ಕೆಕೆಆರ್ ಗೆ ಗಾಯದ ಮೇಲೆ ಬರೆ... ನಾಯಕ ರಹಾನೆಗೆ ದಂಡದ ಬಿಸಿ; ಕಾರಣವೇನು ಗೊತ್ತಾ...? Ajinkya Rahane

Ajinkya Rahane (ಚಿತ್ರ X)
Ajinkya Rahane (ಚಿತ್ರ X)
Published on
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ರ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಆಡಿದ ಮೊದಲ ಐದು ಪಂದ್ಯಗಳಲ್ಲಿ ಒಂದೂ ಜಯ ಸಾಧಿಸದ ಕೆಕೆಆರ್, ಐಪಿಎಲ್ ಇತಿಹಾಸದಲ್ಲೇ ಈ ಕಳಪೆ ಆರಂಭ ಪಡೆದಿದೆ. ಇದರ ಬೆನ್ನಲ್ಲೇ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ತಂಡದ ನಾಯಕ (Ajinkya Rahane) ಅಜಿಂಕ್ಯ ರಹಾನೆ ದಂಡ ವಿಧಿಸಿರುವುದು ಸಧ್ಯ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಘಟನೆ ಏನು?

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ ರಹಾನೆ ತಂಡ ನಿಗದಿತ ಸಮಯದಲ್ಲಿ ತನ್ನ ಪಾಲಿನ ಓವರ್​ಗಳನ್ನು ಪೂರ್ಣಗೊಳಿಸುವಲ್ಲಿ ವಿಫಲವಾಯಿತು. ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ, ಕನಿಷ್ಠ ಓವರ್ ದರದ ಅಪರಾಧಗಳಿಗೆ ಸಂಬಂಧಿಸಿದ ಕೆಕೆಆರ್‌ನ ಈ ಸೀಸನ್​ನ ಮೊದಲ ಅಪರಾಧ ಇದಾಗಿರುವುದರಿಂದ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಐಪಿಎಲ್ ನಿಯಮಗಳ ಪ್ರಕಾರ, ಒಂದು ಸೀಸನ್‌ನಲ್ಲಿ ತಂಡವೊಂದು ಮೂರು ಬಾರಿ ನಿಧಾನಗತಿಯ ಬೌಲಿಂಗ್ ಮಾಡಿದರೆ, ನಾಯಕನಿಗೆ ದಂಡದ ಜೊತೆಗೆ ಒಂದು ಪಂದ್ಯದ ನಿಷೇಧವನ್ನು ಹೇರಬಹುದು. ಒಂದು ವೇಳೆ ಹಾಗಾದಲ್ಲಿ ಪ್ರಸ್ತುತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕೆಕೆಆರ್ ತಂಡಕ್ಕೆ ರಹಾನೆ ಅಲಭ್ಯತೆ ದೊಡ್ಡ ಹೊಡೆತವಾಗಲಿದೆ. ಆದ್ದರಿಂದ ಮುಂದಿನ ಪಂದ್ಯಗಳಲ್ಲಿ ಸಮಯದ ಕುರಿತು ತಂಡವು ಹೆಚ್ಚಿನ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.

ಮೊದಲ ಗೆಲುವಿನ ಹುಡುಕಾಟದಲ್ಲಿ ಕೆಕೆಆರ್...

ಏತನ್ಮಧ್ಯೆ, ಮಂಗಳವಾರವೂ ಕೆಕೆಆರ್​ ತಂಡ ತನ್ನ ಮೊದಲ ಗೆಲುವಿನ ಹುಡುಕಾಟವನ್ನು ಮುಂದುವರೆಸಿದ್ದು, ಸಿಎಸ್​ಕೆ ವಿರುದ್ಧ 32 ರನ್​ಗಳಿಂದ ಸೋತಿತು. ಆದಾಗ್ಯೂ, ಐಪಿಎಲ್​ನ ಈ ಋತುವಿನಲ್ಲಿ 200 ರನ್‌ಗಳಿಗಿಂತ ಕಡಿಮೆ ಗುರಿಯನ್ನು ಬೆನ್ನಟ್ಟಲು ವಿಫಲವಾದ ಮೊದಲ ತಂಡ ಕೆಕೆಆರ್​.
ಪಂದ್ಯದ ವೇಳೆ ಆಟಗಾರರು ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೂಡ ಬ್ಯಾಟ್ಸ್​ಮನ್​​​ಗಳು ವಿಫಲರಾಗಿದ್ದು, ಅಗ್ರ ಕ್ರಮಾಂಕದ ಆರು ಆಟಗಾರರಲ್ಲಿ ಯಾವ ಒಬ್ಬರಿಂದಲೂ ದೊಡ್ಡ ಇನ್ನಿಂಗ್ಸ್ ಬರಲಿಲ್ಲ.
ಸುನಿಲ್ ನರೈನ್ , ರಹಾನೆ ಮತ್ತು ಅಂಗ್‌ಕ್ರಿಶ್ ರಘುವಂಶಿ ಅವರಂತಹ ಆಟಗಾರರು 20 ರನ್‌ಗಳ ಗಡಿ ದಾಟಿದರೂ ಕೂಡಾ ದೊಡ್ಡ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ. ಕೆಕೆಆರ್ ತಮ್ಮ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 160 ರನ್​ಗಳನ್ನು ಮಾತ್ರ ಗಳಿಸಿತು. ರಮಣದೀಪ್ ಸಿಂಗ್ ಮತ್ತು ರೋವ್‌ಮನ್ ಪೊವೆಲ್ ಕ್ರಮಾಂಕದಲ್ಲಿ ತೀವ್ರವಾಗಿ ಪ್ರಯತ್ನಿಸಿದರು ಆದರೆ ಅವರ ಅಗ್ರ ಕ್ರಮಾಂಕದಿಂದ ಹೆಚ್ಚಿನ ರನ್​ಗಳಿಸಲು ಸಾಧ್ಯವಾಗಲಿಲ್ಲ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net