ಬ್ಯಾಟ್​ಗೆ ಬಾಲ್​ ತಾಗದಿದ್ರೂ ಔಟ್​ ಕೊಟ್ಟ ಅಂಪೈರ್​: 8 ಪಂದ್ಯದಲ್ಲಿ 31 ಕ್ಯಾಚ್​, ಬಯಲಾಯ್ತು ಫೀಲ್ಡರ್​ ಚಿಟಿಕೆ ರಹಸ್ಯ! Clicky Ponting

ಬ್ಯಾಟ್​ಗೆ ಬಾಲ್​ ತಾಗದಿದ್ರೂ ಔಟ್​ ಕೊಟ್ಟ ಅಂಪೈರ್​: 8 ಪಂದ್ಯದಲ್ಲಿ 31 ಕ್ಯಾಚ್​, ಬಯಲಾಯ್ತು ಫೀಲ್ಡರ್​ ಚಿಟಿಕೆ ರಹಸ್ಯ! Clicky Ponting
ಬ್ಯಾಟ್​ಗೆ ಬಾಲ್​ ತಾಗದಿದ್ರೂ ಔಟ್​ ಕೊಟ್ಟ ಅಂಪೈರ್​: 8 ಪಂದ್ಯದಲ್ಲಿ 31 ಕ್ಯಾಚ್​, ಬಯಲಾಯ್ತು ಫೀಲ್ಡರ್​ ಚಿಟಿಕೆ ರಹಸ್ಯ! Clicky Ponting
Published on

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್‌ನ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ಫೀಲ್ಡರ್ ಬೆರಳಿನ ಶಬ್ದಕ್ಕೆ ಬ್ಯಾಟರ್ ಔಟ್
  • ಚಿಟಿಕೆ ಶಬ್ದವನ್ನು ಬ್ಯಾಟ್‌ನ ಅಂಚು ಎಂದು ತಪ್ಪಾಗಿ ಭಾವಿಸಿ ತೀರ್ಪು ನೀಡಿದ ಅಂಪೈರ್
  • ವಿಕೆಟ್‌ಕೀಪರ್ ಜೋಶ್ ಬೋವ್ಸ್ ಅವರ ಅನುಮಾನಸ್ಪಾದ ಕ್ಯಾಚ್‌ಗಳ ದಾಖಲೆಗಳ ಬಗ್ಗೆ ತನಿಖೆ
  • ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಿತ್ರ ವಂಚನೆ ಘಟನೆಗೆ ಕ್ಲಿಕ್ಕಿ ಪಾಂಟಿಂಗ್ ಎಂದು ನಾಮಕರಣ
Clicky Ponting : ಇಂಗ್ಲೆಂಡ್‌ನ ಕ್ಲಬ್ ಕ್ರಿಕೆಟ್‌ನಲ್ಲಿ ನಡೆದಿರುವ ವಿಚಿತ್ರ ಮತ್ತು ಅಚ್ಚರಿಯ ಘಟನೆಯೊಂದು ಇಡೀ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಫೀಲ್ಡರ್‌ ಒಬ್ಬ ತನ್ನ ಬೆರಳುಗಳ ಮೂಲಕ ಮಾಡಿದ ಶಬ್ದದಿಂದ ಗೊಂದಲಕ್ಕೆ ಒಳಗಾದ ಅಂಪೈರ್, ಔಟ್ ಎಂದು ತೀರ್ಪು ನೀಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂಗ್ಲೆಂಡ್ ಕ್ಲಬ್ ಕ್ರಿಕೆಟ್‌ನಲ್ಲಿ ನಡೆದ ಘಟನೆ

ನಾರ್ತ್​ ಯಾರ್ಕ್‌ಷೈರ್ ಮತ್ತು ಸೌತ್ ಡರಮ್ ಕ್ರಿಕೆಟ್ ಲೀಗ್ (NYSD) ವಿಭಾಗ-2ರ ಪಂದ್ಯದಲ್ಲಿ ಸಾಲ್ಟ್‌ಬರ್ನ್ ಕ್ರಿಕೆಟ್ ಕ್ಲಬ್ ಹಾಗೂ ನಾರ್ಟನ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯದಲ್ಲಿ ಈ ವಿವಾದ ಭುಗಿಲೆದ್ದಿದೆ. ನಾರ್ಟನ್ ತಂಡದ ಬ್ಯಾಟರ್ ನೊಮಾನ್ ಶಬೀರ್ ಬ್ಯಾಟಿಂಗ್ ಮಾಡುತ್ತಿದ್ದಾಗ ಎದುರಾಳಿ ಬೌಲರ್ ಎಸೆದ ಚೆಂಡು ಬ್ಯಾಟ್‌ಗೆ ತಾಗದೆ ನೇರವಾಗಿ ವಿಕೆಟ್‌ಕೀಪರ್ ಕೈ ಸೇರಿತ್ತು.
ಬೆರಳಿನ ಶಬ್ದಕ್ಕೆ ಸಿಕ್ಕ ತಪ್ಪು ತೀರ್ಪು
ಚೆಂಡು ಬ್ಯಾಟ್ ಹತ್ತಿರ ಹಾಯ್ದು ಹೋಗುವಾಗ ಸಾಲ್ಟ್‌ಬರ್ನ್ ತಂಡದ ಸ್ಲಿಪ್ ಫೀಲ್ಡರ್ ಬ್ರೈನ್​ ಡಿವಿನ್ ತನ್ನ ಬೆರಳುಗಳಲ್ಲಿ ಚಿಟಿಕೆ ಹೊಡೆಯುವ ಮೂಲಕ ಶಬ್ದ ಮಾಡಿದನು. ಈ ವೇಳೆ ಸಾಲ್ಟ್‌ಬರ್ನ್ ಆಟಗಾರರು ಔಟ್​ಗಾಗಿ ಮನವಿ ಮಾಡಿದಾಗ, ಅಂಪೈರ್ ಆ ಚಿಟಿಕೆ ಶಬ್ದವನ್ನು ಬ್ಯಾಟ್‌ನ ಅಂಚು ಎಂದು ತಪ್ಪಾಗಿ ಭಾವಿಸಿ ಬ್ಯಾಟರ್ ಅನ್ನು ಔಟ್ ಎಂದು ಘೋಷಿಸಿದರು.

