ಫಿಟ್​ ಆಗಲು ಕ್ರಿಕೆಟಿಗರಿಂದ ಅಡ್ಡದಾರಿ!: ತೂಕ ಕರಗಿಸುವ ಇಂಜೆಕ್ಷನ್​ಗೆ ಮೊರೆ ,ಐಪಿಎಲ್​ ಆಟಗಾರರಲ್ಲೂ ಇದೇ ಅಭ್ಯಾಸ

Weight-Loss Injections > ಫಿಟ್​ ಆಗಲು ಕ್ರಿಕೆಟಿಗರಿಂದ ಅಡ್ಡದಾರಿ!: ತೂಕ ಕರಗಿಸುವ ಇಂಜೆಕ್ಷನ್​ಗೆ ಮೊರೆ
Weight-Loss Injections > ಫಿಟ್​ ಆಗಲು ಕ್ರಿಕೆಟಿಗರಿಂದ ಅಡ್ಡದಾರಿ!: ತೂಕ ಕರಗಿಸುವ ಇಂಜೆಕ್ಷನ್​ಗೆ ಮೊರೆ
Published on

ನವದೆಹಲಿ: ತೆಳ್ಳಗೆ ಫಿಟ್​ ಆಗಿ ಕಾಣಿಸಲು ದೈಹಿಕ ಕಸರತ್ತುಗಳನ್ನಷ್ಟೇ ಅವಲಂಬಿಸುವ ಬದಲಾಗಿ ಕೆಲ ಭಾರತೀಯ ಕ್ರಿಕೆಟಿಗರು, ದೇಹತೂಕ ಕರಗಿಸುವ ಇಂಜೆಕ್ಷನ್​ಗೆ ಮೊರೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್​ನಲ್ಲಿ ಆಡುವ ಕೆಲ ಕ್ರಿಕೆಟಿಗರಲ್ಲೂ ಸದ್ಯ ಈ ಟ್ರೆಂಡ್​ ಶುರುವಾಗಿದ್ದು, ಸ್ಲಿಮ್​ ಲುಕ್​ಗಾಗಿ ಜಿಎಲ್​ಪಿ&1 ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ವೈದ್ಯರ ಸಲಹೆ ಇಲ್ಲದೆ ಈ ಅಭ್ಯಾಸ ಆರಂಭಿಸಿರುವುದು ವೈದ್ಯಕಿಯ ಕಳವಳಕ್ಕೂ ಕಾರಣವಾಗಿದೆ. 

ಭಾರತದ ಹಿರಿಯ ಕ್ರಿಕೆಟಿಗರು ಮಾತ್ರವಲ್ಲದೆ ಕೆಲ ಯುವ ಕ್ರಿಕೆಟಿಗರೂ, ವಿರಾಟ್​ ಕೊಹ್ಲಿ ಮಾದರಿಯಲ್ಲಿ ಫಿಟ್​ ಆಗಿ ಕಾಣಿಸಬೇಕೆಂಬ ತುಡಿತದೊಂದಿಗೆ ದೇಹತೂಕ ಕರಗಿಸುವ ಜಿಎಲ್​ಪಿ&1 ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಯಾವುದೇ ವೈದ್ಯಕಿಯ ಸಲಹೆ ಪಡೆಯದೆ ಈ ಅಭ್ಯಾಸ ಬೆಳೆಸಿಕೊಂಡಿರುವುದು ಕಳವಳಕಾರಿ ಯಾಗಿದೆ ಎಂದು ವರದಿ ತಿಳಿಸಿದೆ. ಆದರೆ ಈ ಔಷಧಿ ತೆಗೆದುಕೊಳ್ಳುತ್ತಿರುವ ಯಾವುದೇ ರ್ನಿದಿಷ್ಟ ಕ್ರಿಕೆಟಿಗರ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

