ಕೋಲ್ಕತದಲ್ಲಿ ಹರಿಣಗಳಿಗೆ ಬುಮ್ರಾ ಕಡಿವಾಣ: ಸಾಧಾರಣ ಮೊತ್ತಕ್ಕೆ ಕುಸಿದ ಬವುಮಾ ಪಡೆ

ಕೋಲ್ಕತದಲ್ಲಿ ಹರಿಣಗಳಿಗೆ ಬುಮ್ರಾ ಕಡಿವಾಣ: ಸಾಧಾರಣ ಮೊತ್ತಕ್ಕೆ ಕುಸಿದ ಬವುಮಾ ಪಡೆ
ಕೋಲ್ಕತದಲ್ಲಿ ಹರಿಣಗಳಿಗೆ ಬುಮ್ರಾ ಕಡಿವಾಣ: ಸಾಧಾರಣ ಮೊತ್ತಕ್ಕೆ ಕುಸಿದ ಬವುಮಾ ಪಡೆ
Published on
ಕೋಲ್ಕತ: ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ (27ಕ್ಕೆ 5) ಐದು ವಿಕೆಟ್ ಸಾಧನೆ ನೆರವಿನಿಂದ ಆತಿಥೇಯ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ. ನಾಯಕ ಶುಭಮಾನ್ ಗಿಲ್ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದ ನಡುವೆಯೂ ಮಿಂಚಿದ ಬುಮ್ರಾ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ 4ನೇ ಆವೃತ್ತಿಯಲ್ಲಿ ಭಾರತದ ಮೂರನೇ ಸರಣಿಯ ಮೊದಲ ದಿನವೇ  ಸಂಪೂರ್ಣ ಮೇಲುಗೈ ಒದಗಿಸಿದರು.
ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ದ.ಆಫ್ರಿಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರ‌್ಯಾನ್ ರಿಕೆಲ್‌ಟನ್ (23) ಹಾಗೂ ಏಡೆನ್ ಮಾರ್ಕ್ರಮ್ (31) ಜೋಡಿ ಮೊದಲ 10 ಓವರ್‌ಗಳಲ್ಲಿ 57 ರನ್‌ಗಳಿಸಿ ಬಿರುಸಿನ ಆರಂಭ ಒದಗಿಸಿತು. ನಂತರ ರಿವರ್ಸ್ ಸ್ವಿಂಗ್‌ನ ಲಾಭ ಪಡೆದ ಜಸ್‌ಪ್ರೀತ್ ಸಹಿತ ಇತರ ಬೌಲರ್‌ಗಳ ಸಂಘಟಿತ ದಾಳಿಗೆ ದಿಢೀರ್ ಕುಸಿತ ಕಂಡ ಹರಿಣಗಳ ಪಡೆ ಚಹಾ ವಿರಾಮದ ಬಳಿಕ 55 ಓವರ್‌ಗಳಲ್ಲಿ 159 ರನ್‌ಗಳಿಗೆ ಮೊದಲ ಇನಿಂಗ್ಸ್‌ನಲ್ಲಿ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಆರಂಭಿಕ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (12) ವಿಕೆಟ್ ಬೇಗನೆ ಕಳೆದುಕೊಂಡಿರುವ ಭಾರತ ತಂಡ, ದಿನದಂತ್ಯಕ್ಕೆ 20 ಓವರ್‌ಗಳಲ್ಲಿ 1 ವಿಕೆಟ್‌ಗೆ 37 ರನ್ ಕಲೆಹಾಕಿದೆ. ಮಂದಬೆಳಕಿನ ಕಾರಣ ದಿನದ ಆಟವನ್ನು ಬೇಗನೆ ಮುಕ್ತಾಗೊಳಿಸಿದಾಗ ಕನ್ನಡಿಗ ಕೆಎಲ್ ರಾಹುಲ್ (13*) ಜತೆ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದಿರುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (6) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಿನದಂತ್ಯಕ್ಕೆ ಮತ್ತೆ ವಿಕೆಟ್ ಬೀಳದಂತೆ ಎಚ್ಚರಿಕೆ ವಹಿಸಿದ ರಾಹುಲ್-ವಾಷಿಂಗ್ಟನ್ ಜೋಡಿ 80 ಎಸೆತಗಳಲ್ಲಿ 19 ರನ್ ಮಾತ್ರ ಕಲೆಹಾಕಿತು. ಭಾರತ ಸದ್ಯ 122 ರನ್ ಹಿನ್ನಡೆಯಲ್ಲಿದೆ. 
