ಮೈದಾನದಲ್ಲೇ ತಳ್ಳಾಡಿದ ವೈಭವ್​ಗೆ ಶಿಕ್ಷೆ ಕೊಡಿ! ಹೆಗಲೇರಿದ ನೆಟ್ಟಿಗರಿಗೆ ಬಿಸಿಸಿಐ ಕೊಟ್ಟ ಖಡಕ್ ಉತ್ತರವಿದು

ಮೈದಾನದಲ್ಲಿ ಶ್ರೀಲಂಕನ್ ಆಟಗಾರನ ಜೊತೆ ವೈಭವ್ ಜಗಳ
ಮೈದಾನದಲ್ಲಿ ಶ್ರೀಲಂಕನ್ ಆಟಗಾರನ ಜೊತೆ ವೈಭವ್ ಜಗಳ
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾ ಆಟಗಾರನ ಜೊತೆ ವೈಭವ್​ ಮಾಡಿಕೊಂಡ ಜಗಳ ಸಾಕಷ್ಟು ಟೀಕೆಗೆ ಗುರಿ
  • ಹತ್ತಾರು ಪ್ರಶ್ನೆಗಳ ಚೆಂಡನ್ನು ಬಿಸಿಸಿಐ ಅಂಗಳಕ್ಕೆಸದ ನೆಟ್ಟಿಗರು
  • ಕಡೆಗೂ ವೈಭವ್​ಗೆ ಶಿಕ್ಷೆ ಕೊಡುವುದಿಲ್ಲವೇ ಎಂಬ ಪ್ರಶ್ನೆಗೆ ಬಿಸಿಸಿಐ ಉತ್ತರ
Vaibhav Sooryavanshi: ಕೇವಲ 15 ವರ್ಷ ವಯಸ್ಸಿಗೆ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​, ವಂಡರ್​ ಕಿಡ್ ಆಗಿ ಕ್ರಿಕೆಟ್​ ಲೋಕವನ್ನು ಮಾತ್ರವಲ್ಲದೇ, ಇಡೀ ಜಗತ್ತನೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ವೈಭವ್ ಸೂರ್ಯವಂಶಿ, ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ ನಂತರ ಭಾರತ-ಎ ಪುರುಷರ ಸೀನಿಯರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಮತ್ತೊಂದು ದಾಖಲೆ ಬರೆದರು. ಆದರೆ, ತ್ರಿಕೋನ ಸರಣಿಯಲ್ಲಿ ಫ್ಲಾಪ್​ ಪ್ರದರ್ಶನ ನೀಡುತ್ತಿರುವ ವೈಭವ್​, ಶ್ರೀಲಂಕಾ ಆಟಗಾರನ ಜೊತೆ ಮಾಡಿಕೊಂಡ ಜಗಳ ಸದ್ಯ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ​ ​
'ಬೇಬಿ ಬಾಸ್'​ ಕಂಡರೆ ಅದೇನೋ ಕ್ರಿಕೆಟ್​ ಪ್ರೇಮಿಗಳಿಗೆ ವಿಶೇಷ ಅಭಿಮಾನ, ಪ್ರೀತಿ. ಹೀಗಿರುವಾಗಲೇ, ತ್ರಿಕೋನ ಸರಣಿಯ ಭಾಗವಾಗಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇತ್ತೀಚೆಗಷ್ಟೇ ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಆಟಗಾರ ಮತ್ತು ವೈಭವ್ ಮಧ್ಯೆ ಮಾತಿಗೆ ಮಾತು ಬೆಳೆದು, ಪರಸ್ಪರ ತಳ್ಳಾಟ ನಡೆಯಿತು. ಇದು ದೊಡ್ಡ ವಿವಾದಕ್ಕೂ ಕಾರಣವಾಯಿತು. ಹಿರಿಯರ ಜೊತೆ ಜಗಳ ಮಾಡಿಕೊಂಡ ವೈಭವ್​ಗೆ ಬಿಸಿಸಿಐನಿಂದ ಶಿಕ್ಷೆ ಇಲ್ವಾ? ಇದು ನಿಯಮ ಉಲ್ಲಂಘನೆ ಅಲ್ಲವೇ? ಎಂಬ ಹತ್ತಾರು ಪ್ರಶ್ನೆಗಳ ಚೆಂಡನ್ನು ನೆಟ್ಟಿಗರು ನೇರವಾಗಿ ಬಿಸಿಸಿಐ ಅಂಗಳಕ್ಕೆ ಎಸೆದಿದ್ದಾರೆ.
