T20 World Cup: ಕೆನಡಾ ಎದುರು ರನ್​ಮಳೆ ಹರಿಸಿ ಗೆದ್ದ ದಕ್ಷಿಣ ಆಫ್ರಿಕಾ

T20 World Cup: ಕೆನಡಾ ಎದುರು ರನ್​ಮಳೆ ಹರಿಸಿ ಗೆದ್ದ ದಕ್ಷಿಣ ಆಫ್ರಿಕಾ
T20 World Cup: ಕೆನಡಾ ಎದುರು ರನ್​ಮಳೆ ಹರಿಸಿ ಗೆದ್ದ ದಕ್ಷಿಣ ಆಫ್ರಿಕಾ
Published on
ಅಹಮದಾಬಾದ್​: ನಾಯಕ ಏಡನ್​ ಮಾರ್ಕ್ರಮ್​ (59 ರನ್​, 32 ಎಸೆತ, 10 ಬೌಂಡರಿ, 1 ಸಿಕ್ಸರ್​) ಬಿರುಸಿನ ಅರ್ಧಶತಕ ಮತ್ತು ವೇಗಿ ಲುಂಗಿ ಎನ್​ಗಿಡಿ (31ಕ್ಕೆ 4) ಬಿಗಿ ಬೌಲಿಂಗ್​ ದಾಳಿಯ ನೆರವಿನಿಂದ ಹಾಲಿ ರನ್ನರ್​ಅಪ್​ ದಕ್ಷಿಣ ಆಫ್ರಿಕಾ ತಂಡ ಚುಟುಕು ಕ್ರಿಕೆಟ್​ ವಿಶ್ವಕಪ್​ (T20 World Cup) ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಕೆನಡಾ ಎದುರು 57 ರನ್​ಗಳಿಂದ ಗೆಲುವು ಸಾಧಿಸಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ಹೊನಲುಬೆಳಕಿನಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಕೆನಡಾ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿತು. ಇದರಿಂದ ಬ್ಯಾಟಿಂಗ್​ ಸ್ನೇಹಿ ಪಿಚ್​ನ ಸಂಪೂರ್ಣ ಲಾಭ ಬಳಸಿಕೊಂಡ ಹರಿಣಗಳ ಪಡೆ ರನ್​ಪ್ರವಾಹ ಹರಿಸಿ 4 ವಿಕೆಟ್​ಗೆ 213 ರನ್​ ಕಲೆಹಾಕಿತು. ಪ್ರತಿಯಾಗಿ ಕೆನಡಾ, ನವನೀತ್​ ಧಲಿವಲ್​ (64 ರನ್​, 49 ಎಸೆತ, 7 ಬೌಂಡರಿ, 1 ಸಿಕ್ಸರ್​) ಹೋರಾಟದ ನಡುವೆಯೂ 8 ವಿಕೆಟ್​ಗೆ 156 ರನ್​ ಗಳಿಸಲಷ್ಟೇ ಶಕ್ತಗೊಂಡಿತು.

ಮುನ್ನ ಮಾರ್ಕ್ರಮ್​ 28 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದರು. ಇದರಿಂದ ದ. ಆಫ್ರಿಕಾ ಪವರ್​ಪ್ಲೇನಲ್ಲಿ 66 ರನ್​ ದೋಚಿತು. ನಂತರ ಮುರಿಯದ 5ನೇ ವಿಕೆಟ್​ಗೆ ಮಿಲ್ಲರ್​-ಸ್ಟಬ್ಸ್​ ಜೋಡಿ 39 ಎಸೆತಗಳಲ್ಲೇ 75 ರನ್​ ಜತೆಯಾಟವಾಡಿ ಮೊತ್ತ ಏರಿಸಿತು. ಜಸ್ಕರಣ್​ ಸಿಂಗ್​ ಎಸೆದ ಇನಿಂಗ್ಸ್​ನ ಕೊನೇ ಓವರ್​ನಲ್ಲಿ ಡೇವಿಡ್​ ಮಿಲ್ಲರ್​ (39*) ಮತ್ತು ಟ್ರಿಸ್ಟಾನ್​ ಸ್ಟಬ್ಸ್​ (34*) 21 ರನ್​ ಕಸಿದರು.

ದಕ್ಷಿಣ ಆಫ್ರಿಕಾ: 4 ವಿಕೆಟ್​ಗೆ 213 (ಮಾರ್ಕ್ರಮ್​ 59, ಡಿಕಾಕ್​ 25, ರಿಕೆಲ್​ಟನ್​ 33, ಬ್ರೆವಿಸ್​ 6, ಮಿಲ್ಲರ್​ 39*, ಸ್ಟಬ್ಸ್​ 34*, ಅಂಶ್​ ಪಟೇಲ್​ 31ಕ್ಕೆ 3, ದಿಲ್​ಪ್ರೀತ್​ 40ಕ್ಕೆ 1). ಕೆನಡಾ: 8 ವಿಕೆಟ್​ಗೆ 156 (ಯುವರಾಜ್​ ಸಮ್ರಾ 12, ನವನೀತ್​ ಧಲಿವಾಲ್​ 64, ಹರ್ಷ್​ ಥಾಕರ್​ 33, ಸಾದ್​ ಬಿನ್​ ಜಾರ್​ 11, ಎನ್​ಗಿಡಿ 31ಕ್ಕೆ 4, ಮಾಕೋರ್ ಯಾನ್ಸೆನ್​ 30ಕ್ಕೆ 2, ರಬಾಡ 40ಕ್ಕೆ 1). ಪಂದ್ಯಶ್ರೇಷ್ಠ: ಲುಂಗಿ ಎನ್​ಗಿಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net