ವೇಗಿಗಳ ಫಿಟ್ನೆಸ್‌ಗೆ ನಾಯಕ ಶುಭಮಾನ್ ಗಿಲ್ ಕಳವಳ!: ಲಾಡ್ಸ್​​ನಲ್ಲಿ ಹಲವು ದಾಖಲೆ ಬರೆದ ರೋಹಿತ್

ವೇಗಿಗಳ ಫಿಟ್ನೆಸ್‌ಗೆ ನಾಯಕ ಶುಭಮಾನ್ ಗಿಲ್ ಕಳವಳ!: ಲಾಡ್ಸ್​​ನಲ್ಲಿ ಹಲವು ದಾಖಲೆ ಬರೆದ ರೋಹಿತ್
ವೇಗಿಗಳ ಫಿಟ್ನೆಸ್‌ಗೆ ನಾಯಕ ಶುಭಮಾನ್ ಗಿಲ್ ಕಳವಳ!: ಲಾಡ್ಸ್​​ನಲ್ಲಿ ಹಲವು ದಾಖಲೆ ಬರೆದ ರೋಹಿತ್
Published on
ಲಂಡನ್: ಪ್ರತಿ 2-3ನೇ ಪಂದ್ಯಕ್ಕೆ ಮುನ್ನ ವೇಗಿಗಳು ಗಾಯದ ಸಮಸ್ಯೆಗೆ ತುತ್ತಾಗುತ್ತಿರುವ ವಿಷಯದ ಕುರಿತು ಕಳವಳ ವ್ಯಕ್ತಪಡಿಸಿರುವ ಭಾರತ ಏಕದಿನ ತಂಡದ ನಾಯಕ ಶುಭಮಾನ್ ಗಿಲ್, ಮುಂದಿನ ವರ್ಷದ ಐಸಿಸಿ ವಿಶ್ವಕಪ್ ಮ್ಯಾರಥಾನ್ ಟೂರ್ನಿಯಲ್ಲಿ ಆಡಲು ಫಿಟ್ನೆಸ್ ಅನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ 27 ರನ್‌ಗಳಿಂದ ಸೋಲು ಅನುಭವಿಸಿದ ಭಾರತ, ಮೂರು ಪಂದ್ಯಗಳ ಸರಣಿಯನ್ನು 1-2ರಿಂದ ಕೈಚೆಲ್ಲಿತು. ಸರಣಿ ಆರಂಭಕ್ಕೆ ಮುನ್ನ ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ ನಂತರ ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ ಹಾಗೂ ಟಿ20 ಸರಣಿಯಲ್ಲಿ ಹರ್ಷಿತ್ ರಾಣಾ ಗಾಯದ ಸಮಸ್ಯೆ ಎದುರಿಸಿದರು. ಏಕದಿನ ಸರಣಿಗೆ ಆಯ್ಕೆ ಮಾಡಿದ ತಂಡಕ್ಕೂ, ಕೊನೇ ಪಂದ್ಯ ಆಡಿದ 11ರ ಬಳಗದಲ್ಲಿ ಐವರು ಬದಲಿ ಆಟಗಾರರಿದ್ದಾರೆ. ಒಂದೆರಡು ಪಂದ್ಯ ಆಡಿದ ನಂತರ ಗಾಯಗೊಂಡರೆ, ಮುಂದಿನ ವರ್ಷ ಏಕದಿನ ವಿಶ್ವಕಪ್‌ನಲ್ಲಿ 11 ಪಂದ್ಯಗಳನ್ನು ಹೇಗೆ ಆಡಬಹುದು ಎಂದು ಪ್ರಶ್ನಿಸಿದ್ದಾರೆ.

ದಿನಾ ಬೆಳಗ್ಗೆ ಒಬ್ಬ ಆಟಗಾರರ ಗಾಯದ ಸಮಸ್ಯೆ ಹೇಳಿದರೆ, ತಂಡದ ಸಂಯೋಜನೆ ಬದಲಾವಣೆ ಮಾಡಬೇಕಾಗುತ್ತದೆ. ಇದರಿಂದ ನಾವು ಕೆಲ ತಂತ್ರಗಳನ್ನು ಕೈಬಿಡಬೇಕಾಗುತ್ತದೆ. ಆದ್ದರಿಂದ ಆಟಗಾರರು ಫಿಟ್ನೆಸ್ ಜತೆಗೆ ಎಲ್ಲ ವಿಭಾಗಗಳಲ್ಲಿ ಸುಧಾರಣೆ ಕಾಣಬೇಕಿದೆ ಎಂದು ಶುಭಮಾನ್ ಕಳವಳ ವ್ಯಕ್ತಪಡಿಸಿದ್ದಾರೆ.

