ಶ್ರೇಯಸ್​ ಅಯ್ಯರ್​ ನಾಯಕತ್ವದಲ್ಲಿ ಬೇಬಿ ಬಾಸ್ ಕಣಕ್ಕೆ​? ಟೀಮ್​ ಇಂಡಿಯಾಗೆ ವೈಭವ್​ ಸೂರ್ಯವಂಶಿ ಎಂಟ್ರಿ ಸನ್ನಿಹಿತ

ಶ್ರೇಯಸ್​ ಅಯ್ಯರ್​, ವೈಭವ್ ಸೂರ್ಯವಂಶಿ
ಶ್ರೇಯಸ್​ ಅಯ್ಯರ್​, ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • 30ರಿಂದ 35 ಆಟಗಾರರ ಎರಡು ತಂಡಗಳನ್ನು ರಚಿಸಲು ಬಿಸಿಸಿಐ ಪ್ಲ್ಯಾನ್​
  • ಹಲವು ಟಿ20 ಸರಣಿಗಳ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲು ಚಿಂತನೆ
  • ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ವೈಭವ್​ಗೆ ಸ್ಥಾನ ಬಹುತೇಕ ಖಚಿತ
Vaibhav Sooryavanshi: ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ತಮ್ಮ ಬಿರುಗಾಳಿ ಬ್ಯಾಟಿಂಗ್​ ಮೂಲಕವೇ ಸಖತ್​ ಸದ್ದು ಮಾಡುತ್ತಿರುವ ರಾಜಸ್ಥಾನ ರಾಯಲ್ಸ್‌ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಶೀಘ್ರದಲ್ಲೇ ಟೀಮ್​ ಇಂಡಿಯಾಗೆ ಪಾದರ್ಪಣೆ ಮಾಡುವುದು ಖಚಿತ ಎನ್ನಲಾಗಿದೆ. ಅದಕ್ಕೆ ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರವೇ ಜ್ವಲಂತ ಸಾಕ್ಷಿ ಎನ್ನಬಹುದು. 
ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಭಾರತೀಯ ಆಟಗಾರರನ್ನು ಬಹಳ ಸೂಕ್ಷ್ಮವಾಗಿ ಗಮನಿಸುವ ಬಿಸಿಸಿಐ, ಟಾಪ್​ ಆರ್ಡರ್​, ಮಧ್ಯಮ ಕ್ರಮಾಂಕ, ಆಲ್​ರೌಂಡರ್​ ಆಟಗಾರರು ಮತ್ತು ಬೌಲರ್​ಗಳನ್ನು ಆಯ್ಕೆ ಮಾಡಿಕೊಳ್ಳಲು 360 ಡಿಗ್ರಿಯಲ್ಲಿ ಸ್ಕ್ಯಾನ್​ ಮಾಡುವುದು ವಿಶೇಷ. ಅದರಲ್ಲೂ, 15 ವರ್ಷದ ವೈಭವ್ ಸೂರ್ಯವಂಶಿಯಿಂದ ಹಿಡಿದು ಅನೇಕರು ಈ ಬಾರಿಯ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವುದು ಗಮನಾರ್ಹ. ಇವರೆಲ್ಲ ಕ್ರಿಕೆಟ್​ ಮಂಡಳಿಯ ಪಟ್ಟಿಯಲ್ಲಿ ಅದಾಗಲೇ ತಮ್ಮ ಸ್ಥಾನ ಗಳಿಸಿದ್ದು, ಆಯ್ಕೆಗಾರರಿಗೆ ದೊಡ್ಡ ಸವಾಲನ್ನೇ ತಂದಿಟ್ಟಿದ್ದಾರೆ.