'ವಂಡರ್​ ಕಿಡ್​' ವೈಭವ್​ರದ್ದೇ ಇಲ್ಲಿ ತಪ್ಪು ಎಂದಿರುವ ಅನೇಕರು, ಮೈದಾನದಲ್ಲಿ ಎದುರಾಳಿ ತಂಡದ ಆಟಗಾರನನ್ನು ನೂಕಿದ್ದು ಸರಿಯಲ್ಲ. ಕ್ರಿಕೆಟ್​ನಲ್ಲಿ ಇಂತಹ ವರ್ತನೆಗಳು ಮೂಲ ನಿಯಮವನ್ನು ಉಲ್ಲಂಘಿಸಿದಂತೆ. ಹೀಗಾಗಿ, ವೈಭವ್ ವಿರುದ್ಧ ಏನು ಕ್ರಮ ಜರುಗಿಸಲಿದೆ? ಆತನನ್ನು ಮುಂದಿನ ಒಂದು ಮ್ಯಾಚ್​ನಿಂದ ಬ್ಯಾನ್​ ಮಾಡಲಿದ್ಯಾ ಅಥವಾ ಡಿಮೆರಿಟ್​ ಪಾಯಿಂಟ್​, ದಂಡ ವಿಧಿಸಲಿದೆಯೇ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಕಡೆಗೂ ಇದಕ್ಕೆ ಬಿಸಿಸಿಐ ಪ್ರತಿಕ್ರಿಯಿಸಿದ್ದು, ಮುಖಕ್ಕೆ ಹೊಡೆದಂತೆ ಉತ್ತರವನ್ನು ನೀಡಿದೆ.
"ಒಂದು ಕಾಲದಲ್ಲಿ, ಸಚಿನ್ ತೆಂಡೂಲ್ಕರ್ ಅವರು ಟೆಸ್ಟ್‌ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದಾಗ ಅವರಿಗೆ 16.5 ವರ್ಷ ವಯಸ್ಸು. ಅಷ್ಟು ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದು ಅವರು ಮಾತ್ರ. ಅವರನ್ನು ಬಿಟ್ಟರೆ, ಹಿರಿಯ ತಂಡಕ್ಕೆ ಸೇರಿದ ಮತ್ತೊಬ್ಬ ಎಂದರೆ ಅದು ವೈಭವ್ ಸೂರ್ಯವಂಶಿ. ಇದು ನಿಜಕ್ಕೂ ಹೆಮ್ಮೆಯ ವಿಷಯ. ಹಿರಿಯರೇ ತುಂಬಿರುವ ತಂಡದಲ್ಲಿ ಕಿರಿಯನೊಬ್ಬ ಇದ್ದರೆ, ಅಲ್ಲಿ ಯಾವುದಾದರೂ ಒಂದು ಸಮಸ್ಯೆ ಖಂಡಿತ. ಹೀಗಾಗಿಯೇ, ನಾವೊಂದು ನಿರ್ಧಾರಕ್ಕೆ ಬಂದಿದ್ದೀವಿ ಎಂದರು.