ಭಾರತೀಯ ಕ್ರಿಕೆಟ್​ನಲ್ಲಿ ತೂಕ ಕರಗಿಸಿಕೊಂಡು ಫಿಟ್​ ಆಗಿ ಕಾಣಿಸುವ ಟ್ರೆಂಡ್​ ಹೆಚ್ಚಾಗಿರುವುದು ಈ ಅಡ್ಡದಾರಿ ಹಿಡಿಯಲು ಪ್ರಮುಖ ಕಾರಣವೆನಿಸಿದೆ. ಸಾಮಾನ್ಯವಾಗಿ ಮಧುಮೇಹ ಚಿಕಿತ್ಸೆಗೆ ವೈದ್ಯರು ಜಿಎಲ್​ಪಿ&1 ಆಧಾರಿತ ಔಷಧಿಗಳನ್ನು ಶಿಾರಸು ಮಾಡುತ್ತಾರೆ. ಆದರೆ ಇದನ್ನು ದೇಹತೂಕ ನಿರ್ವಹಣೆಗೂ ಬಳಸಬಹುದಾಗಿದೆ.  ವ್ಯಾಯಾಮಗಳ ಜತೆಗೆ ತೂಕ ಕರಗಿಸಿಕೊಳ್ಳಲು ಈ ಔಷಧಿಯು ಅಡ್ಡದಾರಿ ಎನಿಸಿದೆ. ಹೀಗಾಗಿ ಬೇಗನೆ ತೆಳ್ಳಗಾಗಲು ಕ್ರಿಕೆಟಿಗರು ಇದಕ್ಕೆ ಮೊರೆ ಹೋಗುತ್ತಿದ್ದಾರೆ. ಕೆಲ ಬಾಲಿವುಡ್​ ತಾರೆಯರೂ ಇದರ ಬಳಕೆಯಿಂದಲೇ ಫಿಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ' ಎಂದು ಮೂಲಗಳು ತಿಳಿಸಿವೆ.

ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ ಕಠಿಣ ಆಹಾರ ಪದ್ಧತಿ ಮತ್ತು ದೈಹಿಕ ಕಸರತ್ತುಗಳಿಂದ ಸಾಧಿಸಿರುವ ಫಿಟ್ನೆಸ್​, ಭಾರತೀಯ ಕ್ರಿಕೆಟ್​ನಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲವು ಕ್ರಿಕೆಟಿಗರು ತಾವು ಕೂಡ ಅದೇ ರೀತಿ ತೆಳ್ಳಗಿನ ದೇಹದೊಂದಿಗೆ ಫಿಟ್​ ಆಗಿರುವಂತೆ ಸದಾ ಕಾಣಿಸಿಕೊಳ್ಳಬೇಕೆಂಬ ಒತ್ತಡದಿಂದಾಗಿ ಈ ಅಡ್ಡದಾರಿ ಹಿಡಿದಿದ್ದಾರೆ ಎನ್ನಲಾಗಿದೆ.

ಅಡ್ಡ ಪರಿಣಾಮದ ಎಚ್ಚರಿಕೆ

ಜಿಎಲ್​ಪಿ&1 ಔಷಧಿಯು ಸೌಂದರ್ಯವರ್ಧಕವಲ್ಲ. ವೈದ್ಯಕಿಯ ಅಗತ್ಯವಿರುವ ರೋಗಿಗಳು ಸರಿಯಾದ ವೈದ್ಯಕಿಯ ಮೇಲ್ವಿಚಾರಣೆಯಲ್ಲಿ ಮಾತ್ರ ಬಳಸ ಬಹುದು ಎಂಬುದು ತಜ್ಞ ವೈದ್ಯರ ಎಚ್ಚರಿಕೆಯಾಗಿದೆ. ಜತೆಗೆ ವಾಕರಿಕೆ, ವಾಂತಿ, ಅತಿಸಾರ, ಮಲಬದ್ಧತೆ, ಹೊಟ್ಟೆನೋವಿನಂಥ ಅಡ್ಡ ಪರಿಣಾಮ ಮತ್ತು ಕೆಲವರಲ್ಲಿ ಗಂಭೀರ ಸಮಸ್ಯೆಯನ್ನೂ ಸೃಷ್ಟಿಸಬಹುದು. ಹೀಗಾಗಿ ಕೇವಲ ತೆಳ್ಳಗೆ ಆಗಲು ಇದರ ಬಳಕೆ ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ. 

