ಭಾರತದಲ್ಲಿ ಟೆನಿಸ್ ಪ್ರತಿಭೆಗಳ ಪೋಷಣೆಗೆ ಎಸಿಕ್ಸ್ - ರೋಹನ್ ಬೋಪಣ್ಣ ಅಕಾಡೆಮಿ ಜಂಟಿ ಒಪ್ಪಂದ

ಭಾರತದಲ್ಲಿ ಟೆನಿಸ್ ಪ್ರತಿಭೆಗಳ ಪೋಷಣೆಗೆ ಎಸಿಕ್ಸ್ - ರೋಹನ್ ಬೋಪಣ್ಣ ಅಕಾಡೆಮಿ ಜಂಟಿ ಒಪ್ಪಂದ
ಭಾರತದಲ್ಲಿ ಟೆನಿಸ್ ಪ್ರತಿಭೆಗಳ ಪೋಷಣೆಗೆ ಎಸಿಕ್ಸ್ - ರೋಹನ್ ಬೋಪಣ್ಣ ಅಕಾಡೆಮಿ ಜಂಟಿ ಒಪ್ಪಂದ
Published on

ಬೆಂಗಳೂರು: ಭಾರತದಲ್ಲಿ ಟೆನಿಸ್ ಕ್ರೀಡೆಯನ್ನು ಉತ್ತೇಜಿಸುವ ಮತ್ತು ಯುವ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ನಿಟ್ಟಿನಲ್ಲಿ, ಜಪಾನ್ ಮೂಲದ ಪ್ರಸಿದ್ಧ ಜಾಗತಿಕ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಎಸಿಕ್ಸ್ ಹಾಗೂ ರೋಹನ್ ಬೋಪಣ್ಣ ಟೆನಿಸ್ ಅಕಾಡೆಮಿ (ಆರ್ ಬಿ ಟಿ ಎ) ನಡುವೆ ಮಹತ್ವದ ಸಹಭಾಗಿತ್ವ ನಡೆದಿದೆ.

ವೃತ್ತಿಪರ ಹಾಗೂ ಉದಯೋನ್ಮುಖ ಕ್ರೀಡಾಪಟುಗಳಿಗೆ ಉಜ್ವಲ ಭವಿಷ್ಯ ರೂಪಿಸಲು ಸಹಯೋಗವು ವೇದಿಕೆ ಕಲ್ಪಿಸಲಿದೆ. ಕ್ರೀಡಾ ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರದಲ್ಲಿ ಎಸಿಕ್ಸ್ ಹೊಂದಿರುವ ಜಾಗತಿಕ ಪರಿಣತಿಯನ್ನು ರೋಹನ್ ಬೋಪಣ್ಣ ಅಕಾಡೆಮಿಯ ಸುಸಜ್ಜಿತ ತರಬೇತಿ ವ್ಯವಸ್ಥೆಯೊಂದಿಗೆ ಒಗ್ಗೂಡಿಸಿ, ಕ್ರೀಡಾಪಟುಗಳಿಗೆ ಅತ್ಯುತ್ತಮ ಹಾಗೂ ವ್ಯವಸ್ಥಿತ ಮಾರ್ಗದರ್ಶನ ನೀಡಲು ಉದ್ದೇಶಿಸಲಾಗಿದೆ.