ಈ ತಿಂಗಳ ಕೊನೆಯಲ್ಲಿ ಐರ್ಲೆಂಡ್ ಮತ್ತು ಇಂಗ್ಲೆಂಡ್‌ನ ಟಿ20 ಸರಣಿಯ ಪ್ರವಾಸದಲ್ಲಿ ವೈಭವ್ ಸೂರ್ಯವಂಶಿ ಜೊತೆಗೆ ಅವರ ಪೋಷಕರಿಗೆ ಪ್ರಯಾಣಿಸಲು ಅವಕಾಶ ಮಾಡಿ ಕೊಡಲಾಗಿದೆ. ಇದೇ ಜೂನ್ 26ರಂದು ಬೆಲ್‌ಫಾಸ್ಟ್‌ನಲ್ಲಿ ಆರಂಭವಾಗುವ ಪ್ರವಾಸದಲ್ಲಿ ಏಳು ಪಂದ್ಯಗಳನ್ನು​ ಆಡಲು ವೈಭವ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನೀವೇ ಗಮನಿಸಿ, ಬಹುತೇಕ ರಾಷ್ಟ್ರೀಯ ತಂಡಗಳು ತಮ್ಮ ತಂಡದಲ್ಲಿ 14 ಅಥವಾ 15 ವರ್ಷದ ಆಟಗಾರರನ್ನು ಸೇರಿಸಿಕೊಂಡಿಲ್ಲ. ಆದರೆ, ಹಲವು ದಶಕಗಳ ಬಳಿಕ, ವೈಭವ್ ಸೂರ್ಯವಂಶಿಯಂತಹ ಪ್ರತಿಭಾವಂತ ವ್ಯಕ್ತಿ ನಮ್ಮಲ್ಲಿದ್ದಾರೆ" ಎಂದು ಹೇಳಿದರು.
ವೈಭವ್ ಈಗ ತಾನೇ ಶಾಲೆ ಮುಗಿಸಿ ಬಂದಿದ್ದಾನೆ. ಆತ ಇನ್ನೂ ಚಿಕ್ಕ ಹುಡುಗ. ಇದೇ ಕಾರಣಕ್ಕೆ, ನಾವು ಚರ್ಚಿಸಿ ವೈಭವ್​ ಜೊತೆಗೆ ಅವರ ತಂದೆ-ತಾಯಿಯನ್ನು ಐರ್ಲೆಂಡ್​-ಇಂಗ್ಲೆಂಡ್​ ಟಿ20 ಪ್ರವಾಸಕ್ಕೆ ಕಳುಹಿಸಲು ಅನುಮತಿ ನೀಡಿದ್ದೇವೆ. ಅವರ ಹೆತ್ತವರು ಸಹ ಸೂರ್ಯವಂಶಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆತ ಮುಂದಿನ ಎರಡ್ಮೂರು ದಶಕಗಳವರೆಗೆ ಭಾರತೀಯ ಕ್ರಿಕೆಟ್‌ ಆಸ್ತಿ ಎಂದಿದ್ದಾರೆ.
ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ಪಂದ್ಯದಲ್ಲಿ ಎದುರಾಳಿ ಆಟಗಾರ ವಿಶೆನ್ ಹಲಂಬಗೆ ಜೊತೆಗೆ ವೈಭವ್​ ಮೈದಾನದಲ್ಲಿ ಮಾಡಿಕೊಂಡ ಜಗಳಕ್ಕೆ ಬಿಸಿಸಿಐ ಏನು ಶಿಕ್ಷ ನೀಡಲಿದೆ ಎಂಬ ಸೋಷಿಯಲ್ ಮೀಡಿಯಾ ಪ್ರಶ್ನೆ ನೋಡಿ ನನಗೆ ಒಂದು ನಿಮಿಷ ಆಶ್ಚರ್ಯವಾಯಿತು. ಇಲ್ಲಿ ಬಿಸಿಸಿಐ ಹೇಗೆ ಮಧ್ಯಪ್ರವೇಶಿಸಲು ಸಾಧ್ಯ? ಮ್ಯಾಚ್​ ಅಂಪೈರ್​ಗಳು ಇರುವಾಗ, ಮಂಡಳಿ ಮೂಗು ತೂರಿಸುವುದಿಲ್ಲ. ಬಿಸಿಸಿಐ ಎಂದಿಗೂ ಫೀಲ್ಡ್​ ಅಂಪೈರ್​ ಆಗೋದಿಲ್ಲ ಎಂದು ಹೇಳಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net