ಈ ಹಿನ್ನೆಲೆ, ಬಿಸಿಸಿಐ ಹೊಸ ಸೂತ್ರವನ್ನು ಜಾರಿಗೊಳಿಸಲು ಮುಂದಾಗಿದೆ. ವರದಿಗಳ ಪ್ರಕಾರ, ಟಿ20 ಕ್ರಿಕೆಟ್‌ಗಾಗಿ ಬಿಸಿಸಿಐ 30ರಿಂದ 35 ಆಟಗಾರರ ತಂಡವನ್ನು ಆಯ್ಕೆ ಮಾಡಲು ಚಿಂತಿಸಿದೆ. ಆಟಗಾರರನ್ನು ಎರಡು ತಂಡಗಳಾಗಿ ವಿಂಗಡಿಸುವುದು ಮಂಡಳಿಯ ಕ್ರಮವಾಗಿದೆ. ಒಂದೇ ಸಮಯದಲ್ಲಿ ಹಲವು ಸರಣಿ ಬರಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ವರ್ಷ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್ ಮತ್ತು ಟಿ20 ಸರಣಿ ಸೇರಿ ಹಲವು ಟಿ20 ಕ್ರಿಕೆಟ್ ಪಂದ್ಯಗಳನ್ನು ಆಡಲಿದೆ. ವಿಶೇಷ ಎಂದರೆ, ಈ ಬಾರಿ ಹೊಸ ಆಟಗಾರರಿಗೆ ಅವಕಾಶ ಸಿಗಲಿದೆ. ಏಷ್ಯನ್ ಗೇಮ್ಸ್ ಮತ್ತು ಭಾರತ-ವೆಸ್ಟ್ ಇಂಡೀಸ್ ಟಿ20 ಸರಣಿಗಳು ಏಕಕಾಲದಲ್ಲಿ ನಡೆಯವ ಕಾರಣ, ಎರಡು ಟಿ20 ತಂಡಗಳನ್ನು ಕಣಕ್ಕಿಳಿಸುವ ಬಗ್ಗೆ ಬಿಸಿಸಿಐ ಪರಿಗಣಿಸುತ್ತಿದೆ. ಇದರೊಟ್ಟಿಗೆ ಐರ್ಲೆಂಡ್ ಪ್ರವಾಸ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ತಂಡದಲ್ಲಿ ಹೆಚ್ಚಿನ ಆಟಗಾರರನ್ನು ಸೇರಿಸುವುದು ಅವಶ್ಯಕತೆಯಿದೆ. ಇದು ಏಷ್ಯನ್ ಗೇಮ್ಸ್‌ಗೂ ಅನ್ವಯಿಸಲಿದೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ತಂಡದಲ್ಲಿ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿರುವುದು ಸ್ಪಷ್ಟ. ಐಪಿಎಲ್​ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರುವ ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಪ್ರಿಯಾಂಶ್ ಆರ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇವರೊಟ್ಟಿಗೆ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಮತ್ತು ಆಯುಷ್ ಬಡೋನಿ ಕೂಡ ಆಯ್ಕೆಗಾರರ ಗಮನದಲ್ಲಿದ್ದಾರೆ. ಶಶಾಂಕ್ ಸಿಂಗ್ ಮತ್ತು ಅನುಕುಲ್ ರಾಯ್ ಅವರಂತಹ ಆಟಗಾರರಿಗೆ ಆಲ್‌ರೌಂಡರ್ ಸ್ಥಾನ ಸಿಗುವ ಸಾಧ್ಯತೆಗಳಿವೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಯುವ ಮತ್ತು ಅನುಭವಿಗಳು ಸಮಾಗಮ ಇರಲಿದೆ. ಅತಿ ಹೆಚ್ಚು ವಿಕೆಟ್​ ಪಡೆಯುತ್ತಿರುವ ರವಿ ಬಿಷ್ಣೋಯಿ, ಖಲೀಲ್ ಅಹ್ಮದ್, ಪ್ರಸಿದ್ಧ್ ಕೃಷ್ಣ, ಅಶೋಕ್ ಶರ್ಮಾ ಮತ್ತು ಕಾರ್ತಿಕ್ ತ್ಯಾಗಿ ಅವರನ್ನು ಟಿ20 ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಕೀಪರ್ ಆಗಿ ಧ್ರುವ್ ಜುರೆಲ್ ಉತ್ತಮವಾಗಿ ಕಾಣುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಈ ತಂಡದ ಕ್ಯಾಪ್ಟನ್​ ಆಗುವ ಮುನ್ಸೂಚನೆಗಳಿವೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net