2017ರಲ್ಲಿ ಧೋನಿಗೆ ನಾಯಕತ್ವ ತ್ಯಜಿಸಲು ಸೂಚಿಸಿದ್ದ ಬಿಸಿಸಿಐ! ಆಗಿನ ಆಯ್ಕೆಗಾರನಿಂದ ಬಹಿರಂಗ

2017ರಲ್ಲಿ ಧೋನಿಗೆ ನಾಯಕತ್ವ ತ್ಯಜಿಸಲು ಸೂಚಿಸಿದ್ದ ಬಿಸಿಸಿಐ! ಆಗಿನ ಆಯ್ಕೆಗಾರನಿಂದ ಬಹಿರಂಗ
2017ರಲ್ಲಿ ಧೋನಿಗೆ ನಾಯಕತ್ವ ತ್ಯಜಿಸಲು ಸೂಚಿಸಿದ್ದ ಬಿಸಿಸಿಐ! ಆಗಿನ ಆಯ್ಕೆಗಾರನಿಂದ ಬಹಿರಂಗ
Published on
ನವದೆಹಲಿ: ಭಾರತಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ನಾಯಕ ಎಂಎಸ್​ ಧೋನಿ (MS Dhoni) 2017ರಲ್ಲಿ ಪದತ್ಯಾಗ ಮಾಡಿದಾಗ ಅದು ಅವರ ಸ್ವಂತ ನಿರ್ಧಾರ ಎಂದೇ ಭಾವಿಸಲಾಗಿತ್ತು. ಆಗಿನ ಉಪನಾಯಕ ವಿರಾಟ್​ ಕೊಹ್ಲಿ ನಾಯಕನ ಪಟ್ಟಕ್ಕೇರಲು ಸರಿಯಾದ ಸಮಯ ಬಂದಿದೆ ಎಂಬ ನಿಲುವಿನೊಂದಿಗೆ ಧೋನಿ ಆ ನಿರ್ಧಾರ ತೆಗೆದುಕೊಂಡಿದ್ದರು ಎಂದೇ ಹೇಳಲಾಗಿತ್ತು. ಆದರೆ ಅದು ಧೋನಿಯ ಸ್ವಯಂ ನಿರ್ಧಾರ ಆಗಿರಲಿಲ್ಲ. ಆಗ ಬಿಸಿಸಿಐ (BCCI) ಸೂಚನೆಯ ಮೇರೆಗೆ ನಾಯಕತ್ವ ತೊರೆದಿದ್ದರು ಎಂಬ ಅಚ್ಚರಿಯ ವಿಷಯ ಇದೀಗ ಬೆಳಕಿಗೆ ಬಂದಿದೆ. ಆಗ ಆಯ್ಕೆ ಸಮಿತಿಯ ಸದಸ್ಯರಾಗಿದ್ದ ಜತಿನ್​ ಪರಾಂಜಪೆ ಟಿವಿ ಶೋ ಒಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ನಾಯಕತ್ವವನ್ನು ತ್ಯಜಿಸಬೇಕೆಂಬ ಬಿಸಿಸಿಐ ಸೂಚನೆಯನ್ನು ಆಗಿನ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​, ಧೋನಿಗೆ ತಲುಪಿಸಿದ್ದರು. ಅಲ್ಲದೆ, ನಾಯಕತ್ವ ತ್ಯಜಿಸಲು ಸಿದ್ಧ ಎಂಬ ನಿರ್ಧಾರವನ್ನು ಧೋನಿಯಿಂದ ಲಿಖಿತ ರೂಪದಲ್ಲೂ ಪಡೆದುಕೊಂಡಿದ್ದರು ಎಂದು ಪರಾಂಜಪೆ ತಿಳಿಸಿದ್ದಾರೆ.


2017ರ ಜನವರಿಯಲ್ಲಿ ಧೋನಿ ನೆಟ್ಸ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ಮಾಡುತ್ತಿದ್ದಾಗ ನಾನು ಮತ್ತು ಅಲ್ಲಿಗೆ ಹೋದೆವು. ಇದು ನಾಯಕತ್ವ ತ್ಯಜಿಸಿ ಮುಂದಿನ ಹೆಜ್ಜೆ ಇಡಲು ಸರಿಯಾದ ಸಮಯ ಎಂದು ಎಂಎಸ್​ಕೆ ಅತ್ಯಂತ ಗೌರವಯುತವಾಗಿ ಧೋನಿಗೆ ತಿಳಿಸಿದರು. ಧೋನಿ ಕೂಡಲೆ ಅದಕ್ಕೆ ಒಪ್ಪಿಕೊಂಡರು. ಆಗ ಎಂಎಸ್​ಕೆ, ನಾಯಕತ್ವ ಬಿಡಲು ಸಿದ್ಧ ಎಂದು ಲಿಖಿತ ರೂಪದಲ್ಲಿ ಕೊಡಬೇಕು ಎಂದರು. ಅದಕ್ಕೆ ಧೋನಿ ಓಕೆ ಎಂದರು. ನಂತರ ರಾತ್ರಿ ಇ-ಮೇಲ್​ ಮೂಲಕ ಧೋನಿ, "ನಾನು ಪದತ್ಯಾಗ ಮಾಡುವೆ' ಎಂದು ಬರೆದು ಕಳುಹಿಸಿದರು. ಅದು ನಾವು ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರವಾಗಿತ್ತು ಎಂದು ಪರಾಂಜಪೆ, "ದಿ ಗ್ರೇಟ್​ ಇಂಡಿಯನ್​ ಕ್ರಿಕೆಟ್​ ಶೋ'ನಲ್ಲಿ ವಿವರಿಸಿದ್ದಾರೆ.

"ಚಿಂತಿಸಬೇಡಿ. ನಾನು ಸಂಪೂರ್ಣವಾಗಿ ವಿರಾಟ್​ ಜತೆ ನಿಲ್ಲುವೆ. ಅವರು ನನಗೆ ಸಹೋದರನಿದ್ದಂತೆ. ಅವರಿಗೆ ಅಗತ್ಯವಿರುವ ಎಲ್ಲ ಬೆಂಬಲ ಒದಗಿಸುವೆ. ನನ್ನ ಅನುಭವದ ಪ್ರಕಾರ ಅವರಿಗೆ ನೆರವಾಗುವೆ ಮತ್ತು ತಂಡವನ್ನು ಬಲಿಷ್ಠಗೊಳಿಸುವೆ ಎಂದು ಧೋನಿ ಆಗ ತಿಳಿಸಿದ್ದರು' ಎಂದೂ ಪರಾಂಜಪೆ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net