ಭಾರತ vs ಜಿಂಬಾಬ್ವೆ ನಡುವಿನ ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಚೆಪಾಕ್‌ನಲ್ಲಿ ಕೆಮಿಕಲ್​ ಸಿಂಪಡನೆ! ಅಚ್ಚರಿ ಕಾರಣ ಇಲ್ಲಿದೆ... T20 World Cup 2026

ಚೆಪಾಕ್‌ ಸ್ಟೇಡಿಯಂನಲ್ಲಿ ಕೆಮಿಕಲ್​ ಸಿಂಪಡನೆ! T20 World Cup 2026
ಚೆಪಾಕ್‌ ಸ್ಟೇಡಿಯಂನಲ್ಲಿ ಕೆಮಿಕಲ್​ ಸಿಂಪಡನೆ! T20 World Cup 2026
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯಲಿದೆ ನಿರ್ಣಾಯಕ ಪಂದ್ಯ
  • ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯಕ್ಕೆ ಚೆನ್ನೈನ ಚೆಪಾಕ್ ಕ್ರೀಡಾಂಗಣ ವೇದಿಕೆ
  • ಈ ಪಂದ್ಯದಲ್ಲಿ ಸೋತ ತಂಡವು ಟೂರ್ನಿಯಿಂದಲೇ ಹೊರ ಬೀಳುತ್ತದೆ
  • ಭಾರತ vs ಜಿಂಬಾಬ್ವೆ ನಡುವಿನ ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಚೆಪಾಕ್‌ನಲ್ಲಿ ಕೆಮಿಕಲ್​ ಸಿಂಪಡನೆ
ಚೆನ್ನೈ: ಇಂದು (ಫೆ.26) ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ( T20 World Cup 2026 ) ಟೂರ್ನಿಯ ಸೂಪರ್-8 ಹಂತದ ಪಂದ್ಯದಲ್ಲಿ ಭಾರತವು ಜಿಂಬಾಬ್ವೆ ವಿರುದ್ಧ ಗೆಲುವಿಗಾಗಿ ಸೆಣಸಲಿದೆ. ಈ ಪಂದ್ಯಕ್ಕೂ ಮುನ್ನವೇ ಕ್ರೀಡಾಂಗಣದಲ್ಲಿ ಕೆಮಿಕಲ್​ ಸಿಂಪಡನೆ ಮಾಡಲಾಗಿದೆ. ಇದರ ಹಿಂದಿರುವ ಗುಟ್ಟೇನು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ಅಂದಹಾಗೆ, ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಭಾರಿ ಅಂತರದಿಂದ ಸೋತ ನಂತರವೂ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್​ ಇಂಡಿಯಾ, ಸೆಮಿಫೈನಲ್ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಉಳಿದ ಎರಡೂ ಪಂದ್ಯಗಳನ್ನು ಭಾರಿ ಅಂತರದಲ್ಲಿ ಗೆಲ್ಲುವುದು ಮಾತ್ರವಲ್ಲದೆ, ಕೆಲವು ತಂಡಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ. ಒಟ್ಟಾರೆಯಾಗಿ, ಈ ಹಂತದಲ್ಲಿ ಭಾರತ ಯಾವುದೇ ಎಡವಟ್ಟುಗಳನ್ನು ಮಾಡದೆ ಜಯದತ್ತ ಮುನ್ನುಗ್ಗಬೇಕಿದೆ.
ಭಾರತವು ಚೆಪಾಕ್‌ ಮೈದಾನದಲ್ಲಿ, ಜಿಂಬಾಬ್ವೆ ವಿರುದ್ಧ ರಾತ್ರಿ ವೇಳೆಯಲ್ಲಿ ಪಂದ್ಯವನ್ನು ಆಡುತ್ತದೆ. ಈ ಅವಧಿಯಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಗಣನೀಯ ಪ್ರಮಾಣದ ಇಬ್ಬನಿ ಬೀಳುತ್ತದೆ. ಹಾಗಾಗಿ, ಇದು ಬ್ಯಾಟಿಂಗ್​ಗೆ ಸಹಾಯವಾಗಿ, ಬೌಲಿಂಗ್ ಮಾಡುವ ತಂಡಕ್ಕೆ ತೊಂದರೆ ಉಂಟುಮಾಡುತ್ತದೆ. ಈ ಸವಾಲನ್ನು ಎದುರಿಸಲು ಚೆಪಾಕ್​ ಕ್ರೀಡಾಂಗಣ, ಅಮೆರಿಕದಿಂದ ಆಮದು ಮಾಡಿಕೊಂಡಿರುವ 'ಡ್ಯೂ ಕ್ಯೂರ್' ಎಂಬ ಹೊಸ ರಾಸಾಯನಿಕವನ್ನು ಬಳಸುತ್ತಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.
ಈಗಾಗಲೇ 'ಡ್ಯೂ ಕ್ಯೂರ್' ರಾಸಾಯನಿಕವನ್ನು ಮಂಗಳವಾರ ಮತ್ತು ಬುಧವಾರ ಮೈದಾನದ ಹುಲ್ಲಿನ ಮೇಲೆ ಸಿಂಪಡಿಸಲಾಗಿದೆ. ಇಂದು ಮಧ್ಯಾಹ್ನವೂ ಸಿಂಪಡಿಸುವ ಮೂಲಕ ಭಾರತ ಮತ್ತು ಜಿಂಬಾಬ್ವೆ ನಡುವಿನ ರಾತ್ರಿ ಪಂದ್ಯದ ಸಮಯದಲ್ಲಿ ಇಬ್ಬನಿಯ ಪರಿಣಾಮವನ್ನು ಕಡಿಮೆ ಮಾಡುವ ಕಾರ್ಯ ನಡೆಯಲಿದೆ ಎಂದು ವರದಿಯಾಗಿದೆ.
ಪಂದ್ಯದ ಸಮಯದಲ್ಲಿ ತೇವಾಂಶದ ಮಟ್ಟವು 80 ರಿಂದ 90 ಪ್ರತಿಶತದಷ್ಟು ಇರುತ್ತದೆ ಎಂದು ಊಹಿಸಲಾಗಿದೆ. ಇದರರ್ಥ ಎರಡನೇ ಇನ್ನಿಂಗ್ಸ್‌ ವೇಳೆ ಇಬ್ಬನಿ ಬಿದ್ದು ಬಾಲ್​ ಒದ್ದೆಯಾಗುತ್ತದೆ. ಈ ಸಂಧರ್ಭದಲ್ಲಿ ಸ್ಪಿನ್​ ಬೌಲರ್​ಗಳಿಗೆ ಬೌಲ್​ ಮಾಡಲು ಕಷ್ಟವಾಗುತ್ತದೆ. ಈ ರಾಸಾಯನಿಕ ಸಿಂಪಡಣೆಯಿಂದ ಈ ಸನ್ನಿವೇಶವನ್ನು ನಿಯಂತ್ರಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net