ಸ್ವಸ್ಥ ಶರೀರ, ಸ್ವಸ್ಥ ಮನಸ್ಸು (ಸೌಂಡ್ ಮೈಂಡ್, ಸೌಂಡ್ ಬಾಡಿ) ಎಂಬ ತತ್ವದಿಂದ ಪ್ರೇರಿತವಾದ ಪಾಲುದಾರಿಕೆಯು ಕ್ರೀಡಾಪಟುಗಳ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಲಿದೆ. ಆಟಗಾರರ ಕ್ರೀಡಾ ಪ್ರದರ್ಶನ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಪ್ರಗತಿಯನ್ನು ಇದು ಗುರಿಯಾಗಿಸಿಕೊಂಡಿದೆ. ಒಪ್ಪಂದದ ಭಾಗವಾಗಿ, ಆಟಗಾರರಿಗೆ ಅತ್ಯುತ್ತಮ ಕ್ರೀಡಾ ಉತ್ಪನ್ನಗಳನ್ನು ಒದಗಿಸುವುದು, ಕ್ರೀಡಾ ತಂತ್ರಜ್ಞಾನಗಳ ಬಗ್ಗೆ ಶಿಕ್ಷಣ ನೀಡುವುದು, ಟೆನಿಸ್ ಕ್ಲಿನಿಕ್‌ ಗಳು, ಮಾಸ್ಟರ್‌ ಕ್ಲಾಸ್‌ ಗಳು ಹಾಗೂ ಟೂರ್ನಿಗಳ ಆಯೋಜನೆಗೆ ಎಸಿಕ್ಸ್ ಬೆಂಬಲ ನೀಡಲಿದೆ. ಇದರೊಂದಿಗೆ ಎಸಿಕ್ಸ್ ನೆಟ್‌ ವರ್ಕ್‌ ನಲ್ಲಿರುವ ಅಂತಾರಾಷ್ಟ್ರೀಯ ಮಟ್ಟದ ಗಣ್ಯ ಕ್ರೀಡಾಪಟುಗಳೊಂದಿಗೆ ಮುಕ್ತ ಸಂವಾದ ನಡೆಸುವ ಸುವರ್ಣ ಅವಕಾಶವೂ ಯುವ ಆಟಗಾರರಿಗೆ ಲಭ್ಯವಾಗಲಿದೆ. ಇದರ ಜೊತೆಗೆ, ರೋಹನ್ ಬೋಪಣ್ಣ ಅಕಾಡೆಮಿಯ ಹೈ-ರ್ಫಾರ್ಮೆನ್ಸ್ ಮತ್ತು ಜೂನಿಯರ್ ಪ್ರೊ ಕಾರ್ಯಕ್ರಮಗಳ ಮೂಲಕ ಭರವಸೆಯ ಯುವ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಕ್ರೀಡಾಪಟುಗಳ ದೀರ್ಘಕಾಲೀನ ಕ್ರೀಡಾ ವೃತ್ತಿಜೀವನಕ್ಕೆ ಬೆಂಬಲ ನೀಡಲಾಗುತ್ತದೆ.

ಎಸಿಕ್ಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಜತ್ ಖುರಾನಾ ಅವರು, "ನಮ್ಮ ಪ್ರಮುಖ ಕ್ರೀಡಾ ವಿಭಾಗಗಳಲ್ಲಿ ಟೆನಿಸ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದೆ. ಭಾರತದಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವವರ ಮತ್ತು ಕ್ರೀಡೆಯನ್ನು ವೃತ್ತಿಜೀವನವನ್ನಾಗಿ ಸ್ವೀಕರಿಸಲು ಬಯಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ರೋಹನ್ ಬೋಪಣ್ಣ ಅಕಾಡೆಮಿ (ಆರ್ ಬಿ ಟಿ ) ಜೊತೆಗಿನ ಸಹಯೋಗದ ಮೂಲಕ ನಮ್ಮ ದೀರ್ಘಕಾಲದ ಬಾಂಧವ್ಯವನ್ನು ತಳಮಟ್ಟದ ಪ್ರತಿಭೆಗಳಿಗೆ ಬೆಂಬಲ ನೀಡುವ ಸುವರ್ಣ ಅವಕಾಶವನ್ನಾಗಿ ಪರಿವರ್ತಿಸುತ್ತಿದ್ದೇವೆ.

ನಮ್ಮ ಸ್ವಸ್ಥ ಶರೀರ, ಸ್ವಸ್ಥ ಮನಸ್ಸು ತತ್ವದಡಿ ಯುವ ಆಟಗಾರರಿಗೆ ವಿಶ್ವದರ್ಜೆಯ ಕ್ರೀಡಾ ಉತ್ಪನ್ನಗಳು, ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಭಾರತೀಯ ಟೆನಿಸ್ ಕ್ಷೇತ್ರವನ್ನು ಬಲಪಡಿಸುವುದು ನಮ್ಮ ಉದ್ದೇಶವಾಗಿದೆ. ಜಂಟಿಯಾಗಿ ಭಾರತೀಯ ಟೆನಿಸ್‌ನ ಭವಿಷ್ಯಕ್ಕೆ ಮಹತ್ವದ ಕೊಡುಗೆ ನೀಡುವ ಜೊತೆಗೆ ಮುಂದಿನ ಪೀಳಿಗೆಯ ಚಾಂಪಿಯನ್‌ಗಳನ್ನು ಉತ್ತೇಜಿಸುವ ಭರವಸೆ ನಮ್ಮದಾಗಿದೆ" ಎಂದು ಹೇಳಿದರು.

