ನವದೆಹಲಿ: ಪಾಕಿಸ್ತಾನದೊಂದಿಗೆ ಯಾವುದೇ ಕ್ರೀಡೆಯಲ್ಲಿ ದ್ವಿಪಕ್ಷೀಯ ಸರಣಿಗಳನ್ನು (bilateral sports) ಆಡಲು ಅವಕಾಶವಿಲ್ಲ. ಬಹುರಾಷ್ಟ್ರಗಳು ಪಾಲ್ಗೊಳ್ಳುವ ಕ್ರೀಡಾಕೂಟಗಳಲ್ಲಿ ಮಾತ್ರ ಪಾಕಿಸ್ತಾನದ ವಿರುದ್ಧ ಆಡಲು ವಿನಾಯಿತಿ ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವಾಲಯ (Sports Ministry) ಬುಧವಾರ ಪುನರುಚ್ಚರಿಸಿದೆ. ಈ ಮೂಲಕ ಕಳೆದ ವರ್ಷ ಪಾಕ್ ಮೇಲೆ ಹೇರಿದ್ದ ಕ್ರೀಡಾ ಸಂಬಂಧಗಳ ನಿರ್ಬಂಧ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ. ಕ್ರೀಡಾಪಟುಗಳು, ತಂಡ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಆಡಳಿತಾಧಿಕಾರಿಗಳ ವೀಸಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.