ಆಶಸ್ ಟೆಸ್ಟ್: ಮೊದಲ ದಿನ ವೇಗಿಗಳ ಪಾರಮ್ಯ, ಆಂಗ್ಲರಿಗೆ ಸ್ಟಾರ್ಕ್, ಆಸೀಸ್‌ಗೆ ಸ್ಟೋಕ್ಸ್ ಬ್ರೇಕ್
ವೇಗಿ ಮಿಚೆಲ್ ಸ್ಟಾರ್ಕ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಒಂದೇ ದಿನ 19 ವಿಕೆಟ್ ಪತನ
ಆಸೀಸ್‌ಗೆ ಇನಿಂಗ್ಸ್ ಹಿನ್ನಡೆಯ ಭೀತಿ
ಪರ್ತ್: ಆತಿಥೇಯ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯ 100 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಂದ್ಯದ ಮೊದಲ ದಿನ ಒಟ್ಟು 19 ವಿಕೆಟ್ ಪತನಗೊಂಡವು. ಆಪ್ಟಸ್ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್‌ಗಳು ಪಾರಮ್ಯ ಮೆರೆದಿದ್ದು, ಆಸೀಸ್ ತಂಡ ಇನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಂಗ್ಲರು, ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (58ಕ್ಕೆ 7) ಮಾರಕ ಬೌಲಿಂಗ್ ದಾಳಿಗೆ ನಿರುತ್ತರಾದರು. ಉಪನಾಯಕ ಹ್ಯಾರಿ ಬ್ರೂಕ್ (52 ರನ್, 61 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಒಲಿ ಪೋಪ್ (46 ರನ್, 58 ಎಸೆತ, 4 ಬೌಂಡರಿ) ಆಸರೆಯಲ್ಲಿ ಚಹಾ ವಿರಾಮಕ್ಕೂ ಮುನ್ನ 32.5 ಓವರ್‌ಗಳಲ್ಲಿ 172 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. 12 ರನ್‌ಗಳ ಅಂತರದಲ್ಲಿ ಅಂತಿಮ ಐದು ವಿಕೆಟ್ ಕೈಚೆಲ್ಲಿದ ನಡುವೆಯೂ ಆಂಗ್ಲರು ‘ಬಾಜ್‌ಬಾಲ್’ ಆಕ್ರಮಣ ಚಾಲ್ತಿಯಲ್ಲಿಟ್ಟರು. ಬೆನ್ ಸ್ಟೋಕ್ಸ್ ಪಡೆ ಬ್ಯಾಟರ್‌ಗಳು ಪ್ರತಿ ಓವರ್‌ಗೆ 5.23ರ ಸರಾಸರಿಯಲ್ಲಿ ರನ್ ಸೇರಿಸಿದರು.
ಇದಕ್ಕೆ ಪ್ರತಿಯಾಗಿ ಬೆನ್ ಸ್ಟೋಕ್ಸ್ (23ಕ್ಕೆ 5) ದಿನದಂತ್ಯಕ್ಕೆ ನೀಡಿದ ತಿರುಗೇಟಿಗೆ ತತ್ತರಿಸಿದ ಆಸೀಸ್ 39 ಓವರ್‌ಗಳಲ್ಲಿ 9 ವಿಕೆಟ್‌ಗೆ 123 ರನ್ ಪೇರಿಸಿದ್ದು, ಇನ್ನೂ 49 ರನ್ ಹಿನ್ನಡೆಯಲ್ಲಿದೆ. ಮೊದಲ ದಿನ 51,531 ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಹಾಜರಿದ್ದರು.
ಇಂಗ್ಲೆಂಡ್: 32.5 ಓವರ್‌ಗಳಲ್ಲಿ 172 (ಡಕೆಟ್ 21, ಪೋಪ್ 46, ರೂಟ್ 0, ಬ್ರೂಕ್ 52, ಸ್ಟೋಕ್ಸ್ 6, ಜೆ. ಸ್ಮಿತ್ 33, ಅಟ್ಕನ್‌ಸನ್ 1, ಕರ್ಸ್ 6, ಸ್ಟಾರ್ಕ್ 58ಕ್ಕೆ 7, ಡಗ್ಗೆಟ್ 27ಕ್ಕೆ 2).
ಆಸ್ಟ್ರೇಲಿಯಾ: 39 ಓವರ್‌ಗಳಲ್ಲಿ 9 ವಿಕೆಟ್‌ಗೆ 123 (ಲಬುಶೇನ್ 9, ಸ್ಮಿತ್ 17, ಖವಾಜ 2, ಟ್ರಾವಿಸ್ ಹೆಡ್ 21, ಗ್ರೀನ್ 24, ಕ್ಯಾರಿ 26, ಸ್ಟಾರ್ಕ್ 12, ಬೆನ್ ಸ್ಟೋಕ್ಸ್ 23ಕ್ಕೆ 5, ಆರ್ಚರ್ 11ಕ್ಕೆ 2).
19. ಆಶಸ್ ಟೆಸ್ಟ್ ಸರಣಿಯ ಪಂದ್ಯವೊಂದರ ಮೊದಲ ದಿನ ಉರುಳಿದ ಗರಿಷ್ಠ ವಿಕೆಟ್‌ಗಳ ಸಂಖ್ಯೆ ಇದಾಗಿದೆ. 2001ರ ಟ್ರೆಂಟ್‌ಬಿಡ್ಜ್ ಹಾಗೂ 2005ರ ಲಾರ್ಡ್ಸ್ ಟೆಸ್ಟ್‌ನಲ್ಲಿ ತಲಾ 17 ವಿಕೆಟ್ ಪತನಗೊಂಡಿದ್ದು, ಹಿಂದಿನ ದಾಖಲೆ.
1. ಸ್ಟಾರ್ಕ್-ಸ್ಟೋಕ್ಸ್ 2005ರ ಬಳಿಕ ಟೆಸ್ಟ್ ಮೊದಲ ದಿನ ಐದು ವಿಕೆಟ್ ಗೊಂಚಲು ಪಡೆದ ಮೊದಲ ಜೋಡಿ. ಹರ್ಮಿಸನ್-ಮೆಕ್‌ಗ್ರಾತ್ ಲಾರ್ಡ್‌ನಲ್ಲಿ ಕೊನೆಯದಾಗಿ ಈ ಸಾಧನೆ ಮಾಡಿದ್ದ ಜೋಡಿ.