ಪಾಲುದಾರಿಕೆ ಕುರಿತು ಹರ್ಷ ವ್ಯಕ್ತಪಡಿಸಿದ ರೋಹನ್ ಬೋಪಣ್ಣ ಟೆನಿಸ್ ಅಕಾಡೆಮಿಯ (ಆರ್ ಬಿ ಟಿ ) ಸಂಸ್ಥಾಪಕ ಹಾಗೂ ಮಾರ್ಗದರ್ಶಕ ರೋಹನ್ ಬೋಪಣ್ಣ ಅವರು, "ನಾನು ಹಲವು ವರ್ಷಗಳಿಂದ ಎಸಿಕ್ಸ್ ಸಂಸ್ಥೆಯೊಂದಿಗೆ ಒಡನಾಟ ಹೊಂದಿದ್ದೇನೆ. ಸಮಾನ ಚಿಂತನೆಗಳ ಆಧಾರದ ಮೇಲೆ ಬೆಳೆದುಬಂದ ನಮ್ಮ ಬಾಂಧವ್ಯದ ಮುಂದುವರಿದ ಭಾಗವಾಗಿ ಒಪ್ಪಂದ ಮೂಡಿಬಂದಿದೆ. ಕ್ರೀಡಾ ಜೀವನದಲ್ಲಿ ದೀರ್ಘಕಾಲೀನ ಯಶಸ್ಸು ಸಿಗಬೇಕಾದರೆ ಸರಿಯಾದ ಮಾನಸಿಕ ದೃಢತೆ, ದೈಹಿಕ ಸಿದ್ಧತೆ ಮತ್ತು ಬಲವಾದ ಬೆಂಬಲ ವ್ಯವಸ್ಥೆ ಅತ್ಯಗತ್ಯ ಎಂಬುದನ್ನು ನನ್ನ ವೃತ್ತಿಜೀವನದಿಂದ ಕಲಿತಿದ್ದೇನೆ.

ನಮ್ಮ ಅಕಾಡೆಮಿಯಲ್ಲಿ ಯುವ ಆಟಗಾರರು ಕೇವಲ ಟೆನಿಸ್ ಆಡುವುದನ್ನು ಮಾತ್ರ ಕಲಿಯದೆ, ಉನ್ನತ ಮಟ್ಟದಲ್ಲಿ ಯಶಸ್ವಿಯಾಗಲು ಬೇಕಾದ ಶಿಸ್ತು, ಕಠಿಣ ಪರಿಶ್ರಮ ಮತ್ತು ವೃತ್ತಿಪರತೆಯನ್ನು ಬೆಳೆಸಿಕೊಳ್ಳುವ ವಾತಾವರಣ ನಿರ್ಮಿಸುವುದು ನಮ್ಮ ಗುರಿಯಾಗಿದೆ. ಎಸಿಕ್ಸ್‌ ಜಾಗತಿಕ ಪರಿಣತಿ ಮತ್ತು ಹೊಸತನವು ನಮ್ಮ ತರಬೇತಿ ಶೈಲಿಗೆ ಪೂರಕವಾಗಿದೆ. ಉದಯೋನ್ಮುಖ ಆಟಗಾರರಿಗೆ ಅಗತ್ಯವಿರುವ ತಂತ್ರಜ್ಞಾನ ಹಾಗೂ ಪ್ರೋತ್ಸಾಹವನ್ನು ಒದಗಿಸುವ ಮೂಲಕ ಭಾರತೀಯ ಟೆನಿಸ್‌ನ ಭವಿಷ್ಯವನ್ನು ಉಜ್ವಲಗೊಳಿಸಲು ನಾವಿಬ್ಬರೂ ಜೊತೆಯಾಗಿ ಶ್ರಮಿಸಲಿದ್ದೇವೆ" ಎಂದು ತಿಳಿಸಿದರು.

ಕಳೆದ ದಶಕದಲ್ಲಿ ಆರ್‌ಬಿಟಿಎ ಭಾರತದ ಪ್ರಮುಖ ಟೆನಿಸ್ ಅಕಾಡೆಮಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಎಸಿಕ್ಸ್ ಜೊತೆಗಿನ ಪಾಲುದಾರಿಕೆಯು ತಾಂತ್ರಿಕ ತರಬೇತಿಯನ್ನು ಅತ್ಯಾಧುನಿಕ ಕ್ರೀಡಾ ಪರಿಕರಗಳು ಮತ್ತು ಕ್ರೀಡಾಪಟುಗಳ ಶಿಕ್ಷಣದೊಂದಿಗೆ ಸಂಯೋಜಿಸಲಿದ್ದು, ಸಮಗ್ರ ತರಬೇತಿ ವ್ಯವಸ್ಥೆಯನ್ನು ಒದಗಿಸುವ ಅಕಾಡೆಮಿಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net