ಏಕದಿನ ಕ್ರಿಕೆಟ್​ನಲ್ಲಿ 5,000 ಪಂದ್ಯಗಳ ಮೈಲಿಗಲ್ಲು

ಏಕದಿನ ಕ್ರಿಕೆಟ್​ನಲ್ಲಿ 5,000 ಪಂದ್ಯಗಳ ಮೈಲಿಗಲ್ಲು
ಏಕದಿನ ಕ್ರಿಕೆಟ್​ನಲ್ಲಿ 5,000 ಪಂದ್ಯಗಳ ಮೈಲಿಗಲ್ಲು
Published on

ಡುಂಡೀ: ಸ್ಕಾಟ್ಲೆಂಡ್​ ಮತ್ತು ಕೆನಡಾ ತಂಡಗಳ ನಡುವೆ ಐಸಿಸಿ ಕ್ರಿಕೆಟ್​ ವಿಶ್ವಕಪ್​ ಲೀಗ್​ನಲ್ಲಿ ಶುಕ್ರವಾರ ನಡೆದ ಕಾದಾಟವು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ (

ODI

)​ ಇತಿಹಾಸದ 5,000ನೇ ಪಂದ್ಯವೆಂಬ ಮೈಲಿಗಲ್ಲು ನೆಟ್ಟಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಸ್ಕಾಟ್ಲೆಂಡ್​ 9 ರನ್​ಗಳಿಂದ ಗೆಲುವು ಸಾಧಿಸಿತು.


1971ರ ಜನವರಿ 5ರಂದು ಆಸ್ಟ್ರೆಲಿಯಾ-ಇಂಗ್ಲೆಂಡ್​ ನಡುವೆ ಮೆಲ್ಬೋರ್ನ್​ನಲ್ಲಿ ಚೊಚ್ಚಲ ಏಕದಿನ ಪಂದ್ಯ ನಡೆದಿತ್ತು. 55 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​ 5 ಸಾವಿರ ಪಂದ್ಯಗಳನ್ನು ಪೂರೈಸಿದೆ. ಮೊದಲ 3 ಏಕದಿನ ವಿಶ್ವಕಪ್​ಗಳಲ್ಲಿ ತಲಾ 60 ಓವರ್​ಗಳ ಪಂದ್ಯ ನಡೆದಿದ್ದರೆ, ಇಂಗ್ಲೆಂಡ್​ನಲ್ಲಿ ಕೆಲ ದ್ವಿಪಕ್ಷೀಯ ಸರಣಿಗಳಲ್ಲಿ ತಲಾ 55 ಓವರ್​ಗಳ ಪಂದ್ಯ ಆಡಿಸಲಾಗಿತ್ತು. ಆಸ್ಟ್ರೆಲಿಯಾ, ನ್ಯೂಜಿಲೆಂಡ್​, ಪಾಕಿಸ್ತಾನದಲ್ಲಿ ತಲಾ 40&35 ಓವರ್​ಗಳ (ಓವರ್​ಗೆ 8 ಎಸೆತ) ಪಂದ್ಯಗಳೂ ನಡೆದಿದ್ದವು. 1995ರ ನಂತರದಲ್ಲಿ ಎಲ್ಲ ಏಕದಿನ ಪಂದ್ಯಗಳೂ ತಲಾ 50 ಓವರ್​ಗಳದ್ದೇ ಆಗಿದೆ. ಸಾವಿರ ಏಕದಿನ ಪಂದ್ಯ ಆಡಲು 24 ವರ್ಷ ಹಿಡಿದಿದ್ದರೆ, ನಂತರದ 4 ಸಾವಿರ ಪಂದ್ಯಗಳನ್ನು 31 ವರ್ಷಗಳಲ್ಲೇ ಆಡಲಾಗಿದೆ.

ವಿಶೇಷ ದಾಖಲೆಗಳು

ಭಾರತದ ದಿಗ್ಗಜ ಸಚಿನ್​ ತೆಂಡುಲ್ಕರ್​ ಏಕದಿನ ಕ್ರಿಕೆಟ್​ನಲ್ಲಿ ಸರ್ವಾಧಿಕ 463 ಪಂದ್ಯ ಆಡಿ, 18,426 ರನ್​ ಗಳಿಸಿದ ದಾಖಲೆ ಹೊಂದಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್​ ಸರ್ವಾಧಿಕ 534 ವಿಕೆಟ್​ ಸಾಧಕರಾಗಿದ್ದಾರೆ. ಆಸ್ಟ್ರೆಲಿಯಾ (1,025), ಭಾರತ (1,081), ಪಾಕಿಸ್ತಾನ (1,002) ಸಾವಿರಕ್ಕೂ ಅಧಿಕ ಪಂದ್ಯ ಆಡಿರುವ 3 ತಂಡಗಳಾಗಿವೆ. ಇಂಗ್ಲೆಂಡ್​ ಸರ್ವಾಧಿಕ ಮೊತ್ತ (498/4) ಗಳಿಸಿದ ದಾಖಲೆ ಹೊಂದಿದೆ. ರೋಹಿತ್​ ಶರ್ಮ (264) ಪಂದ್ಯವೊಂದರಲ್ಲಿ ಸರ್ವಾಧಿಕ ವೈಯಕ್ತಿಕ ರನ್​ ಗಳಿಸಿದ್ದರೆ, ವಿರಾಟ್​ ಕೊಹ್ಲಿ ಗರಿಷ್ಠ 54 ಶತಕ ಸಾಧಕರಾಗಿದ್ದಾರೆ. ಎಬಿ ಡಿವಿಲಿಯರ್ಸ್​ ಅತಿವೇಗದ ಶತಕ (31 ಎಸೆತ) ಮತ್ತು ಅರ್ಧಶತಕದ (16) ವಿಶ್ವದಾಖಲೆ ಹೊಂದಿದ್ದಾರೆ. ವಕಾರ್​ ಯೂನಿಸ್​ ಸರ್ವಾಧಿಕ 13 ಬಾರಿ 5 ವಿಕೆಟ್​ ಗೊಂಚಲು ಪಡೆದಿದ್ದಾರೆ. ಚಮಿಂಡಾ ವಾಸ್​ 19 ರನ್​ಗಳಿಗೆ 8 ವಿಕೆಟ್​ ಕಬಳಿಸಿರುವುದು ಏಕದಿನ ಪಂದ್ಯವೊಂದರಲ್ಲಿ ಸರ್ವಶ್ರೇಷ್ಠ ಬೌಲಿಂಗ್​ ನಿರ್ವಹಣೆಯಾಗಿದೆ.
200: ಏಕದಿನ ಕ್ರಿಕೆಟ್​ ಪಂದ್ಯವೊಂದರಲ್ಲಿ ಇದುವರೆಗೆ 12 ದ್ವಿಶತಕಗಳು ಸಿಡಿದಿವೆ. ಈ ಪೈಕಿ 3 ದ್ವಿಶತಕಗಳನ್ನು ರೋಹಿತ್​ ಶರ್ಮ ಒಬ್ಬರೇ ಸಿಡಿಸಿದ್ದಾರೆ. 7 ದ್ವಿಶತಕಗಳು ಭಾರತೀಯರ ಬ್ಯಾಟ್​ನಿಂದಲೇ ಬಂದಿವೆ. ಮೊದಲ ದ್ವಿಶತಕ ಸಿಡಿಸಿದ್ದು ಕೂಡ ಭಾರತೀಯ (ಸಚಿನ್​ ತೆಂಡುಲ್ಕರ್​) ಎಂಬುದು ಗಮನಾರ್ಹ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net