ಗಂಭೀರ್​ ಪ್ರಯೋಗಗಳಿಗೆ ಬ್ರೇಕ್​​? ಟಿ20 ಸರಣಿ ಸೋಲುಗಳ ಬೆನ್ನಲ್ಲೇ ಬಿಸಿಸಿಐ ಕಟು ನಿರ್ಧಾರ

ಶ್ರೇಯಸ್​ ಅಯ್ಯರ್​, ಗೌತಮ್ ಗಂಭೀರ್​
ಶ್ರೇಯಸ್​ ಅಯ್ಯರ್​, ಗೌತಮ್ ಗಂಭೀರ್​
Published on

ಪ್ರಮುಖ ಮುಖ್ಯಾಂಶಗಳು

  • ಐರ್ಲೆಂಡ್​ ಎದುರು ಪ್ರಪ್ರಥಮ ಬಾರಿಗೆ ಟಿ20 ಸರಣಿ ಸೋಲು
  • ಈಗ ಇಂಗ್ಲೆಂಡ್​ ವಿರುದ್ಧವು ಸರಣಿ ಸೋತ ಶ್ರೇಯಸ್​ ಅಯ್ಯರ್​ ಪಡೆ
  • ಕ್ಯಾಪ್ಟನ್​ ಶ್ರೇಯಸ್​ ಮತ್ತು ಗಂಭೀರ್​ಗೆ ಬಿಸಿಸಿಐ ಡ್ರಿಲ್​
ನವದೆಹಲಿ: ಐರ್ಲೆಂಡ್​ ಎದುರು ಎರಡು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್​ ಸ್ವೀಪ್​ ಮೂಲಕ ಸೋತ ಭಾರತ, ಬಿಸ್ಟಾಲ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿಯೂ ಸೋತು, ಸರಣಿ ಕೈಚೆಲ್ಲಿದ ಟೀಮ್ ಇಂಡಿಯಾ ಆಟಗಾರರು ಮತ್ತು ಕೋಚಿಂಗ್ ಪಡೆ ವಿರುದ್ಧ ಬಿಸಿಸಿಐ ಕೆರಳಿದೆ.
2019ರ ನಂತರ ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾರತದ ಸೋಲು ಇದೇ ಮೊದಲು. ಈ ಸರಣಿ ಹೀನಾಯ ಸೋಲುಗಳು ಹೆಡ್​ ಕೋಚ್ ಗೌತಮ್ ಗಂಭೀರ್ ಅವರ ಒಪ್ಪಂದಕ್ಕೆ ಈಗ ದೊಡ್ಡ ಮುಳ್ಳಾಗಿದೆ. ಗೌತಿ ಮತ್ತು ಬಿಸಿಸಿಐ ನಡುವಿನ ಒಪ್ಪಂದ ಮುಂದಿನ ವರ್ಷದವರೆಗೆ ಇದ್ದರೂ, ಇತ್ತೀಚಿನ ಕಳಪೆ ಪ್ರದರ್ಶನ ಮಂಡಳಿಯು ಬ್ಯಾಟಿಂಗ್ ಯೂನಿಟ್​ ಮಾತ್ರವಲ್ಲದೆ ಸಂಪೂರ್ಣ ಕೋಚಿಂಗ್ ಸೆಟಪ್‌ನ ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಗೌತಮ್ ಗಂಭೀರ್ ಅವರನ್ನು ಜವಾಬ್ದಾರಿಯಿಂದ ಕೆಳಗಿಳಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಈ ವಿಷಯವನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ, ಸರಣಿ ಸೋಲಿನ ಹಿನ್ನೆಲೆಯಲ್ಲಿ ಬದಲಾವಣೆ ಮಾಡುವುದು ಅನಿವಾರ್ಯ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ. "ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ನಮಗೆ ತುಂಬಾ ಬೇಸರವಿದೆ. ಸರಣಿ ಮುಗಿದ ನಂತರ, ನ್ಯೂನತೆಗಳು ಎಲ್ಲಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಕ್ಯಾಪ್ಟನ್​ ಮತ್ತು ಹೆಡ್​ಕೋಚ್ ಜತೆಗೆ​ ಪರಿಶೀಲನಾ ಸಭೆ ಕೈಗೊಳ್ಳುತ್ತೇವೆ" ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
ಮತ್ತೊಂದೆಡೆ, ಈ ಸರಣಿಯಲ್ಲಿ ಬ್ಯಾಕ್​ ಟು ಬ್ಯಾಕ್​ ಫ್ಲಾಪ್​ ಶೋ ತೋರಿದ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಅವರ ಪ್ರದರ್ಶನದ ಬಗ್ಗೆಯೂ ಬಿಸಿಸಿಐ ಅತೃಪ್ತಿ ಹೊಂದಿದೆ. ಪ್ರತಿ ಬಾಲ್​ನಲ್ಲೂ ಸಿಕ್ಸರ್‌ಗಳನ್ನು ಹೊಡೆಯುವ ಉದ್ದೇಶದಿಂದ ಮೈದಾನಕ್ಕಿಳಿಯುವುದು ತಂಡವನ್ನು ತೊಂದರೆಗೆ ಸಿಲುಕಿಸುತ್ತದೆ ಎಂದು ಮ್ಯಾನೇಜ್‌ಮೆಂಟ್ ಭಾವಿಸಿದೆ. ಇವರೊಂದಿಗೆ ಬ್ಯಾಟರ್ ತಿಲಕ್ ವರ್ಮಾ ಅವರ ಫಾರ್ಮ್ ಮೇಲೆಯೂ ಮಂಡಳಿ ಕಣ್ಣಿಟ್ಟಿದೆ.
ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟ ಮಾಜಿ ನಾಯಕ ಸೂರ್ಯಕುಮಾರ್ ಯಾದವ್​ರನ್ನು ಹೇಗೆ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದರು ಎಂಬ ಕಾರಣಕ್ಕೆ ತಂಡದಿಂದ ಕೈಬಿಡಲಾಯಿತೋ, ಅಂತೆಯೇ ಈಗ ಯಾರೆಲ್ಲ ಫ್ಲಾಪ್​ ಶೋ​ ತೋರಿದ್ದಾರೋ, ಆ ಆಟಗಾರರ ವಿರುದ್ಧ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಆಯ್ಕೆಗಾರರು ಪರೋಕ್ಷವಾಗಿ ಹೇಳಿರುವುದು ಗಮನಾರ್ಹ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net