ಟೀಂ ಇಂಡಿಯಾಗೆ ಬಿಗ್ ಶಾಕ್: ಕಿವೀಸ್ ಟಿ20 ಸರಣಿಯಿಂದ ವಾಷಿಂಗ್ಟನ್ ಸುಂದರ್ ಔಟ್! | Team India

Team India
Team India
Published on
ಮುಂಬೈ: ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಗಾಯದ ಕಾರಣದಿಂದಾಗಿ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಇದು ಫೆಬ್ರವರಿಯಲ್ಲಿ ಆರಂಭವಾಗಲಿರುವ 2026ರ ಟಿ20 ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ದೊಡ್ಡ ಆಘಾತ ನೀಡಿದೆ.

ಗಾಯದ ಹಿನ್ನೆಲೆ

ವಡೋದರಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಸುಂದರ್ ಅವರ ಎಡ ಪಕ್ಕೆಲುಬಿನ ಭಾಗದಲ್ಲಿ (Side Strain) ತೀವ್ರ ನೋವು ಕಾಣಿಸಿಕೊಂಡಿತ್ತು. ಕೇವಲ 5 ಓವರ್ ಬೌಲಿಂಗ್ ಮಾಡಿದ ನಂತರ ಅವರು ಮೈದಾನದಿಂದ ಹೊರನಡೆದಿದ್ದರು. ಆದರೆ, ತಂಡದ ಹಿತದೃಷ್ಟಿಯಿಂದ ಗಾಯದ ನೋವಿನಲ್ಲೇ ಬ್ಯಾಟಿಂಗ್‌ಗೆ ಇಳಿದು ಅಜೇಯ 7 ರನ್ ಗಳಿಸಿ ಭಾರತದ ಗೆಲುವಿಗೆ ನೆರವಾಗಿದ್ದರು.

ವಿಶ್ವಕಪ್‌ಗೆ ಲಭ್ಯತೆ ಅನುಮಾನ

ಬಿಸಿಸಿಐ ಮೂಲಗಳ ಪ್ರಕಾರ, ಸುಂದರ್ ಅವರ ಗಾಯದ ಪ್ರಮಾಣ ಗಂಭೀರವಾಗಿದ್ದು, ಕನಿಷ್ಠ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಜನವರಿ 21 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯು ವಿಶ್ವಕಪ್‌ಗೆ ಮುನ್ನ ನಡೆಯುತ್ತಿರುವ ಕೊನೆಯ ದ್ವಿಪಕ್ಷೀಯ ಸರಣಿಯಾಗಿದೆ. ಇದೀಗ ಅವರು ಈ ಸರಣಿಯಿಂದ ಹೊರಬಿದ್ದಿರುವುದರಿಂದ, ಫೆಬ್ರವರಿ 7 ರಿಂದ ಆರಂಭವಾಗುವ ವಿಶ್ವಕಪ್ ವೇಳೆಗೆ ಸಂಪೂರ್ಣ ಫಿಟ್ ಆಗುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಪರ್ಯಾಯ ಆಟಗಾರರು

ಏಕದಿನ ಸರಣಿಯಲ್ಲಿ ಸುಂದರ್ ಅವರ ಬದಲಿಗೆ ಯುವ ಆಟಗಾರ ಆಯುಷ್ ಬದೋನಿ ಅವರಿಗೆ ಅವಕಾಶ ನೀಡಲಾಗಿದೆ. ಟಿ20 ಸರಣಿಗೆ ಇನ್ನು ಅಧಿಕೃತವಾಗಿ ಬದಲಿ ಆಟಗಾರನನ್ನು ಘೋಷಿಸದಿದ್ದರೂ, ಅಕ್ಷರ್ ಪಟೇಲ್ ಅವರಂತಹ ಅನುಭವಿಗಳ ಮೇಲೆ ತಂಡದ ಅವಲಂಬನೆ ಹೆಚ್ಚಾಗಲಿದೆ.
ಈಗಾಗಲೇ ತಿಲಕ್ ವರ್ಮಾ ಅವರ ಗಾಯದ ಸಮಸ್ಯೆಯಿಂದ ಕಂಗೆಟ್ಟಿರುವ ಭಾರತಕ್ಕೆ, ಸುಂದರ್ ಅನುಪಸ್ಥಿತಿ ವಿಶ್ವಕಪ್‌ನ ರಣತಂತ್ರ ರೂಪಿಸುವಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸುಂದರ್ ಶೀಘ್ರದಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಶಿಬಿರಕ್ಕೆ ಸೇರಲಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net