ಬಿಸಿಸಿಐ ಇನ್ನೂ ಎನ್​ಎಸ್​ಎಫ್​​ ಮಾನ್ಯತೆ ಪಡೆದಿಲ್ಲ: ಲೋಕಸಭೆಯಲ್ಲಿ ಕ್ರೀಡಾ ಸಚಿವರ ಸ್ಪಷ್ಟನೆ

ಬಿಸಿಸಿಐ ಇನ್ನೂ ಎನ್​ಎಸ್​ಎಫ್​​ ಮಾನ್ಯತೆ ಪಡೆದಿಲ್ಲ
ಬಿಸಿಸಿಐ ಇನ್ನೂ ಎನ್​ಎಸ್​ಎಫ್​​ ಮಾನ್ಯತೆ ಪಡೆದಿಲ್ಲ
Published on
ನವದೆಹಲಿ: ಬಿಸಿಸಿಐ (BCCI) ಇನ್ನೂ ರಾಷ್ಟ್ರೀಯ ಕ್ರೀಡಾ ಒಕ್ಕೂಟದ (NSF​​) ಮಾನ್ಯತೆ ಪಡೆದುಕೊಂಡಿಲ್ಲ ಎಂದು ಕ್ರೀಡಾ ಸಚಿವ (Sports Minister) ಮನ್ಸುಖ್​ ಮಾಂಡವೀಯ (Mansukh Mandaviya ) ಸೋಮವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದರು. ಆದರೆ ನೂತನ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಮುಂದಿನ ವರ್ಷ ಜಾರಿಗೆ ಬಂದ ನಂತರ ಬಿಸಿಸಿಐ ಎನ್​ಎಸ್​ಎಫ್​​ ಮಾನ್ಯತೆ ಪಡೆದುಕೊಳ್ಳುವ ನಿರೀಕ್ಷೆ ಇದೆ ಎಂದೂ ಅವರು ತಿಳಿಸಿದರು.

ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಅಖಿಲ ಭಾರತ ಫುಟ್​ಬಾಲ್​ ಒಕ್ಕೂಟದ (ಎಐಎ್​ಎಫ್​) ಸಮರ್ಥ ಕಾರ್ಯನಿರ್ವಹಣೆಗಾಗಿ ಸರ್ಕಾರ ಅದರ ನಿಯಂತ್ರಣ ತೆಗೆದುಕೊಳ್ಳಬಹುದೇ ಎಂದು ತೃಣಮೂಲ ಕಾಂಗ್ರೆಸ್​ ಸಂಸದ ಮಾಲಾ ರಾಯ್​ ಕೇಳಿದ ಪ್ರಶ್ನೆಗೆ ಮಾಂಡವೀಯ ಈ ರೀತಿ ಪ್ರತಿಕ್ರಿಯಿಸಿದರು. ಎನ್​ಎಸ್​ಎಫ್​ಗಳೂ ಸ್ವಾಯತ್ತ ಸಂಸ್ಥೆಗಳಾಗಿರುತ್ತವೆ ಮತ್ತು ಆರೋಗ್ಯಕರ ಕಾರ್ಯನಿರ್ವಹಣೆ ಹೊಂದಿರಬೇಕು. ಬಿಸಿಸಿಐ ಎನ್​ಎಸ್​ಎಫ್​​ ಮಾನ್ಯತೆ ಪಡೆದಿಲ್ಲ ಮತ್ತು ಸರ್ಕಾರದ ಅನುದಾನವನ್ನೂ ಅವಲಂಬಿಸಿಲ್ಲ. ಆದರೆ ಹೊಸ ಕಾಯ್ದೆ ಜಾರಿಗೆ ಬಂದ ನಂತರ ಬಿಸಿಸಿಐ ಎನ್​ಎಸ್​ಎ್​ ಮಾನ್ಯತೆ ಪಡೆಯಲೇಬೇಕಾಗುತ್ತದೆ. ಯಾಕೆಂದರೆ ಈಗ ಕ್ರಿಕೆಟ್​ ಕೂಡ ಒಲಿಂಪಿಕ್ಸ್​ ಕ್ರೀಡೆಯಾಗಿದೆ. ಆದರೆ ಸರ್ಕಾರದ ಅನುದಾನವನ್ನು ಪಡೆಯದ ಕಾರಣ ಬಿಸಿಸಿಐ, ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ ಎಂದು ಮಾಂಡವೀಯ ತಿಳಿಸಿದರು.

ಒಂದು ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ಪಡೆಯುವ ಎಲ್ಲ ಎನ್​ಎಸ್​ಎಫ್​​ಗಳು ಭಾರತೀಯ ಲೆಕ್ಕ ಪರಿಶೋಧಕರಿಂದ (ಸಿಎಜಿ) ಲೆಕ್ಕ ಪರಿಶೋಧನೆಗೂ ಒಳಗಾಗಬೇಕು ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net