ಬೆಂಗಳೂರು: ಜೂನ್ 20ರಿಂದ ನಡೆಯಲಿರುವ ಐದನೇ ಆವೃತ್ತಿಯ ಮಹಾರಾಜ ಟ್ರೋಫಿ (maharaja trophy) ಕೆಎಸ್‌ಸಿಎ ಟಿ20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿ ಆಗಲಿವೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮಂಗಳವಾರ ವೇಳಾಪಟ್ಟಿ ಪ್ರಕಟಿಸಿದ್ದು, ಮೊದಲ ದಿನದ ಎರಡನೇ ಪಂದ್ಯದಲ್ಲಿ ಆತಿಥೇಯ ಮೈಸೂರು ವಾರಿಯರ್ಸ್ ಹಾಗೂ ಹೊಸ ಫ್ರಾಂಚೈಸಿ ಶಿವಮೊಗ್ಗ ಯೋಧಾಸ್ ತಂಡಗಳು ಎದುರಾಗಲಿವೆ. ಜೂನ್ 20ರಿಂದ 25ರವರೆಗೆ ಟೂರ್ನಿಯ ಮೊದಲ ಹಂತದ ಪಂದ್ಯಗಳು ಮೈಸೂರಿನಲ್ಲಿ ನಡೆದರೆ, ಎರಡನೇ ಹಂತಕ್ಕೆ ಹುಬ್ಬಳ್ಳಿ ಆತಿಥ್ಯ ವಹಿಸಲಿದೆ. ಜೂನ್ 27ರಿಂದ ಜುಲೈ 3ರವರೆಗೆ ಹುಬ್ಬಳ್ಳಿ ಚರಣದ ಪಂದ್ಯಗಳು ನಡೆಯಲಿವೆ. ಜುಲೈ 5ರಿಂದ ಮೂರನೇ ಹಾಗೂ ಅಂತಿಮ ಹಂತ ಸಹಿತ ಪ್ಲೇಆಫ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದು, ಜುಲೈ 12ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ.
ಈ ಬಾರಿ ಹೊಸ ಫ್ರಾಂಚೈಸಿಯಾಗಿರುವ ಕೋಸ್ಟಲ್ ಕಿಂಗ್ಸ್ ಮಂಗಳೂರು ಜೂನ್ 21ಕ್ಕೆ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಆರು ತಂಡಗಳು ಭಾಗವಹಿಸುವ ಟೂರ್ನಿಯಲ್ಲಿ ಮೈಸೂರು ಮತ್ತು ಹುಬ್ಬಳ್ಳಿ ನಗರಗಳು ತಲಾ 12 ಪಂದ್ಯಗಳಿಗೆ ಆತಿಥ್ಯವಹಿಸಲಿವೆ. ಬೆಂಗಳೂರಿನಲ್ಲಿ ಕ್ವಾಲಿಫೈಯರ್-1, ಎಲಿಮಿನೇಟರ್, ಕ್ವಾಲಿಫೈಯರ್-2 ಮತ್ತು ಫೈನಲ್ ಸೇರಿ 10 ಪಂದ್ಯ ನಿಗದಿಯಾಗಿವೆ. ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಗುಲ್ಬರ್ಗಾ ಮಿಸ್ಟಿಕ್ಸ್, ಶಿವಮೊಗ್ಗ ಯೋಧಾಸ್, ಕೋಸ್ಟಲ್ ಕಿಂಗ್ಸ್ ಮಂಗಳೂರು ಟೂರ್ನಿಯಲ್ಲಿ ಭಾಗವಹಿಸುವ ಆರು ತಂಡಗಳಾಗಿವೆ.
5ಕ್ಕೆ ಆಟಗಾರರ
ಹರಾಜು ಪ್ರಕ್ರಿಯೆ
ಐದನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ (ಜೂ.5) ಬೆಂಗಳೂರಿನಲ್ಲಿ ನಡೆಯಲಿದ್ದು, 150ಕ್ಕೂ ಹೆಚ್ಚು ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರಾಜು ಪ್ರಕ್ರಿಯೆ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ಸೋನಿ ಟೆನ್ 5 ಚಾನಲ್‌ನಲ್ಲಿ ನೇರಪ್ರಸಾರ ಕಾಣಲಿದೆ.