ಯತೆ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರೆರಚಿದೆ. ಇವತ್ತು ಬರ್ತಾರೆ, ನಾಳಿನ ಪಂದ್ಯಕ್ಕೆ ಬರ್ತಾರೆ ಎಂದು ಕಾಯುತ್ತಿರುವ ಫ್ಯಾನ್ಸ್​ಗೆ ಇನ್ನೇನು ಐಪಿಎಲ್​ ಲೀಗ್​ ಮುಗಿಯುವ ಹಂತಕ್ಕೆ ಬಂದಿರುವಾಗ ಇದು ಕೂಡ ಹುಸಿಯಾಗಿದೆ. ಇನ್ನು ಆರಂಭದ ಕೆಲವು ಪಂದ್ಯಗಳಲ್ಲಿ ತಂಡದ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಯುವ ಆಟಗಾರ ಆಯುಷ್ ಮ್ಹಾತ್ರೆ ಮತ್ತು ವೇಗಿ ಖಲೀಲ್ ಅಹ್ಮದ್, ಆಲ್​ರೌಂಡರ್​ ನಾಥನ್ ಎಲ್ಲಿಸ್, ಜೇಮೀ ಓವರ್​ಟರ್ನ್​ ಇಂಜುರಿ ಸಮಸ್ಯೆಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಇದೆಲ್ಲವೂ ಸಿಎಸ್​ಕೆ ಸೋಲಿಗೆ ಪ್ರಮುಖ ಕಾರಣವಾಗಿದೆ.

ಮಂಕಾದ ಕ್ಯಾಪ್ಟನ್ ರುತುರಾಜ್​

ಚೆನ್ನೈ ಸೂಪರ್​ ಕಿಂಗ್ಸ್ ಕ್ಯಾಪ್ಟನ್​ ರುತುರಾಜ್​ ಗಾಯಕ್ವಾಡ್​ ಮತ್ತು ಸಂಜು ಸ್ಯಾಮ್ಸನ್​ ಓಪನಿಂಗ್ ಅಂತಹ ವಾವ್​ ಎನಿಸುತ್ತಿಲ್ಲ. ಸಂಜು ಒಂದೆರೆಡು ಶತಕ ಬಾರಿಸಿದ್ದೇ ಆದರೂ ಕ್ರೀಸ್​ಗೆ ಅಂಟಿ ನಿಲ್ಲಲು ಇನ್ನೂ ಪರದಾಡುತ್ತಿದ್ದಾರೆ. ಮತ್ತೊಂದೆಡೆ, ನಾಯಕನಾಗಿ ಯಾವ ಜವಾಬ್ದಾರಿಯನ್ನೂ ಸರಿಯಾಗಿ ನಿಭಾಯಿಸದ ಗಾಯಕ್ವಾಡ್​, ಆರಂಭಿಕನಾಗಿಯೂ ಉತ್ತಮ ಜೊತೆಯಾಟ ಅಥವಾ ವೈಯಕ್ತಿಕವಾಗಿ ಹೆಚ್ಚು ರನ್​ ಕಲೆಹಾಕಿಲ್ಲ.

ಆಟಗಾರರ ಆಯ್ಕೆ ಸರಿಯಿಲ್ಲ

ಈ ವರ್ಷ ಹರಾಜು ಪ್ರಕ್ರಿಯೆಯಲ್ಲಿ ಸಿಎಸ್​ಕೆ ತಾನೊಂದು ಬುದ್ಧಿವಂತ ಫ್ರಾಂಚೈಸಿ ಎಂಬುದನ್ನು ಸಾಬೀತುಪಡಿಸಲು ಎಡವಿತು. ಉತ್ತಮ ಆಟಗಾರರನ್ನು ಜಾಣ್ಮೆಯಿಂದ ಖರೀದಿ ಮಾಡುವಲ್ಲಿ ವಿಫಲವಾಯಿತು. 14 ಕೋಟಿ ರೂ. ಕೊಟ್ಟು ಕಾರ್ತಿಕ್​ ಶರ್ಮ ಮತ್ತು ಪ್ರಶಾಂತ್ ವೀರ್​ರನ್ನು ತಂಡಕ್ಕೆ ಕರೆದುಕೊಂಡಿದ್ದು ದೊಡ್ಡ ಮಿಸ್ಟೇಕ್​. ಇದರೊಟ್ಟಿಗೆ ಉಳಿದ ಆಟಗಾರರು ಒಂದು ಪಂದ್ಯದಲ್ಲಿ ಆಡಿದರೆ, ಮತ್ತೊಂದರಲ್ಲಿ ಕಳಪೆ ಪ್ರದರ್ಶನ ನೀಡುತ್ತಲೇ ಬಂದರು. ಇದೆಲ್ಲವೂ ತಂಡವನ್ನು ಹೀನಾಯ ಸೋಲಿಗೆ ನೂಕಿರುವುದಂತು ಸ್ಪಷ್ಟ. ಸದ್ಯ ಚೆನ್ನೈ ಪಡೆಯ ಅಭಿಮಾನಿಗಳು ತಮ್ಮ ತಂಡದ ಬೇಜವಾಬ್ದಾರಿ ಆಟ ಕಂಡು ತೀರ ಬೇಸರಕ್ಕೆ ಒಳಗಾಗಿರುವುದರಲ್ಲಿ ಎರಡನೇ ಮಾತಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net