ವಿಡಿಯೋ ವೈರಲ್ ಹಾಗೂ ತನಿಖೆ

ಬ್ಯಾಟರ್ ತಾನು ಔಟ್​ ಆಗಿಲ್ಲವೆಂದು ವಾದಿಸಿದರೂ ಅಂಪೈರ್ ತೀರ್ಪು ಬದಲಿಸಲಿಲ್ಲ ಮತ್ತು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಹವ್ಯಾಸಿ ಕ್ರಿಕೆಟ್‌ನಲ್ಲಿ ಡಿಆರ್‌ಎಸ್ ನಂತಹ ತಾಂತ್ರಿಕ ಸೌಲಭ್ಯಗಳ ಕೊರತೆಯಿಂದಾಗಿ ಅಂಪೈರ್‌ಗಳು ಶಬ್ದ ಮತ್ತು ದೃಶ್ಯಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವುದರಿಂದ, ಈ ಘಟನೆಯ ಬಗ್ಗೆ ಅಧಿಕೃತ ದೂರು ಸ್ವೀಕರಿಸಿ ತನಿಖೆ ನಡೆಸುವುದಾಗಿ ಎನ್‌ವೈಎಸ್‌ಡಿ ಲೀಗ್ ಘೋಷಿಸಿದೆ.
ಸಾಲ್ಟ್‌ಬರ್ನ್ ತಂಡದ ವಿಕೆಟ್‌ಕೀಪರ್ ಜೋಶ್ ಬೋವ್ಸ್ ಈ ಸೀಸನ್‌ನಲ್ಲಿ ಕೇವಲ ಎಂಟು ಲೀಗ್ ಪಂದ್ಯಗಳಲ್ಲಿ 31 ಕ್ಯಾಚ್‌ಗಳನ್ನು ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಶೇಷವಾಗಿ ಶಿಲ್ಡನ್ ರೈಲ್ವೆ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಅವರು ಏಕೈಕ ಇನ್ನಿಂಗ್ಸ್‌ನಲ್ಲಿ ಎಂಟು ಕ್ಯಾಚ್‌ಗಳನ್ನು ಪಡೆದಿರುವುದು ಟೆಸ್ಟ್ ಕ್ರಿಕೆಟ್ ದಾಖಲೆಯನ್ನೇ ಮೀರಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

ಇತರ ಕ್ಲಬ್‌ಗಳಿಂದ ಗಂಭೀರ ಆರೋಪ

ಸಾಲ್ಟ್‌ಬರ್ನ್ ಕ್ಲಬ್ ವಿರುದ್ಧ ಇತರೆ ಕ್ಲಬ್‌ಗಳೂ ಸಹ ಇದೇ ರೀತಿಯ ಆರೋಪಗಳನ್ನು ಮಾಡಿದ್ದು, ಮಿಡ್ಲ್‌ಸ್ಬ್ರೋ ತಂಡದ ನಾಯಕ ರೋರಿ ಕಾಟರಿಲ್ ತಮ್ಮ ತಂಡದ ವಿರುದ್ಧದ ಪಂದ್ಯದಲ್ಲೂ ಇಂತಹದ್ದೇ ಘಟನೆಗಳು ನಡೆದಿವೆ ಎಂದು ಹೇಳಿದ್ದಾರೆ. ಅಲ್ಲದೆ, ಸಾಲ್ಟ್‌ಬರ್ನ್ ಕ್ಲಬ್‌ನ ಕೆಲವು ಹಳೆಯ ಪಂದ್ಯಗಳ ಲೈವ್‌ಸ್ಟ್ರೀಮ್‌ಗಳನ್ನು ಅಧಿಕೃತ ಚಾನೆಲ್‌ಗಳಿಂದ ತೆಗೆದುಹಾಕಲಾಗಿದೆ ಎಂಬ ವರದಿಗಳು ಕೂಡ ಕೇಳಿಬಂದಿವೆ.

'ಕ್ಲಿಕ್ಕಿ ಪಾಂಟಿಂಗ್' ಹೆಸರಿನ ಹಿಂದಿರುವ ಕಾರಣವೇನು?

ಬ್ಯಾಟ್‌ನ ಅಂಚಿನ ಶಬ್ದವನ್ನು ಅನುಕರಿಸಲು ಫೀಲ್ಡರ್ ಬೆರಳುಗಳನ್ನು ಕ್ಲಿಕ್ ಮಾಡುತ್ತಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಈ ಘಟನೆಗೆ 'ಕ್ಲಿಕಿ ಪಾಂಟಿಂಗ್' ಎಂದು ಹೆಸರಿಸಿದ್ದಾರೆ. ಇಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಹೆಸರನ್ನು ತಮಾಷೆಗಾಗಿ ಬಳಸಲಾಗಿದ್ದರೂ, ಈ ಘಟನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಅಭಿಮಾನಿಗಳು ಸ್ಪಷ್ಟಪಡಿಸಿದ್ದು, ಪ್ರಸ್ತುತ ಈ ವಿಡಿಯೋ ಜಗತ್ತಿನಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net