ಆಟದಲ್ಲಿನ ಸ್ಪಷ್ಟತೆಯೇ ಶತಕಕ್ಕೆ ಕಾರಣ!: ಶ್ರೀಲಂಕಾ ವಿರುದ್ಧದ ಇನಿಂಗ್ಸ್‌ಗೆ ಕನ್ನಡಿಗ ದೇವದತ್ ಪಡಿಕ್ಕಲ್ ಸಂತಸ

ಕನ್ನಡಿಗ ದೇವದತ್ ಪಡಿಕ್ಕಲ್
ಕನ್ನಡಿಗ ದೇವದತ್ ಪಡಿಕ್ಕಲ್
Published on

ಗಾಲೆ: ಸ್ಪಿನ್ನರ್‌ಗಳ ವಿರುದ್ಧ ಆಡುವಾಗ ಹೊಂದಿರುವ ಸ್ಪಷ್ಟತೆ ಹಾಗೂ ಮೂರಂಕಿಯ ಮೊತ್ತಗಳನ್ನು ದೊಡ್ಡ ಇನಿಂಗ್ಸ್‌ಗಳಾಗಿ ಪರಿವರ್ತಿಸುವ ಹಸಿವಿನ ಲಿತಾಂಶವೇ ಚೊಚ್ಚಲ ಶತಕ ಎಂದು ಕನ್ನಡಿಗ ದೇವದತ್ ಪಡಿಕ್ಕಲ್, ಶ್ರೀಲಂಕಾ ವಿರುದ್ಧದ ಇನಿಂಗ್ಸ್‌ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತ ಟೆಸ್ಟ್ ತಂಡದಲ್ಲಿ ಕಾಯಂ ಸ್ಥಾನ ಪಡೆಯಲು ಶ್ರಮಿಸುತ್ತಿರುವ 24 ವರ್ಷದ ಪಡಿಕ್ಕಲ್, ಅವಕಾಶ ಸಿಕ್ಕದಾಗಲೆಲ್ಲಾ ಈ ರೀತಿಯ ವಿಶೇಷ ಇನಿಂಗ್ಸ್‌ಗಳನ್ನು ಆಡುವ ಬಗ್ಗೆ ಕಳೆದ ಎರಡು ವರ್ಷಗಳಿಂದ ಅಭ್ಯಾಸ ನಡೆಸಿದ್ದೆ. ಈ ಕ್ಷಣಕ್ಕಾಗಿ ಹಲವು ದಿನಗಳಿಂದ ಕನಸು ಕಂಡಿದ್ದು, ಚೊಚ್ಚಲ ಟೆಸ್ಟ್ ಶತಕ ನಿಜಕ್ಕೂ ಸಂತೋಷ ನೀಡಿದೆ ಎಂದರು. ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಲು ಸ್ಪಷ್ಟ ಯೋಜನೆ ರೂಪಿಸಿಕೊಂಡಿರುವೆ.

ಸ್ಪಿನ್ ವಿರುದ್ಧ ಆಡುವಾಗ, ನನ್ನದೇ ಆದ ಕೆಲವು ಯೋಜನೆಗಳನ್ನು ಹೊಂದಿರುವುದು ಬಹಳ ಮುಖ್ಯ. ಕ್ರೀಸ್‌ಗಿಳಿದ ತಕ್ಷಣ ಆಡಲು ಬಯಸುವ ಒಂದೆರಡು ಹೊಡೆತಗಳ ಬಗ್ಗೆಯೂ ಅರಿವಿರಬೇಕು. ಇದು ಬೌಲರ್ ಮೇಲೆ ಒತ್ತಡ ಹೇರಲು ನೆರವಾಗಲಿದೆ. ಜತೆಗೆ ಪಾದಗಳ ಚಲನೆಯಲ್ಲಿನ ಕೆಲ ಬದಲಾವಣೆ ರಕ್ಷಣಾತ್ಮಕ ಜತೆಗೆ ಇತರ ಶಾಟ್‌ಗಳಿಗೂ ಸಿದ್ಧವಾಗಿರಲು ನೆರವಾಗಿದೆ ಎಂದು ಕರ್ನಾಟಕ ತಂಡದ ನಾಯಕ ಪಡಿಕ್ಕಲ್ ಶತಕದ ಹಿಂದಿನ ಶ್ರಮವನ್ನು 2ನೇ ದಿನದಾಟದ ನಂತರ ವಿವರಿಸಿದರು.


ನೀವು ಏನು ಮಾಡಲು ಬಯಸುತ್ತೀರಿ ಎಂಬ ವಿಷಯದಲ್ಲಿ ಸ್ಪಷ್ಟತೆ ಇದ್ದಾಗ, ಪಾದಚಲನೆಯಲ್ಲೂ ಅದೇ ವಿಶ್ವಾಸ ವಿರಲಿದೆ ಎಂದು ಭಾವಿಸುತ್ತೇನೆ. ಶತಕ ಗಳಿಸಿದ ನಂತರ ವಿಶ್ರಾಂತಿ ಜತೆಗೆ ನಿರಾಳತೆ ಸಿಗಲಿದೆ. ಆದರೆ, ಮುಂದಿನ 20-30 ಎಸೆತಗಳು ನಿಜವಾಗಿಯೂ ಪ್ರಮುಖ ಹಂತವಾಗಿದ್ದು, ಅದರ ಮೇಲೆ ಸಂಪೂರ್ಣವಾಗಿ ಗಮನ ಹರಿಸಬೇಕು. ಮೊದಲ 10 ಎಸೆತಗಳನ್ನು ಸಮರ್ಥವಾಗಿ ಎದುರಿಸಿದ ನಂತರ ಕೆಲಸ ಸುಲಭ ಎನಿಸಲಿದೆ. ಅನೇಕ ಕ್ರಿಕೆಟಿಗರ ದೊಡ್ಡ ಇನಿಂಗ್ಸ್‌ಗಳನ್ನು ನಾನು ನೋಡಿದ್ದೇನೆ, ವಿಶೇಷವಾಗಿ ಕರ್ನಾಟಕದಲ್ಲಿ. ನಾನು ಅದೇ ರೀತಿಯ ಇನಿಂಗ್ಸ್ ಆಡಲು ಅವರು ಪ್ರೇರಣೆ ಆಗಿದ್ದಾರೆ ಎಂದು ಪಡಿಕ್ಕಲ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net