ಇತ್ತೀಚೆಗೆ ಭಾರತ ಪ್ರವೇಶ

ಜಿಎಲ್​ಪಿ&1 ಚಿಕಿತ್ಸೆಯು ಇತ್ತೀಚೆಗಷ್ಟೇ ಭಾರತವನ್ನು ಪ್ರವೇಶಿಸಿದ್ದು, ಅತಿ ಶ್ರೀಘ್ರವಾಗಿ ಗಣನೀಯ ವಿಸ್ತರಣೆಯನ್ನೂ ಕಂಡಿದೆ. 2025ರ ಮಾರ್ಚ್​ನಲ್ಲಿ ಭಾರತದಲ್ಲಿ ಇದು ಬಿಡುಗಡೆಯಾಗಿದ್ದು, ಒಂದು ತಿಂಗಳ 2.5 ಎಂ.ಜಿ. ಡೋಸ್​ಗೆ 13,125 ರೂ. ಮತ್ತು ಒಂದು ತಿಂಗಳಿಗೆ 15 ಎಂ.ಜಿ. ಡೋಸ್​ 25,781 ರೂ. ಬೆಲೆ ಇದೆ. ಕಳೆದ ಮಾರ್ಚ್​ನಲ್ಲಿ ಕಡಿಮೆ ಬೆಲೆಯ ಇದೇ ಮಾದರಿಯ ಔಷಧಿಗಳೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಇನ್ನಷ್ಟು ಹೆಚ್ಚಿನ ಜನರನ್ನೂ ತಲುಪಲು ಆರಂಭಿಸಿದೆ.

ಏನಿದು ಜಿಎಲ್​ಪಿ&1 ಔಷಧಿ..?

ಗ್ಲುಕಗನ್​ ಲೈಕ್​ ಪೆಪ್ಟೃಡ್​&1 ಅಥವಾ ಜಿಎಲ್​ಪಿ&1 ಎಂಬುದು ಊಟದ ನಂತರ ಕರುಳಿನಲ್ಲಿ ಬಿಡುಗಡೆಯಾಗುವ ಹಾಮೋರ್ನ್​ ಆಗಿದೆ. ಇದು ಮೇದೋಜ್ಜೀರಕ ಗ್ರಂಥಿಯನ್ನು ಇನ್ಸುಲಿನ್​ ಉತ್ಪಾದಿಸಲು ಸಂಕೇತಿಸುತ್ತದೆ ಮತ್ತು ಹೊಟ್ಟೆ ಖಾಲಿಯಾಗುವುದನ್ನು ನಿಧಾನಗೊಳಿಸುತ್ತದೆ. ಜತೆಗೆ ಹಸಿವು ಕಡಿಮೆ ಮಾಡಲು ಮಿದುಳಿನೊಂದಿಗೆ ಸಂವಹನ ನಡೆಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಾಮೋರ್ನ್​ನ ಔಷಧೀಯ ಆವೃತ್ತಿಗಳನ್ನು, ಪ್ರಾಥಮಿಕವಾಗಿ ಟೈಪ್​&2 ಮಧುಮೇಹ ಮತ್ತು ಕೆಲ ಪ್ರಕರಣಗಳಲ್ಲಿ ವೈದ್ಯಕಿಯವಾಗಿ ವ್ಯಾಖ್ಯಾನಿಸಲಾದ ಬೊಜ್ಜು ನಿರ್ವಹಿಸಲು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಚುಚ್ಚುಮದ್ದಿನ ರೂಪದಲ್ಲೇ ತೆಗೆದುಕೊಳ್ಳಲಾಗುತ್ತದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net