ತಾಕತ್ತಿದ್ದರೆ ಆತ ನನ್ನೊಂದಿಗೆ... ಹರ್ಭಜನ್​ ಸಿಂಗ್​ಗೆ ಓಪನ್ ಚಾಲೆಂಜ್​ ಹಾಕಿದ ಶ್ರೀಶಾಂತ್! S Sreesanth

ತಾಕತ್ತಿದ್ದರೆ ಆತ ನನ್ನೊಂದಿಗೆ... ಹರ್ಭಜನ್​ ಸಿಂಗ್​ಗೆ ಓಪನ್ ಚಾಲೆಂಜ್​ ಹಾಕಿದ ಶ್ರೀಶಾಂತ್! S Sreesanth
ತಾಕತ್ತಿದ್ದರೆ ಆತ ನನ್ನೊಂದಿಗೆ... ಹರ್ಭಜನ್​ ಸಿಂಗ್​ಗೆ ಓಪನ್ ಚಾಲೆಂಜ್​ ಹಾಕಿದ ಶ್ರೀಶಾಂತ್! S Sreesanth
Published on

ಪ್ರಮುಖ ಮುಖ್ಯಾಂಶಗಳು

  • ವಿವಾದಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಿದ್ದ ಮಲಯಾಳಿ ಕ್ರಿಕೆಟಿಗ ಎಸ್. ಶ್ರೀಶಾಂತ್
  • ಇತ್ತೀಚೆಗೆ 'ದಿ ಲಲ್ಲನ್ ಟಾಪ್' ಟಾಕ್ ಶೋನಲ್ಲಿ ಭಾಗವಹಿಸಿದ ಟೀಮ್ ಇಂಡಿಯಾದ ಮಾಜಿ ವೇಗಿ
  • ತಮ್ಮ ಮಾಜಿ ಸಹ ಆಟಗಾರ ಹರ್ಭಜನ್ ಸಿಂಗ್ ವಿರುದ್ಧ ವಿವಾದಾತ್ಮಕ ಕಾಮೆಂಟ್‌ ಮಾಡಿದ ಕೇರಳ ಕ್ರಿಕೆಟಿಗ
S Sreesanth : ಟೀಮ್ ಇಂಡಿಯಾದ ಮಾಜಿ ವೇಗಿ ಹಾಗೂ ವಿವಾದಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಿದ್ದ ಮಲಯಾಳಿ ಕ್ರಿಕೆಟಿಗ ಎಸ್. ಶ್ರೀಶಾಂತ್, ಇತ್ತೀಚೆಗೆ 'ದಿ ಲಲ್ಲನ್ ಟಾಪ್' ಟಾಕ್ ಶೋನಲ್ಲಿ ಭಾಗವಹಿಸಿ ತಮ್ಮ ಮಾಜಿ ಸಹ ಆಟಗಾರ ಹರ್ಭಜನ್ ಸಿಂಗ್ ವಿರುದ್ಧ ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡುವ ಮೂಲಕ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಆರೋಪಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದಿಂದ ದೀರ್ಘಕಾಲ ದೂರ ಉಳಿದಿದ್ದ ಶ್ರೀಶಾಂತ್, ಈ ಕಾರ್ಯಕ್ರಮದಲ್ಲಿ ಹರ್ಭಜನ್ ಸಿಂಗ್ ಅವರಿಗೆ ಬಹಿರಂಗ ಸವಾಲೊಂದನ್ನು ಹಾಕಿದ್ದಾರೆ. ಮೈದಾನದಲ್ಲಿ ತಮ್ಮ ಆಟಕ್ಕಿಂತ ಹೆಚ್ಚಾಗಿ ವಿವಾದಾತ್ಮಕ ನಡವಳಿಕೆಗಳಿಂದಲೇ ಗುರುತಿಸಿಕೊಂಡಿದ್ದ ಶ್ರೀಶಾಂತ್ ಅವರ ಈ ಹೊಸ ಹೇಳಿಕೆಗಳು ಮತ್ತು ಸವಾಲು, ಹಳೆಯ 'ಸ್ಲ್ಯಾಪ್‌ಗೇಟ್' ವಿವಾದದ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದು, ಕ್ರಿಕೆಟ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಈ ಹಿಂದೆ ಐಪಿಎಲ್ ಪಂದ್ಯವೊಂದರ ವೇಳೆ ನಡೆದಿದ್ದ ಅತ್ಯಂತ ವಿವಾದಾತ್ಮಕ 'ಸ್ಲ್ಯಾಪ್‌ಗೇಟ್' ಘಟನೆಯನ್ನು ನೆನಪಿಸಿಕೊಂಡಿರುವ ಎಸ್. ಶ್ರೀಶಾಂತ್, ಸಂದರ್ಶನದ ವೇಳೆ ಕೈಯಲ್ಲಿ ಕ್ರಿಕೆಟ್ ಬಾಲ್ ಹಿಡಿದು ಹಾಗೂ ತಮ್ಮ ಹಿಂಭಾಗದ ಪರದೆಯ ಮೇಲೆ ಹರ್ಭಜನ್ ಸಿಂಗ್ ಅವರ ಫೋಟೋವನ್ನು ಪ್ರದರ್ಶಿಸುತ್ತಾ ಬಹಿರಂಗ ಸವಾಲು ಹಾಕಿದ್ದಾರೆ.
ನಿಮಗೆ ನಿಜವಾಗಿಯೂ ಧೈರ್ಯವಿದ್ದರೆ, ನನ್ನೊಂದಿಗೆ ರಿಂಗ್‌ನೊಳಗೆ ಬನ್ನಿ, ಅಲ್ಲಿ ನಮ್ಮಿಬ್ಬರ ನಡುವೆ ಹೋರಾಟ ನಡೆಯಲಿ ಎಂದು ಅವರು ಶ್ರೀಶಾಂತ್​ ಅವರು ಹರ್ಭಜನ್​ಗೆ ನೇರವಾಗಿ ಸವಾಲೆಸೆದಿದ್ದಾರೆ. ಇದರೊಂದಿಗೆ ತಾವು ಪ್ರಸ್ತುತ 'ಬೇರ್ ನಕಲ್ ಫೈಟಿಂಗ್ ಲೀಗ್' ಜೊತೆ ಗುರುತಿಸಿಕೊಂಡಿದ್ದು, ಅಂತಾರಾಷ್ಟ್ರೀಯ ಫೈಟರ್ ಆದ ಕೊನರ್ ಮೆಕ್‌ಗ್ರೆಗರ್ ಅವರಂತಹ ದಿಗ್ಗಜರೊಂದಿಗೆ ಕೆಲಸ ಮಾಡುತ್ತಿರುವುದಾಗಿ ಶ್ರೀಶಾಂತ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಹರ್ಭಜನ್ ಸಿಂಗ್ ಅವರಿಗೆ ಕೇವಲ ಜಾಹೀರಾತುಗಳಲ್ಲಿ ನಟಿಸುವುದಷ್ಟೇ ಅಲ್ಲದೆ, ನಿಜವಾಗಿಯೂ ಸ್ವಾಭಿಮಾನವಿದ್ದರೆ ರಿಂಗ್‌ನೊಳಗೆ ಬಂದು ತನ್ನೊಂದಿಗೆ ಸ್ಪರ್ಧಿಸಲಿ ಎಂದು ಶ್ರೀಶಾಂತ್ ಸವಾಲು ಹಾಕಿದ್ದಾರೆ. ಮಲಯಾಳಿಗಳು ಮತ್ತು ಸರ್ದಾರ್‌ಗಳ ಹೆಸರಿನಲ್ಲಿ ಈ ಸವಾಲನ್ನು ಸ್ವೀಕರಿಸುವಂತೆ ಹರ್ಭಜನ್ ಅವರನ್ನು ಕೆಣಕಿರುವ ಶ್ರೀಶಾಂತ್ ಅವರ ಈ ವಿವಾದಾತ್ಮಕ ಹೇಳಿಕೆಗಳ ವಿಡಿಯೋ ತುಣುಕುಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಸ್ಲ್ಯಾಪ್‌ಗೇಟ್ ಕೇಸ್​

ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿವಾದವಾಗಿ ಉಳಿದಿರುವ 'ಸ್ಲ್ಯಾಪ್‌ಗೇಟ್' ಘಟನೆಯು 2008ರ ಚೊಚ್ಚಲ ಐಪಿಎಲ್ ಆವೃತ್ತಿಯ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ನಡೆದಿತ್ತು. ಪಂದ್ಯ ಮುಗಿದ ಬಳಿಕ ಅಂದಿನ ಮುಂಬೈ ತಂಡದ ನಾಯಕರಾಗಿದ್ದ ಹರಭಜನ್ ಸಿಂಗ್, ಪಂಜಾಬ್ ತಂಡದ ವೇಗಿ ಎಸ್. ಶ್ರೀಶಾಂತ್ ಅವರಿಗೆ ಮೈದಾನದಲ್ಲೇ ಬಹಿರಂಗವಾಗಿ ಕಪಾಳಮೋಕ್ಷ ಮಾಡಿದ್ದರು. ಪಂದ್ಯ ಮುಗಿದ ನಂತರ ಶ್ರೀಶಾಂತ್ ಮೈದಾನದಲ್ಲೇ ಕಣ್ಣೀರಿಡುತ್ತಿರುವ ದೃಶ್ಯಗಳು ಇಡೀ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದವು. ಈ ಕೃತ್ಯಕ್ಕಾಗಿ ಹರ್ಭಜನ್ ಸಿಂಗ್ ಅವರನ್ನು ಆ ಐಪಿಎಲ್ ಸೀಸನ್‌ನ ಉಳಿದ ಪಂದ್ಯಗಳಿಂದ ನಿಷೇಧಿಸಲಾಗಿದ್ದಲ್ಲದೆ, ಅವರ ಪಂದ್ಯದ ಶುಲ್ಕವನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಆರಂಭದಲ್ಲಿ ಇದು ಇಬ್ಬರ ನಡುವಿನ ತೀವ್ರ ವೈಷಮ್ಯಕ್ಕೆ ಕಾರಣವಾಗಿದ್ದರೂ, ಆ ನಂತರದ ವರ್ಷಗಳಲ್ಲಿ ಇಬ್ಬರೂ ಆಟಗಾರರು ಸಾರ್ವಜನಿಕವಾಗಿ ಒಂದಾಗಿ ಹಳೆಯ ಕಹಿ ಘಟನೆಯನ್ನು ಮರೆತು ಸ್ನೇಹಿತರಾಗಿದ್ದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net