ಜಪಾನ್‌ನ ನಿಸ್ಶಿನ್ ನಗರದ ‘ಕೊರೊಗಿ ಸ್ಪೋರ್ಟ್ಸ್ ಪಾಕ್’ನಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದ ಪಂದ್ಯಗಳು ನಡೆಯಲಿವೆ. ಆದರೆ, ಇದುವರೆಗೆ ಪರೀಕ್ಷಿಸಲ್ಪಡದ ಹೈಬ್ರಿಡ್ ಪಿಚ್ (ಸಹಜ ಹುಲ್ಲು ಹಾಗೂ ಕೃತಕ ಫೈಬರ್ ಮಿಶ್ರಿತ) ಆಗಿದ್ದು, ಮೂಲತಃ ಬೇಸ್‌ಬಾಲ್ ಮೈದಾನವಾಗಿದೆ. ಕಳೆದ ಮಾರ್ಚ್‌ನಲ್ಲಿ ಇದನ್ನು ಕ್ರಿಕೆಟ್ ಮೈದಾನವಾಗಿ ನವೀಕರಿಸಲಾಗಿದ್ದು, ಹೈಬ್ರಿಡ್ ಪಿಚ್ ಆಗಿಯೂ ಪರಿವರ್ತಿಸಲಾಗಿದೆ. ಹಾಲಿ ವರ್ಷ ಮೇ ತಿಂಗಳಲ್ಲಿ ಒಂದೆರಡು ಪಂದ್ಯಗಳನ್ನು ಆಡಿಸಲಾಗಿತ್ತು. ಆದರೆ, ಅಂತಾರಾಷ್ಟ್ರೀಯ ಪಂದ್ಯಗಳಿಗೆ ಈ ಪಿಚ್ ಎಷ್ಟು ಸೂಕ್ತ ಎಂಬುದನ್ನು ಇದುವರೆಗೆ ಪರೀಕ್ಷಿಸಿಲ್ಲ. ಐಸಿಸಿ ಟೆಸ್ಟ್ ಮಾನ್ಯತೆ ಹೊಂದಿರುವ ಎಲ್ಲ ಕ್ರಿಕೆಟ್ ಮಂಡಳಿಗಳು, ಕೂಟಕ್ಕೆ ಪ್ರಮುಖ ಆಟಗಾರರನ್ನು ಒಳಗೊಂಡ ತಂಡಗಳನ್ನು ಆರಿಸಿವೆ. ಇದರಿಂದ ಆಟಗಾರರು ಗಾಯದ ಸಮಸ್ಯೆ ಎದುರಿಸುವ ಬಗ್ಗೆ ಆತಂಕ ವ್ಯಕ್ತವಾಗಿದೆ.