16. ಜಸ್‌ಪ್ರೀತ್ ಬುಮ್ರಾ ತಾನಾಡಿದ 51ನೇ ಟೆಸ್ಟ್ ಪಂದ್ಯದಲ್ಲಿ 16ನೇ ಬಾರಿಗೆ ಐದು ವಿಕೆಟ್ ಗೊಂಚಲು ಪಡೆದರು. ಇದರೊಂದಿಗೆ ಬಿ.ಚಂದ್ರಶೇಖರ್ ಅವರ ದಾಖಲೆ ಸರಿಗಟ್ಟಿ, ಗರಿಷ್ಠ ಬಾರಿ ಈ ಸಾಧನೆ ಮಾಡಿದ 5ನೇ ಭಾರತೀಯ ಎನಿಸಿದರು. ಆರ್.ಅಶ್ವಿನ್ (37), ಅನಿಲ್ ಕುಂಬ್ಳೆ (35), ಹರ್ಭಜನ್ ಸಿಂಗ್ (25), ಕಪಿಲ್ ದೇವ್ (23) ಕ್ರಮವಾಗಿ ಮೊದಲ ನಾಲ್ಕು ಸ್ಥಾನದಲ್ಲಿದ್ದಾರೆ.  
2012ರ ಬಳಿಕ ನಾಲ್ವರು ಸ್ಪಿನ್ನರ್
ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಹಿಂದಿನ ಟೆಸ್ಟ್‌ನ ಆಡುವ ಹನ್ನೊಂದರ ಬಳಗದಲ್ಲಿ 2 ಬದಲಾವಣೆಯೊಂದಿಗೆ ಭಾರತ ಕೋಲ್ಕತದಲ್ಲಿ ಕಣಕ್ಕಿಳಿಯಿತು. ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ರಿಷಭ್ ಪಂತ್, ಅಕ್ಷರ್ ಪಟೇಲ್ ಪುನರಾಗಮನ ಕಂಡರು. ಇದರೊಂದಿಗೆ ಭಾರತ ತಂಡ 2012ರ ಬಳಿಕ ಮೊದಲ ಬಾರಿಗೆ 4 ಸ್ಪಿನ್ನರ್ ಮತ್ತು ಆರು ಎಡಗೈ ಬ್ಯಾಟರ್‌ಗಳೊಂದಿಗೆ ಆಡಿತು. ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಐವರು ಎಡಗೈ ಬ್ಯಾಟರ್ ಆಡಿದ್ದರು.
5. 2013ರ ನಂತರ ಈಡನ್ ಗಾರ್ಡನ್‌ನಲ್ಲಿ ನಡೆದ ಐದು ಟೆಸ್ಟ್ ಪಂದ್ಯಗಳಲ್ಲಿ ಭಾರತ ಐವರು ವೇಗಿಗಳು ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಅವರೆಂದರೆ ಮೊಹಮದ್ ಶಮಿ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ, ಉಮೇಶ್ ಯಾದವ್, ಜಸ್‌ಪ್ರೀತ್ ಬುಮ್ರಾ.  
1. ಜಸ್‌ಪ್ರೀತ್ ಬುಮ್ರಾ 2019ರ ಬಳಿಕ ಟೆಸ್ಟ್‌ನ ಮೊದಲ ದಿನ ಐದು ವಿಕೆಟ್ ಪಡೆದ ಮೊದಲ ವೇಗಿ. ಇಶಾಂತ್ ಶರ್ಮ ಬಾಂಗ್ಲಾ ವಿರುದ್ಧದ ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಕೊನೆಯದಾಗಿ ಈ ಸಾಧನೆ  ಮಾಡಿದ್ದರು. ರೆಡ್‌ಬಾಲ್‌ನಲ್ಲಿ ಡೇಲ್ ಸ್ಟೇನ್ 2008ರಲ್ಲಿ ಕೊನೇ ಸಾಧಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net