ಮುಂದಿನ ವರ್ಷದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆಡುವ ಕನಸಿನೊಂದಿಗೆ ತೂಕ ಇಳಿಸಿ, ಫಿಟ್ನೆಸ್‌ನತ್ತ ಹೆಚ್ಚು ಗಮನ ಹರಿಸಿದ ನಡುವೆಯೂ ಹರಿದಾಡುತ್ತಿರುವ ನಿವೃತ್ತಿಯ ವದಂತಿಗೆ ‘ಹಿಟ್‌ಮ್ಯಾನ್’ ರೋಹಿತ್ ಶರ್ಮ ನಿರ್ಣಾಯಕ ಪಂದ್ಯದ ಇನಿಂಗ್ಸ್‌ನಲ್ಲೇ ಬ್ಯಾಟ್‌ನಿಂದ ತಕ್ಕ ಉತ್ತರ ನೀಡಿದರು. ಈ ಮೂಲಕ ಅನುಭವದ ಬಲವನ್ನು ಪ್ರದರ್ಶಿಸಿ ವಿಶ್ವಕಪ್ ಆಡುವ ರೇಸ್‌ನಲ್ಲಿ ಉಳಿದುಕೊಂಡರು.
ಮಾಜಿ ನಾಯಕ ರೋಹಿತ್ ಶರ್ಮ (138 ರನ್, 110 ಎಸೆತ, 17 ಬೌಂಡರಿ, 5 ಸಿಕ್ಸರ್) ಅಮೋಘ ಶತಕದ ಜತೆಗೆ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (74 ರನ್, 60 ಎಸೆತ, 4 ಬೌಂಡರಿ, 3 ಸಿಕ್ಸರ್) ದಿಟ್ಟ ಬ್ಯಾಟಿಂಗ್ ಹೊರತಾಗಿಯೂ ಭಾರತ ತಂಡ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 27 ರನ್‌ಗಳ ಹೋರಾಟಯುತ ಸೋಲು ಕಂಡಿತು. ಇದರೊಂದಿಗೆ ಶುಭಮಾನ್ ಗಿಲ್ ಬಳಗ 1-2 ಸರಣಿ ಕೈಚೆಲ್ಲಿದ್ದು, ಆಂಗ್ಲರು 2018ರ ನಂತರ ಭಾರತ ಎದುರು ಏಕದಿನ ಸರಣಿ ಒಲಿಸಿಕೊಂಡಿತು.
39. ರೋಹಿತ್ ಶರ್ಮ (39 ವರ್ಷ, 80 ದಿನ) ಏಕದಿನ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತಿ ಹಿರಿಯ ಭಾರತೀಯ ಬ್ಯಾಟರ್. ಸಚಿನ್ ತೆಂಡುಲ್ಕರ್ (38 ವರ್ಷ, 327 ದಿನ) ಹಿಂದಿನ ಹಿರಿಯ. ಶ್ರೀಲಂಕಾದ ಸನತ್ ಜಯಸೂರ‌್ಯ (39 ವರ್ಷ, 212 ದಿನ) ಈ ಸಾಧನೆ ಮಾಡಿರುವ ಅತ್ಯಂತ ಹಿರಿಯ ಬ್ಯಾಟರ್.
1. ರೋಹಿತ್ ಶರ್ಮ ಲಾರ್ಡ್ಸ್ ಅಂಗಣದಲ್ಲಿ ಏಕದಿನ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಹಾಗೂ ಆರಂಭಿಕನಾಗಿ ಭಾರತ ಪರ 46ನೇ ಶತಕ ಸಿಡಿಸಿದ ಅವರು, ಸಚಿನ್ ತೆಂಡುಲ್ಕರ್ (45) ದಾಖಲೆ ಹಿಂದಿಕ್ಕಿದರು. ಡೇವಿಡ್ ವಾರ್ನರ್ (49) ಅಗ್ರಸ್ಥಾನದಲ್ಲಿದ್ದಾರೆ.
34. ರೋಹಿತ್ ಶರ್ಮ ಏಕದಿನ ಕ್ರಿಕೆಟ್‌ನಲ್ಲಿ ಸಿಡಿಸಿದ 34ನೇ ಶತಕ ಇದಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 51ನೇ ಸೆಂಚುರಿ ಆಗಿದೆ.
10. ರೋಹಿತ್ ಶರ್ಮ ಇಂಗ್ಲೆಂಡ್‌ನಲ್ಲಿ ಸಿಡಿಸಿದ 10ನೇ ಅಂತಾರಾಷ್ಟ್ರೀಯ ಶತಕ ಇದಾಗಿದ್ದು, 2ನೇ ಗರಿಷ್ಠ ಬಾರಿ ಈ ಸಾಧನೆ ಮಾಡಿದ ಪ್ರವಾಸಿ ಬ್ಯಾಟರ್ ಎನಿಸಿದರು. ಡಾನ್ ಬ್ರಾಡ್ಮನ್ (11) ಅಗ್ರಸ್ಥಾನದಲ್ಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net