ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಮತ್ತು ಭಾರತದ ಸಿರಿವಂತ ಕ್ರೀಡಾ ಸಂಸ್ಥೆ ಎನಿಸಿದ್ದರೂ, ತೆರಿಗೆ ವಿನಾಯಿತಿಯ ಲಾಭ ಪಡೆಯುತ್ತಿದೆ ಎಂಬ ಜನಸಾಮಾನ್ಯರ ತಪು$್ಪಗ್ರಹಿಕೆಯನ್ನು ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ನಿವಾರಿಸಿದ್ದಾರೆ. ಬಿಸಿಸಿಐ ಪ್ರತಿ ವರ್ಷ ಸರ್ಕಾರಕ್ಕೆ ಸುಮಾರು 3 ಸಾವಿರ ಕೋಟಿ ರೂ. ತೆರಿಗೆ ಪಾವತಿಸುತ್ತದೆ ಎಂದು ಸೈಕಿಯಾ ಬಹಿರಂಗಪಡಿಸಿದ್ದಾರೆ.
ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಕೂಡ ಬಿಸಿಸಿಐ ಪ್ರಯತ್ನಿಸುತ್ತಿಲ್ಲ ಎಂದು ಅವರು ಸ್ಪಷ್ಪಪಡಿಸಿದ್ದಾರೆ. ಆದರೆ ಈ ಕಾಯ್ದೆಯಡಿಯಲ್ಲಿ ಬಿಸಿಸಿಐ ಬರಬೇಕಾದರೆ ಇನ್ನೂ ಹಲವಾರು ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಾಗಿದೆ. ಬಿಸಿಸಿಐ ಕ್ರೀಡಾ ಕಾಯ್ದೆಯ ವ್ಯಾಪ್ತಿಗೆ ಬಂದ ನಂತರ "ಕ್ರಿಕೆಟ್'ಅನ್ನು "ಅಧಿಕೃತ ಕ್ರೀಡೆ'ಯಾಗಿ ಘೋಷಿಸುವ ರ್ನಿದಿಷ್ಟ ಅಧಿಸೂಚನೆಯನ್ನೂ ಹೊರಡಿಸಬೇಕಾಗುತ್ತದೆ. ಅಲ್ಲಿಯವರೆಗೆ ಬಿಸಿಸಿಐ ಕ್ರೀಡಾ ಕಾಯ್ದೆಯ ನಿಯಮಗಳಿಗೆ ಅನ್ವಯವೇ ಕಾರ್ಯನಿರ್ವಹಿಸಲಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿರುವ ಪ್ರಕರಣಕ್ಕೆ ಅ.27ರಂದು ಸ್ಪಷ್ಟ ವಿವರಣೆಯನ್ನು ಸಲ್ಲಿಸಲಿದ್ದೇವೆ ಎಂದು ಸೈಕಿಯಾ ತಿಳಿಸಿದ್ದಾರೆ.