ಅದನ್ನೆಲ್ಲ ಬಿಟ್ಟು 6 ತಿಂಗಳೇ ಆಯ್ತು! ಐಪಿಎಲ್​ ಶುರುವಿಗೂ ಮುನ್ನವೇ ಮಿ.360 ಮುಂದೆ ಶಾಕಿಂಗ್​ ವಿಷಯ ಬಿಚ್ಚಿಟ್ಟ ಚಹಲ್​ | IPL 2026

ಎಬಿ ಡಿವಿಲಿಯರ್ಸ್​ ಜೊತೆ​ ಯುಜ್ವೇಂದ್ರ ಚಹಲ್​
ಎಬಿ ಡಿವಿಲಿಯರ್ಸ್​ ಜೊತೆ​ ಯುಜ್ವೇಂದ್ರ ಚಹಲ್​
Published on

ಪ್ರಮುಖ ಮುಖ್ಯಾಂಶಗಳು

  • ಇದೇ ಮಾ.28ರಿಂದ ಐಪಿಎಲ್​ 19ನೇ ಆವೃತ್ತಿ ಆರಂಭ
  • ಲೀಗ್​ ಆರಂಭಕ್ಕೂ ಮುನ್ನ ಸ್ಪಿನ್ನರ್​ ಯುಜ್ವೇಂದ್ರ ಚಹಲ್ ಮನದಾಳ
  • ಎಬಿಡಿ ಜೊತೆ ಪಾಡ್​ಕಾಸ್ಟ್​ನಲ್ಲಿ ಮುಕ್ತ ಮಾತು
ನವದೆಹಲಿ: ಇದೇ ಮಾ.28ರಿಂದ ಐಪಿಎಲ್​ 19ನೇ ಆವೃತ್ತಿ (IPL 2026) ಆರಂಭವಾಗಲಿದ್ದು, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳ ನಡುವೆ ಕಿಕ್​ಸ್ಟಾರ್ಟ್​​ ಪಂದ್ಯ ನಡೆಯಲಿದೆ. ಪ್ರತಿವರ್ಷ ಇಂಡಿಯನ್ ಪ್ರೀಮಿಯರ್ ಲೀಗ್​ನ ಶುಭಾರಂಭ ಪಂದ್ಯದಲ್ಲಿ, ಯಾವ ತಂಡ ಇರುತ್ತದೆಯೋ ಇಲ್ಲವೋ, ಆದರೆ, ಆರ್​ಸಿಬಿ ಸ್ಥಾನವಂತು ಖಚಿತ. ಇದು ಫ್ರಾಂಚೈಸಿಯ​ ಅಭಿಮಾನಿಗಳಲ್ಲಿ ಭಾರೀ ಸಂತಸ. ಕಳೆದ ವರ್ಷ ಚೊಚ್ಚಲ ಐಪಿಎಲ್​ ಪ್ರಶಸ್ತಿಗೆ ಮುತ್ತಿಟ್ಟಂತೆ 19ನೇ ಸೀಸನ್​ನ ಚಾಂಪಿಯನ್ಸ್​ ಪಟ್ಟವು ಆರ್​ಸಿಬಿ ಪಾಲಾಗಲಿ ಎಂಬ ಆರೈಕೆಗಳು ತಂಡದ ಅಭಿಮಾನಿಗಳದ್ದು. ಹೀಗಿರುವಾಗಲೇ, ಆರ್​ಸಿಬಿಯ ಮಾಜಿ ಸ್ಪಿನ್ನರ್​ ನೀಡಿರುವ ಹೇಳಿಕೆಗಳು ಸದ್ಯ ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ.
ಪ್ರಸ್ತುತ, ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಟೀಮ್ ಇಂಡಿಯಾದ ಸ್ಪಿನ್​ ಮಾಂತ್ರಿಕ ಯುಜ್ವೇಂದ್ರ ಚಹಲ್, ಈ ಬಾರಿಯ ಐಪಿಎಲ್​ಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಆರ್​ಸಿಬಿ ಪರ ಅತ್ಯಧಿಕ ವಿಕೆಟ್​ಗಳನ್ನು ಪಡೆದು ಮಿಂಚಿರುವ ಚಹಲ್​, 19ನೇ ಆವೃತ್ತಿಯಲ್ಲಿ ಪಂಜಾಬ್​ ಪರ ಹೆಚ್ಚೆಚ್ಚು ವಿಕೆಟ್​ಗಳನ್ನು ಪಡೆಯುವ ಉತ್ಸಾಹದಲ್ಲಿದ್ದಾರೆ. ಇನ್ನೇನು ಲೀಗ್​ ಆರಂಭಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇರುವಂತೆ, ಆರ್​ಸಿಬಿಯ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್​ ಅವರ ಯೂಟ್ಯೂಬ್​ ಚಾನಲ್​ನ ಮಾತುಕತೆಯಲ್ಲಿ ಭಾಗಿಯಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಲವು ವಿಷಯಗಳನ್ನು ಮುಕ್ತವಾಗಿ ಮಾತನಾಡಿದರು.
"ನಾನು ಕುಡಿತವನ್ನು ಸಂಪೂರ್ಣವಾಗಿ ಬಿಟ್ಟಿದ್ದೇನೆ. ಅದನ್ನೆಲ್ಲ ಬಿಟ್ಟೆ ಇಂದಿಗೆ ಆರು ತಿಂಗಳು ಕಳೆದಿವೆ. ಈಗ ನನ್ನ ವಯಸ್ಸು 35. ಹಿಂದಿನಕ್ಕಿಂತ ಹೆಚ್ಚಾಗಿ ಆಕ್ಟೀವ್​ ಆಗಿರಬೇಕು. ತಂಡಕ್ಕೆ ಶೇ.150ಕ್ಕಿಂತ ಹೆಚ್ಚು ಪಟ್ಟು ಕೊಡುಗೆ ನೀಡುವುದೇ ನನ್ನ ಮುಖ್ಯ ಗುರಿ. ಜೊತೆಗೆ ಒಬ್ಬ ಹಿರಿಯ ಆಟಗಾರನಾಗಿ, ನನ್ನಿಂದ ಇತರೆ ಕ್ರಿಕೆಟಿಗರು ಏನಾದರೂ ಕಲಿಯಬೇಕು" ಎಂದರು.
"18ನೇ ಆವೃತ್ತಿಯ ಫೈನಲ್​ನಲ್ಲಿ ನಾವು ಮಾರ್ಕೋ ಜೆನ್ಸೆನ್​ ಅವರ ಅನುಪಸ್ಥಿತಿಯಲ್ಲಿ ಆಡಿದೆವು. ಅವರಿದಿದ್ದರೆ, ಖಂಡಿತ ಚಾಂಪಿಯನ್ಸ್ ಪಟ್ಟ ನಮ್ಮದೇ ಆಗ್ತಿತ್ತು. ಇಡೀ ಟೂರ್ನಿಯಲ್ಲಿ ಅವರ ಬೌಲಿಂಗ್ ಅದ್ಭುತವಾಗಿತ್ತು. ಒಳ್ಳೆಯ ಪ್ರದರ್ಶನ ಕೂಡ ನೀಡಿದರು. ಅದು ಬ್ಯಾಟಿಂಗ್​ನಲ್ಲಿ ಕೂಡ. ಕೊನೆಯ ಓವರ್​ಗಳಲ್ಲಿ 2ರಿಂದ 3 ಸಿಕ್ಸರ್​ಗಳನ್ನು ಸಿಡಿಸುವ ಸಾಮರ್ಥ್ಯವಿತ್ತು. ಅವರ ಬೌಲಿಂಗ್​ನಿಂದ ತಂಡದಲ್ಲಿ ವಿಶ್ವಾಸ ಇನ್ನಷ್ಟು ಹೆಚ್ಚಿದೆ. ಎದುರಾಳಿ ಟೀಮ್​ನ ಆರಂಭಿಕ ಬ್ಯಾಟರ್​ಗಳಿಗೆ ಅದು ಅಷ್ಟು ಸುಲಭದ ಮಾತಲ್ಲ" ಎಂದರು.
"ನನ್ನ ಬಗ್ಗೆಯೇ ನನಗೆ ಬೇಸರವಿದೆ. ಕೆಕೆಆರ್​ ವಿರುದ್ಧದ ಪಂದ್ಯದ ಬಳಿಕ ಸ್ವಲ್ಪ ನಿರಾಶೆಯಾಯಿತು. ನನಗೆ ಪಕ್ಕೆಲುಬು ಮುರಿಯಿತು. ಜೊತೆಗೆ ಬೆರಳಿನ ಮೂಳೆ ಕೂಡ ಮುರಿದುಹೋಯಿತು. ಆದ್ದರಿಂದ, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ತಂಡದ ಪರ ಆಡಲು ಸಾಧ್ಯವಾಗಲಿಲ್ಲ. ಆದರೆ, ಈ ವರ್ಷ, ನಾನು ಮೊದಲು ನನ್ನ ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net