ಇದೆಂಥಾ ನಾಚಿಕೆಗೇಡು... ಹೇಡಿತನ ತೋರಿದ ಪಾಕ್​ಗೆ ಬಾಂಗ್ಲಾದಿಂದ ಈ ಮಾತೇ? | T20 World Cup

ಐಸಿಸಿ ಟಿ20 ವಿಶ್ವಕಪ್​ ವಿವಾದ
ಐಸಿಸಿ ಟಿ20 ವಿಶ್ವಕಪ್​ ವಿವಾದ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್-2026ರ ಮೆಗಾ ಟೂರ್ನಮೆಂಟ್ ಇನ್ನೂ ಮೂರು ದಿನಗಳಲ್ಲಿ ಆರಂಭವಾಗಲಿದೆ
  • ಫೆ. 7ರಂದು ಆರಂಭವಾಗಲಿರುವ ಈ ಟೂರ್ನಿ ಮಾರ್ಚ್ 8 ರವರೆಗೆ ನಡೆಯಲಿದೆ
  • ಪಾಕಿಸ್ತಾನ ನಡೆಗೆ ಬಾಂಗ್ಲಾ ಮೆಚ್ಚುಗೆ
ನವದೆಹಲಿ: ಟಿ20 ವಿಶ್ವಕಪ್-2026ರ ಮೆಗಾ ಟೂರ್ನಮೆಂಟ್​ಗೆ ದಿನಗಣನೆ ಆರಂಭವಾಗಿದ್ದು, ಫೆ.7ರಿಂದ ಮಾರ್ಚ್ 8 ರವರೆಗೆ ಟೂರ್ನಿ ನಡೆಯಲಿದೆ. ಭಾರೀ ವಿವಾದದ ನಡುವೆ ಇದೇ ಫೆ.15ರಂದು ನಡೆಯಬೇಕಿರುವ ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೇಜ್​ ಪಂದ್ಯ ಸದ್ಯ ಬಹುತೇಕ ಅನುಮಾನವಾಗಿದೆ. ಇದಕ್ಕೆ ಕಾರಣ, ಪಂದ್ಯವನ್ನು ಬಹಿಷ್ಕರಿಸಿರುವ ಪಿಸಿಬಿ. ಟೀಮ್ ಇಂಡಿಯಾ ವಿರುದ್ಧ ಆಡುವುದಿಲ್ಲ ಎಂದಿರುವ ಪಾಕ್​ಗೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಬಾಂಗ್ಲಾ ತಂಡದಿಂದ ಮೆಚ್ಚುಗೆ ಸಿಕ್ಕಿದೆ.
ವಿಶ್ವಕಪ್​ ಟೂರ್ನಿ ಆರಂಭಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿರುವಾಗ ಅತ್ತ ಪಾಕಿಸ್ತಾನ ಮಾಡುತ್ತಿರುವ ಹೈಡ್ರಾಮಾ ಇನ್ನಷ್ಟು ಹದಗೆಡುತ್ತಿದೆ. ಭಾರತ ವಿರುದ್ಧ ನಾವು ಪಂದ್ಯವನ್ನು ಆಡುವುದಿಲ್ಲ. ಬದಲಿಗೆ ಬಹಿಷ್ಕರಿಸಿದ್ದೇವೆ ಎಂದಿರುವ ಪಾಕಿಸ್ತಾನದ ಬೆಂಬಲಕ್ಕೆ ನಿಂತಿರುವ ಬಾಂಗ್ಲಾದೇಶ, ಪಾಕ್​ ನಿರ್ಧಾರವನ್ನು ಮೆಚ್ಚಿ ಮಾತನಾಡಿದೆ.
ಈ ಬಗ್ಗೆ ಬಾಂಗ್ಲಾದೇಶದ ಯುವ ಮತ್ತು ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಪ್ರತಿಕ್ರಿಯಿಸಿ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಬಾಂಗ್ಲಾದೇಶವನ್ನು ಟೂರ್ನಿಯಿಂದ ಹೊರಗಿಟ್ಟ ನಿರ್ಧಾರವನ್ನು ವಿರೋಧಿಸಿ, ಟೀಮ್ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಡೆಯು ಏಕತೆಯ ಸಂಕೇತ ಎಂದು ಹೇಳಿದ್ದಾರೆ. ಈ ಮೂಲಕ ಹೇಡಿತನ ತೋರಿದ ಪಾಕ್​ಗೆ ಬಾಂಗ್ಲಾ ಬೆನ್ನು ತಟ್ಟಿದೆ.
ಇನ್ನು ಭಾರತ ವಿರುದ್ಧ ನಮ್ಮ ತಂಡ ಯಾವುದೇ ಕಾರಣಕ್ಕೂ ಮೈದಾನಕ್ಕಿಳಿಯಲ್ಲ ಎಂದಿರುವ ಪಾಕಿಸ್ತಾನದ ನಿಲುವಿಗೆ ಕ್ರಿಕೆಟ್​ ಪ್ರಿಯರಿಗೆ ವ್ಯಾಪಕ ಛೀಮಾರಿ ವ್ಯಕ್ತವಾಗುತ್ತಿವೆ. ಪಾಕ್​ ಸರ್ಕಾರದ ನಿರ್ಧಾರಕ್ಕೆ ಐಸಿಸಿ ಕೂಡ ವಾರ್ನಿಂಗ್ ನೀಡಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಅಧಿಕೃತ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ. ಅರ್ಹತೆ ಪಡೆದ ಪ್ರತಿಯೊಂದು ತಂಡವು ನಿಗದಿಪಡಿಸಿರುವ ವೇಳಾಪಟ್ಟಿಯ ಪ್ರಕಾರ ಸಮಾನವಾಗಿ ಸ್ಪರ್ಧಿಸಬೇಕು ಎಂದಿದೆ.
ಪಂದ್ಯ ಆಡೋದಿಲ್ಲ ಎಂದು ಬಹಿಷ್ಕರಿಸುವ ಇಂಥಾ ನಿರ್ಧಾರಗಳು ಪಾಕಿಸ್ತಾನಿ ಕ್ರಿಕೆಟ್ ಮೇಲೆ ಮಾತ್ರವಲ್ಲದೆ ಇಡೀ ಅಂತಾರಾಷ್ಟ್ರೀಯ ಕ್ರಿಕೆಟ್ ವ್ಯವಸ್ಥೆಯ ಮೇಲೂ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂದು ಐಸಿಸಿ ಎಚ್ಚರಿಸಿದೆ. ಈ ವಿಷಯದ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವಂತೆ ಪಿಸಿಬಿಗೆ ಮಹತ್ವದ ಸಲಹೆಯನ್ನೇ ನೀಡಿದೆ. ಭಾರತ-ಪಾಕ್​ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಕೊನೆ ಕ್ಷಣದಲ್ಲಿ ತನ್ನ ನಿರ್ಧಾರವನ್ನು ಬದಲಿಸಲಿದ್ಯಾ ಪಿಸಿಬಿ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net